Home ಧಾರ್ಮಿಕ ಸುದ್ದಿ ಶ್ರಾವಣ ಮಾಸದಲ್ಲಿ ಚೂಡಿ ಪೂಜೆ ಸಡಗರ

ಶ್ರಾವಣ ಮಾಸದಲ್ಲಿ ಚೂಡಿ ಪೂಜೆ ಸಡಗರ

585
0
SHARE

ಕಾರ್ಕಳ: ಶ್ರಾವಣ ಮಾಸ ಬಂತೆಂದರೆ ಹಬ್ಬಗಳ ಸರಮಾಲೆಯೇ ಬಂದಂತೆ. ಮುತ್ತೈದೆಯರು ಒಟ್ಟುಗೂಡಿ ಆಚರಿಸುವ ವಿಶಿಷ್ಟ ಸಂಪ್ರದಾಯ ಚೂಡಿ ಪೂಜೆ ಇವುಗಳಲ್ಲೊಂದು. ಶ್ರಾವಣ ಮಾಸದಲ್ಲಿ ಬರುವ ಪ್ರತಿ ಶುಕ್ರವಾರ ಹಾಗೂ ಆದಿತ್ಯವಾರ ಗೌಡ ಸಾರಸ್ವತ ಬ್ರಾಹ್ಮಣ ಹಾಗೂ ವಿಶ್ವಕರ್ಮ ಸಮಾಜದಲ್ಲಿ ಈ ಆಚರಣೆ ವಿಶೇಷವಾಗಿ ಕಂಡುಬರುತ್ತದೆ.

ಚೂಡಿ ಪೂಜೆಗೆ ಗರಿಕೆ ಹುಲ್ಲಿನೊಂದಿಗೆ ರಥಪುಷ್ಪ, ಕರವೀರ, ರತ್ನಗಂಧಿ, ಮಿಠಾಯಿ ಹೂವು ಹಾಗೂ ವಿವಿಧ ಸಸ್ಯಗಳಾದ ನೆಲನೆಲ್ಲಿ, ಚಿರ್ಡೆ ಹೂವುಗಳನ್ನೆಲ್ಲಾ ಒಟ್ಟುಗೂಡಿಸಿ ಸೂಡಿ ಮಾಡಿ ಬಾಳೆ ನಾರಿನಿಂದ ಗಂಟು ಕಟ್ಟುವುದು (ಸಾಧಾರಣ ಅಂದಾಜು 4 ಇಂಚು ಉದ್ದ). ಹಿಂದೆಲ್ಲ ಮನೆಯ ತೋಟ ಹಾಗೂ ಸುತ್ತಮುತ್ತಲಿನ ಪ್ರದೇಶದಿಂದ (ಸೂಡಿ) ಚೂಡಿಗೆ ಬೇಕಾದ ಸಸ್ಯಗಳನ್ನು ಹಬ್ಬದ ಮುನ್ನಾ ದಿನವೇ ತಂದು ತಯಾರು ಮಾಡುವ ಪದ್ಧತಿ ಇತ್ತು. ಈಗ ಹೆಚ್ಚಾಗಿ ಅಂಗಡಿಗಳಲ್ಲೇ ಚೂಡಿ ದೊರೆಯುವ ಕಾರಣ ಅಂಗಡಿಯಿಂದ ಪಡೆದು ಹಬ್ಬ ಆಚರಣೆ ಮಾಡುತ್ತಾರೆ. ಶ್ರಾವಣ ಮಾಸದ ಪ್ರತಿ ಶುಕ್ರವಾರ ಹಾಗೂ ರವಿವಾರ ಮಧ್ಯಾಹ್ನ 12 ಗಂಟೆಗೆ ಪೂಜೆ ಮುಗಿಸಬೇಕು ಎಂಬ ನಿಯಮ ರೂಢಿಯಲ್ಲಿದೆ.

ಪೂಜಾ ವಿಧಾನ
ಬೆಳಗ್ಗಿನ ವೇಳೆ ಸ್ನಾನ ಮುಗಿಸಿ ಸಾಂಪ್ರದಾಯಿಕ ಶೈಲಿಯಲ್ಲಿ ಸೀರೆ ಉಟ್ಟು ಬಾವಿ ಬಳಿಗೆ ತೆರಳಿ ಅಲ್ಲಿನ ದಂಡೆಗೆ ಹಳದಿ ಕುಂಕುಮ ಹಚ್ಚಿ, ಹೂ ಇಟ್ಟು ನೀರಿಗೆ ಹರಿದ್ರಾ ಕುಂಕುಮ ಅರ್ಪಿಸುವುದು. ಬಳಿಕ ಗಂಗಾ ಸ್ಮರಣ ಮೂಲಕ ನೀರು ತೆಗೆದು ಮನೆಯ ಅಂಗಳದಲ್ಲಿರುವ ತುಳಸಿಕಟ್ಟೆಗೆ ಚೂಡಿ ಇಟ್ಟು ಪೂಜೆ ಪ್ರಾರಂಭಿಸಲಾಗುತ್ತಿದೆ.

ದೀಪ ಹಚ್ಚಿ, ಜಾಗಟೆ ಬಾರಿಸಿ ತುಳಸಿಗೆ ನೀರೆರೆದು ಹಣ್ಣುಕಾಯಿ, ಆರತಿ ಮಾಡಿದ ಬಳಿಕ ತುಳಸಿಗೆ 5 ಪ್ರದಕ್ಷಿಣೆ ಹಾಕಿ ಸೂರ್ಯನಿಗೆ ಅಕ್ಷತೆ ಹಾಕಿ ನಮಸ್ಕರಿಸುವುದು. ಬಳಿಕ ಹೊಸ್ತಿಲಿಗೆ ಚೂಡಿಯನ್ನು ಇಟ್ಟು ಆರತಿಯನ್ನು ಬೆಳಗಿ ದೇವರ ಕೋಣೆಯಲ್ಲಿ ಚೂಡಿ ಇಟ್ಟು ಮನೆಯ ಹಿರಿಯ ಮುತ್ತೈದೆಯರಿಗೆ ಚೂಡಿಕೊಟ್ಟು ಆಶೀರ್ವಾದ ಪಡೆದುಕೊಳ್ಳುವುದು ಸಂಪ್ರದಾಯ. ದೂರದ ಊರಿನಲ್ಲಿರುವ ಸಂಬಂಧಿಕರಿಗೆ ಈಗಲೂ ಅಂಚೆ ಮೂಲಕ ಚೂಡಿಯನ್ನು ಕಳುಹಿಸುವ ಪದ್ಧತಿ ಇಂದೂ ಕಾಣಬಹುದಾಗಿದೆ.

LEAVE A REPLY

Please enter your comment!
Please enter your name here