Home ಧಾರ್ಮಿಕ ಸುದ್ದಿ ಶ್ರೀಕೃಷ್ಣ ಮಠಕ್ಕೆ ಮತ್ತೆ ಬಂದಳು ಸುಭದ್ರೆ: ಅದೇ ನೆನಪು, ಅದೇ ಪ್ರೀತಿ

ಶ್ರೀಕೃಷ್ಣ ಮಠಕ್ಕೆ ಮತ್ತೆ ಬಂದಳು ಸುಭದ್ರೆ: ಅದೇ ನೆನಪು, ಅದೇ ಪ್ರೀತಿ

ಆನೆಗೆ ಈಗ ವಿಶೇಷ 'ಆತಿಥ್ಯ', ಹೊಸ 'ಮನೆ'

1421
0
SHARE

ಉಡುಪಿ: ಸುಬ್ಬಿ… ಪುಟ್ಟಾ.. ಬಾರಮ್ಮ… ಇಲ್ಲಿ ಬಾರೆ.. ಎಲ್ಲಿ ಹೋಗಿದ್ಯಾ?. ಪ್ರಶ್ನೆಗಳ ಮೇಲೆ ಪ್ರಶ್ನೆಗಳು. ಅಷ್ಟರಲ್ಲೇ ಲಗುಬಗನೆ ಗೇಟು ಬಳಿ ಬಂದು ಸೊಂಡಿಲೆತ್ತಿ ನಮಿಸುತ್ತಾಳೆ ಸುಭದ್ರೆ.

ಕಳೆದೆರಡು ವರ್ಷಗಳಿಂದ ಖಾಲಿಯಾಗಿದ್ದ ಶ್ರೀಕೃಷ್ಣ ಮಠದ ‘ಆನೆಯ ಮನೆ’ಯಲ್ಲೀಗ ಸಂಭ್ರಮ ಮನೆ ಮಾಡಿದೆ. ಕಾಲಿಗಾದ ಗಾಯವೊಂದು ಉಲ್ಬಣಿಸಿದ ಪರಿಣಾಮವಾಗಿ ಸಕ್ರೆಬೈಲಿನಲ್ಲಿ ಚಿಕಿತ್ಸೆ ಪಡೆದು ಮೊನ್ನೆ ಪರ್ಯಾಯ ಮುನ್ನಾ ದಿನ ಆಗಮಿಸಿ ಮೆರವಣಿಗೆಗೆ ನೇತೃತ್ವ ವಹಿಸಿದ್ದ 26 ವರ್ಷದ ಸುಭದ್ರೆ ಈಗ ಶ್ರೀಕೃಷ್ಣ ಮಠದಲ್ಲಿ ತನಗಾಗಿ ನಿರ್ಮಾಣವಾದ ಹೊಸ ಮನೆ (ಕೋಣೆ)ಯಲ್ಲಿ ಲವಲವಿಕೆಯಿಂದ ಇದ್ದು ಆದರಾಥಿತ್ಯ ಪಡೆಯುತ್ತಿದ್ದಾಳೆ.

ಮರುಕಳಿಸಿದ ನೆನಪು
ಆನೆಯೊಂದಿಗೆ ಹಲವು ವರ್ಷಗಳ ಕಾಲ ಒಡನಾಟವನ್ನಿಟ್ಟುಕೊಂಡಿದ್ದ ಶ್ರೀಕೃಷ್ಣ ಮಠದ ಕಾವಲುಗಾರ ಹಾಗೂ ಇತರ ಹಲವಾರು ಭಕ್ತರು ಕಳೆದ ಐದಾರು ದಿನಗಳಿಂದ ಸುಭದ್ರೆಯ ಕ್ಷೇಮ ವಿಚಾರಿಸುವುದರಲ್ಲಿ ಮಗ್ನರಾಗಿದ್ದಾರೆ. ತಾವು ಈ ಹಿಂದೆ ಕರೆಯುತ್ತಿದ್ದ ಅಡ್ಡ ಹೆಸರಿನಿಂದಲೇ ಪ್ರೀತಿಯಿಂದ ಸುಭದ್ರೆಯನ್ನು ಕರೆಯುತ್ತಿದ್ದಾರೆ. ಸ್ವರ ಕೇಳುತ್ತಲೇ ತುಸು ಪಕ್ಕಕ್ಕೆ ಆಗಮಿಸುವ ಸುಭದ್ರೆ ತನಗೂ ಪರಿಚಯ ಮರೆತು ಹೋಗಿಲ್ಲ ಎಂಬಂತೆ ಸ್ಪಂದಿಸುತ್ತದೆ.

