Home ಧಾರ್ಮಿಕ ಸುದ್ದಿ ನಗರದಲ್ಲಿ ವಿವಿಧೆಡೆ ಶ್ರದ್ಧಾಭಕ್ತಿಯ ಶಿವರಾತ್ರಿ ಆಚರಣೆ

ನಗರದಲ್ಲಿ ವಿವಿಧೆಡೆ ಶ್ರದ್ಧಾಭಕ್ತಿಯ ಶಿವರಾತ್ರಿ ಆಚರಣೆ

600
0
SHARE

ಮಹಾನಗರ: ನಗರಾದ್ಯಂತ ವಿವಿಧ ದೇವಸ್ಥಾನಗಳಲ್ಲಿ ಮಹಾ ಶಿವರಾತ್ರಿ ಉತ್ಸವವನ್ನು ಶ್ರದ್ಧಾಭಕ್ತಿಯಿಂದ ಶುಕ್ರವಾರ ಆಚರಿಸಲಾಯಿತು. ನಗರದ ಶಿವ ದೇವಸ್ಥಾನಗಳಿಗೆ ಬೆಳಗ್ಗೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದುಕೊಂಡರು.

ಶಿವರಾತ್ರಿ ಅಂಗವಾಗಿ ಶುಕ್ರವಾರ ನಸುಕಿನ ವೇಳೆಯಿಂದಲೇ ಶ್ರೀ ದೇವರಿಗೆ ವಿಶೇಷ ಪೂಜೆಗಳು ಜರಗಿದವು. ಕದ್ರಿ ಮಂಜುನಾಥ ದೇವಸ್ಥಾನ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ, ಶರವು ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಭಕ್ತರ ಸಂಖ್ಯೆ ಬೆಳಗ್ಗೆಯಿಂದಲೇ ಹೆಚ್ಚಿತ್ತು. ಮಧ್ಯಾಹ್ನದವರೆಗೂ ಈ ದೇವಸ್ಥಾನಗಳಲ್ಲಿ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಕದ್ರಿ ಶ್ರೀ ಮಂಜುನಾಥ ದೇವರ ಸನ್ನಿಧಿಯಲ್ಲಿ ಶಿವಲಿಂಗಕ್ಕೆ ಭಕ್ತರು ಅಭಿಷೇಕ ಸಲ್ಲಿಸಿದರು. ರುದ್ರಾಭಿಷೇಕ, ರಂಗಪೂಜೆ, ರಥೋತ್ಸವ ನಡೆದು ರಾತ್ರಿಯಿಡೀ ಜಾಗರಣೆ ನಡೆಯಿತು.

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಶಿವನಿಗೆ ವಿಶೇಷ ಪೂಜೆ, ಮಹಾರು ದ್ರಾಭಿಷೇಕ, ಶತ ಸೀಯಾಳ ಅಭಿಷೇಕ, ಶಿವಬಲಿ, ಮಹಾಶಿವರಾತ್ರಿ ಜಾಗರಣೆ ಬಲಿ, ರಥೋತ್ಸವ, ಕೆರೆ ದೀಪ ಮುಂತಾದ ಧಾರ್ಮಿಕ ಕಾರ್ಯಗಳು ಜರಗಿತು.

ಶಿವನಿಗೆ ಪರಮ ಪ್ರಿಯವಾದ ಶಿವರಾತ್ರಿಯಂದು ಕಾವೂರು ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ನಡೆಯಿತು. ಶ್ರೀ ಮಹಾಲಿಂಗೇಶ್ವರ ವಿನಾಯಕ ಭಜನ ಮಂಡಳಿಯವರಿಂದ ಜಾಗರಣೆ, ಶುಕ್ರವಾರ ಸೂರ್ಯಾಸ್ತದಿಂದ ಶನಿವಾರ ಸೂರ್ಯೋದಯದವರೆಗೆ ಭಜನೆ ನಡೆಯಿತು.

ಪಾಂಡೇಶ್ವರ ಮಹಾಲಿಂಗೇಶ್ವರ ದೇವಸ್ಥಾ ನದಲ್ಲಿ ವಿಶೇಷ ಪೂಜೆ, ಸಾಮೂ ಹಿಕ ಶತರುದ್ರಾಭಿಷೇಕ ಜರಗಿತು.ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾ ನದಲ್ಲಿ ಮಂಗಳಾಂಬೆಗೆ ಶಿವನ ಅಲಂಕಾರ ಮಾಡಲಾಯಿತು. ಭಗವಾನ್‌ ಶ್ರೀ ಬಬ್ಬು ಸ್ವಾಮಿ ಕ್ಷೇತ್ರ ಸಹಿತ ನಗರದ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಪುನಸ್ಕಾರಾ ದಿಗಳು ನಡೆದವು. ವಿವಿಧ ದೇಗುಲಗಳಲ್ಲಿ ಭಕ್ತರಿಗೆ ವಿಶೇಷ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಶಿವರಾತ್ರಿ ಪ್ರಯುಕ್ತ ದೇವಸ್ಥಾನಗಳಲ್ಲಿ ಭಜನೆ, ಶಿವ ಸ್ತ್ರೋತ್ರ ನಡೆಯಿತು. ಮಹಾ ಶಿವರಾತ್ರಿ ಅಂಗವಾಗಿ ನಗರದ ದೇವಸ್ಥಾನಗಳಲ್ಲಿ ಮಾತ್ರವಲ್ಲದೆ, ಕೆಲವು ಮನೆಗಳಲ್ಲಿಯೂ ಆಚರಣೆ ಬಿರುಸಾಗಿತ್ತು. ಮನೆಮಂದಿ ಸೇರಿ ಶಿವ ದೇವರ ಪೂಜಾ ಕಾರ್ಯದಲ್ಲಿ ತೊಡಗಿದರು. ರಾತ್ರಿ ಯಿಡೀ ಶಿವರಾತ್ರಿ ಜಾಗರಣೆ ವಿಶೇಷವಾಗಿತ್ತು. ಭಜನೆ, ಶಿವನಾಮ ಜಪದ ಮೂಲಕ ಶಿವರಾತ್ರಿ ಆಚರಿಸಿದರು.

ಬಿರುಸಿನ ವ್ಯಾಪಾರ
ಕದ್ರಿ ದೇವಸ್ಥಾನ, ಶರವು ಮಹಾಗಣಪತಿ ದೇವಸ್ಥಾನ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಸಹಿತ ಈಶ್ವರ ದೇವಸ್ಥಾನಗಳ ಮುಂಭಾಗದಲ್ಲಿ ಶಿವನಿಗೆ ಪ್ರಿಯವಾದ ಬಿಲ್ವಪತ್ರೆ, ಎಕ್ಕದ ಹೂವು, ಎಳನೀರು, ತುಳಸಿ ಮಾಲೆ, ಹಣ್ಣು-ಕಾಯಿ ಮೊದಲಾದ ಪೂಜಾ ಸಾಮಗ್ರಿಗಳ ಅಂಗಡಿಯವರು ಬಿರುಸಿನ ವ್ಯಾಪಾರದಲ್ಲಿ ತೊಡಗಿರುವುದು ಕಂಡು ಬಂತು.

LEAVE A REPLY

Please enter your comment!
Please enter your name here