Home ಧಾರ್ಮಿಕ ಕಾರ್ಯಕ್ರಮ ಶ್ರವಣಬೆಳಗೊಳ: ವಿಶೇಷ ಅಭಿಷೇಕಕ್ಕೂ ಜನಸಾಗರ

ಶ್ರವಣಬೆಳಗೊಳ: ವಿಶೇಷ ಅಭಿಷೇಕಕ್ಕೂ ಜನಸಾಗರ

1969
0
SHARE

ಹಾಸನ: ಶ್ರವಣಬೆಳಗೊಳದ ವಿಂಧ್ಯಗಿರಿಯ ಒಡೆಯ ಶ್ರೀ ಬಾಹುಬಲಿಮೂರ್ತಿಗೆ 88ನೇ ಮಹಾಮಸ್ತಕಾಭಿಷೇಕ ಮುಗಿದ ಅನಂತರದ ಮೊದಲ ವಾರದ ವಿಶೇಷ ಮಹಾಮಜ್ಜನ ಸಂಭ್ರಮದಿಂದ ರವಿವಾರ ನೆರವೇರಿತು.

ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ಕಳಶ ಪಡೆದು ಶ್ರೀ ಬಾಹುಬಲಿ ಮೂರ್ತಿಯ ಮಹಾ ಮಸ್ತಕಕ್ಕೆ ಅಭಿಷೇಕ ನೆರವೇರಿಸಿ ಭಕ್ತಿಯ ಪಾರಮ್ಯ ಮೆರೆದರು. ಮೊದಲ ವಾರದ ವಿಶೇಷ ಮಹಾಮಸ್ತಕಾ ಭಿಷೇಕದಲ್ಲಿ 3,500ಕ್ಕೂ ಹೆಚ್ಚು ಜನರು ಪಾಲ್ಗೊಂಡು ಸಂಭ್ರಮಿಸಿದರು. ಫೆ. 17ರಿಂದ 25ರ ವರೆಗೆ ನವದಿನಗಳ ಅಧಿಕೃತ ಮಹಾಮಸ್ತಕಾಭಿಷೇಕ ಪೂರ್ಣಗೊಂಡಿತ್ತು. ಆದರೆ ಆ ಸಂದರ್ಭದಲ್ಲಿ ಮಹಾಮಸ್ತಕಾಭಿಷೇಕದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದಿದ್ದವರು ವಿಶೇಷ ಮಹಾಮಸ್ತಕಾಭಿಷೇಕದಲ್ಲಿ ಪಾಲ್ಗೊಳ್ಳಬಹುದು. ವಿಶೇಷ ಮಹಾಮಸ್ತಕಾಭಿಷೇಕವನ್ನು ಶ್ರವಣಬೆಳಗೊಳದ ಜೈನ ಮಠವು ನಡೆಸುತ್ತದೆ.

ಮಹಾಮಸ್ತಕಾಭಿಷೇಕ ಆರಂಭಕ್ಕೆ 6 ತಿಂಗಳ ಹಿಂದೆಯೇ ಶ್ರವಣ ಬೆಳಗೊಳದಿಂದ ಮಹಾಮಸ್ತಕಾಭಿಷೇಕ ಆಯೋಜನೆ ಮಾಡಿರುವ ಬಗ್ಗೆ ಪ್ರಭಾವನಾ ಯಾತ್ರೆಯು ರಾಜ್ಯಾದ್ಯಂತ ಸಂಚರಿಸಿತ್ತು. ಮಹಾಮಸ್ತಕಾಭಿಷೇಕದ ಬಗ್ಗೆ ಜಾಗೃತಿ ಮೂಡಿಸಿ ಅಭಿಷೇಕದಲ್ಲಿ ಪಾಲ್ಗೊಳ್ಳ ಬಯಸುವವರಿಗೆ ಯಾತ್ರೆಯ ಸಂದರ್ಭದಲ್ಲಿ ಕಳಸಗಳನ್ನು ವಿತರಿಸಿತ್ತು.

ಅಂದು ಕಳಶ ಪಡೆದುಕೊಂಡಿದ್ದವರು ಫೆ.17ರಿಂದ 25ರ ವರೆಗೆ ನಡೆದ ಮಹಾಮಸ್ತಕಾಭಿಷೇಕದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದಿದ್ದವರು ರವಿವಾರ ವಿಶೇಷ ಮಹಾಮಸ್ತಕಾಭಿಷೇಕದಲ್ಲಿ ಪಾಲ್ಗೊಂಡಿದ್ದರು. ಕಳಶ ಪಡೆದಿದ್ದವರಿಗೆ ಎಸ್‌ಡಿಜೆಎಂ ಆಡಳಿತ ಮಂಡಳಿ 2 ಪಾಸ್‌ ಗಳ ವಿತರಿಸಿ ಕಳಶ, ಪುರುಷರಿಗೆ ಕೇಸರಿ ಬಣ್ಣದ ಪಂಚೆ, ಶಲ್ಯ, ಮಹಿಳೆಯರಿಗೆ ಕೇಸರಿ ಬಣ್ಣದ ಸೀರೆಯ ಕಿಟ್‌ ನ್ನೂ ವಿತರಿಸಿತ್ತು. ವಿಶೇಷ ಮಹಾಮಸ್ತಕಾಭಿಷೇಕದ ಪ್ರಥಮ ದಿನ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವರೆಂದು ನಿರೀಕ್ಷಿಸಿದ್ದ ಎಸ್‌ಡಿಜೆಎಂ ಆಡಳಿತ ಮಂಡಳಿ ವಿಂಧ್ಯಗಿರಿಯ ಅಟ್ಟಣಿಗೆಯಲ್ಲಿ ಕುಳಿತು ಅಭಿಷೇಕವನ್ನು ವೀಕ್ಷಿಸಲು ಪಾಸ್‌ಗಳನ್ನು ವಿತರಿಸಿ ಪಾಸ್‌ ಇದ್ದವರಿಗೆ ಮಾತ್ರ ವಿಂಧ್ಯಗಿರಿ ಪ್ರವೇಶವನ್ನು ಕಡ್ಡಾಯ ಮಾಡಿತ್ತು. ಪೊಲೀಸರೂ ಕೂಡ ಮುಂಜಾಗ್ರತಾ ಕ್ರಮವಾಗಿ
ಶ್ರವಣಬೆಳಗೊಳದ ಮುಖ್ಯರಸ್ತೆಯಲ್ಲಿ ವಾಹನಗಳ ಏಕಮುಖ ಸಂಚಾರ ವ್ಯವಸ್ಥೆ ಮಾಡಿದ್ದರು. ರವಿವಾರದ ರಜೆಯ ಹಿನ್ನೆಲೆಯಲ್ಲಿ ಮಹಾಮಸ್ತಕಾಭಿಷೇಕ ಮುಗಿದ ಅನಂತರವೂ ಸರದಿಯಲ್ಲಿ ನಿಂತು ಮಧ್ಯಾಹ್ನ ವಿಂಧ್ಯಗಿರಿ ಏರಿ ಶ್ರೀ ಬಾಹುಬಲಿ ಮೂರ್ತಿಯ ದರ್ಶನ ಪಡೆದರು.

LEAVE A REPLY

Please enter your comment!
Please enter your name here