ಈ ಹಿಂದೆ ಗೋಶಾಲೆಯ ಪಕ್ಕದಲ್ಲಿ ಆನೆಯ ಕೊಟ್ಟಿಗೆ ಇತ್ತು. ಈ ಬಾರಿ ಗೀತಾಮಂದಿರದ ಮಹಾದ್ವಾರದ ಬಳಿ ಸುವ್ಯವಸ್ಥಿತವಾದ ಕೋಣೆಯನ್ನು ನಿರ್ಮಿಸಲಾಗಿದೆ. ಅಲ್ಲಿ ಸ್ವತ್ಛತೆಯ ಬಗ್ಗೆ ವಿಶೇಷ ಗಮನ ನೀಡಲಾಗುತ್ತಿದೆ. ಗಾಳಿ, ಬೆಳಕು, ನೀರಿನ ವ್ಯವಸ್ಥೆ ಕೂಡ ಸಮರ್ಪಕವಾಗಿ ದೊರೆಯುವಂತೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ನೆಲವನ್ನು ಕೂಡ ಮಣ್ಣು ಹಾಕಿ ಮೆದುಗೊಳಿಸಲಾಗಿದೆ. ಈ ಕೊಟ್ಟಿಗೆಯನ್ನು ಮತ್ತಷ್ಟು ಸುವ್ಯವಸ್ಥಿತಗೊಳಿಸುವ ಕೆಲಸಗಳು ನಡೆಯುತ್ತಿವೆ.

ಮಾವುತನೇ ಕಾರಣ?
ಈ ಹಿಂದಿನ ಮಾವುತನ ನಿರ್ಲಕ್ಷ್ಯದಿಂದಾಗಿಯೇ ಸುಭದ್ರೆಯ ಕಾಲಿಗೆ ಗಾಯವಾಗಿ ಅದು ಉಲ್ಬಣವಾಗಿತ್ತು. ಅನಂತರ ಪೂರ್ಣ ಉತ್ಸಾಹ ಕಳೆದುಕೊಂಡಿದ್ದ ಸುಭದ್ರೆಯನ್ನು ಚಿಕಿತ್ಸೆಗೆ ಕಳುಹಿಸುವುದು ಅನಿವಾರ್ಯವಾಗಿತ್ತು. ಮಾವುತನ ವಿರುದ್ಧ ಅಗತ್ಯ ಕ್ರಮವನ್ನು ಕೂಡ ತೆಗೆದುಕೊಳ್ಳಲಾಗಿತ್ತು. ಈ ಬಾರಿ ಇಬ್ಬರು ಮಾವುತರನ್ನು ಸಕ್ರೆಬೈಲಿನಿಂದಲೇ ಕರೆಸಿಕೊಳ್ಳಲಾಗಿದೆ. ಹೆಚ್ಚಿನ ಕಾಳಜಿ ವಹಿಸುವಂತೆಯೂ ಸೂಚಿಸಲಾಗಿದೆ.

ಆಹಾರವೇನು?
ದಿನವೊಂದಕ್ಕೆ ಸುಮಾರು 10 ಕೆಜಿಯಷ್ಟು ಅಕ್ಕಿ, 1 ಕೆ.ಜಿಯಷ್ಟು ಸೋಯಾಬಿನ್‌ ಹೆಸರು ಕಾಳು, ಅರ್ಧ ಕೆಜಿಯಷ್ಟು ಬೆಲ್ಲ, ಭತ್ತದ ಹುಲ್ಲು, ಆಲದ ಮರದ ಸೊಪ್ಪೊ, ಬೈನೆ ಸೊಪ್ಪು, ಬಾಳೆದಿಂಡು ಮೊದಲಾದವುಗಳನ್ನು ಆನೆಗೆ ಆಹಾರವಾಗಿ ನೀಡಲಾಗುತ್ತದೆ. ಸೋಯಾಬಿನ್‌, ಹೆಸರುಕಾಳನ್ನು ಹಿಂದಿನ ದಿನ ರಾತ್ರಿ ನೀರಿನಲ್ಲಿ ನೆನೆಸಿ ಮರುದಿನ ಖಾಲಿ ಹೊಟ್ಟೆಗೆ ನೀಡಲು ವನ್ಯಜೀವಿ ವಿಭಾಗದ ವೈದ್ಯರು ಮಾವುತರಿಗೆ ಸೂಚಿಸಿದ್ದಾರೆ. ಆನೆಯ ಚಿಕಿತ್ಸೆಯ ವೆಚ್ಚವನ್ನು ಮಠದಿಂದ ಭರಿಸಲಾಗಿದೆ. ಎರಡು ವರ್ಷಗಳ ಕಾಲ ಭಾರೀ ಸೂಕ್ಷ್ಮವಾಗಿ ಚಿಕಿತ್ಸೆ ನೀಡಿದ್ದೇನೆ. ಅದು ನಾನು ಹೇಳಿದಂತೆ ಕೇಳುತ್ತಿತ್ತು. ಸುಭದ್ರೆಯ ತಾಯಿ ಕೂಡ ಸಕ್ರೆಬೈಲಿನಲ್ಲಿಯೇ ಇದೆ. ನೈಸರ್ಗಿಕ ವಾತಾವರಣ, ತನ್ನ ಒಡನಾಡಿಗಳ ಜತೆಗೆ ಜೀವನ ಸುಭದ್ರೆಗೆ ಖುಷಿ ಕೊಟ್ಟಿತ್ತು. ಈಗ ಗುಣಮುಖವಾಗಿದೆ. ಆದರೆ ಬಾಯಿಯ ಮೂಲಕ ನೀಡುವ ಕೆಲವೊಂದು ಔಷಧಗಳನ್ನು ಪ್ರತಿದಿನ ನೀಡಲೇಬೇಕಾಗಿದೆ. ನಾನು ವಾರಕ್ಕೊಮ್ಮೆ ಉಡುಪಿಗೆ ಬಂದು ಆನೆಯ ಚಿಕಿತ್ಸೆ, ಉಪಚಾರವನ್ನು ನೋಡಿಕೊಳ್ಳುತ್ತಿದ್ದೇನೆ ಎಂದು ಸಕ್ರೆಬೈಲು ಆನೆ ಬಿಡಾರದ ವೈದ್ಯ ಡಾ| ವಿನಯ ಎಸ್‌. ಅವರು ತಿಳಿಸಿದ್ದಾರೆ.

ಶ್ರೀಕೃಷ್ಣನ ಕ್ಷೇತ್ರಕ್ಕೆ ಮತ್ತೆ ಸುಭದ್ರೆ ಬಂದಿದ್ದಾಳೆ. ಅವಳು ಆರೋಗ್ಯದಿಂದ ಇರುವಂತೆ ನೋಡಿಕೊಳ್ಳುವ ಜವಾಬ್ದಾರಿ
ಭಕ್ತರಿಗೂ ಇದೆ.

ತಿಂಡಿ, ನಮಸ್ಕಾರ ಬೇಡ
ಸುಭದ್ರೆಯ ಆರೋಗ್ಯದ ದೃಷ್ಟಿಯಿಂದ ಮಾವುತರು ಅಥವಾ ಆನೆಯನ್ನು ನೋಡಿಕೊಳ್ಳುವ ಜವಾಬ್ದಾರಿ ಹೊಂದಿರುವವರು
ಮಾತ್ರ ನಿರ್ದಿಷ್ಟವಾದ ಆಹಾರವನ್ನು ಒದಗಿಸುತ್ತಾರೆ. ಕ್ಷೇತ್ರಕ್ಕೆ ಆಗಮಿಸುವ ಭಕ್ತರು ಆನೆಗೆ ಬಾಳೆ ಹಣ್ಣು ಸೇರಿದಂತೆ ಯಾವುದೇ ತಿಂಡಿಯನ್ನು ನೀಡದಂತೆ ಮನವಿ ಮಾಡಿಕೊಳ್ಳಲಾಗಿದೆ. ಮಾತ್ರವಲ್ಲದೆ ಆನೆಯಿಂದ ಆಶೀರ್ವಾದದ ರೂಪವಾಗಿ ನಮಸ್ಕಾರ ಹಾಕಿಸದಿರುವಂತೆ ಮಾವುತರಿಗೆ ಸ್ಪಷ್ಟವಾಗಿ ತಿಳಿಸಲಾಗಿದೆ. ಈ ಕುರಿತು ನಿಗಾ ವಹಿಸಲು ಸಿಸಿ ಕೆಮರಾ ಅಳವಡಿಸಲು ನಿರ್ಧರಿಸಲಾಗಿದೆ.

8 ಕಿ.ಮೀ ನಡಿಗೆ, 2 ಗಂಟೆ ಸ್ನಾನ
ಸುಭದ್ರೆಗೆ ದಿನವೊಂದಕ್ಕೆ ಕನಿಷ್ಠ 7-8 ಕಿ.ಮೀ. ನಡಿಗೆ ಅಗತ್ಯವಿದೆ. ಆನೆ ಕೊಟ್ಟಿಗೆಯಲ್ಲಿ ಮಣ್ಣು ಕೂಡ ಅಗತ್ಯ ಪ್ರಮಾಣದಲ್ಲಿ ಇರುವಂತೆ ತಿಳಿಸಿದ್ದೇವೆ. ಸ್ನಾನ ಮಾಡುವ ಸಂದರ್ಭ ಕನಿಷ್ಠ 2 ಗಂಟೆಗಳಷ್ಟು ನೀರಿನಲ್ಲೇ ಬಿಡಬೇಕು. ನಗರದಲ್ಲಿ ನೈಸರ್ಗಿಕ ಪರಿಸರ ಇಲ್ಲದಿರುವುದರಿಂದ ಹೆಚ್ಚಿನ ಕಾಳಜಿ ವಹಿಸುವುದು ಅತ್ಯವಶ್ಯ.
ಡಾ| ವಿನಯ ಎಸ್‌.,
   ವನ್ಯಜೀವಿ ವಿಭಾಗ, ಶಿವಮೊಗ್ಗ

ಸಂತೋಷ್ ಬೊಳ್ಳೆಟ್ಟು

LEAVE A REPLY

Please enter your comment!
Please enter your name here