ಶಿರ್ವ: ಕುತ್ಯಾರು ಯಾಗ ಸಂಘಟನಾ ಸಮಿತಿಯ ವತಿಯಿಂದ ಕುತ್ಯಾರು ವಿದ್ಯಾದಾಯಿನಿ ಹಿ.ಪ್ರಾ. ಶಾಲೆಯ ಪ್ರಾಂಗಣದಲ್ಲಿ ಡಿ.26 ರಿಂದ 30ರವರೆಗೆ ಲೋಕ ಕಲ್ಯಾಣಾರ್ಥ ಜರಗುವ ಸಹಸ್ರಮಾನ ನವಕುಂಡ ಶ್ರೀ ಮಹಾಗಣಪತ್ಯಥರ್ವಶೀರ್ಷಯಾಗ ಮತ್ತು ಸನಾತನ ಧರ್ಮ ಸಂಸತ್ತು ಇದರ ಪೂರ್ವ ಭಾವಿಯಾಗಿ ನಡೆದ ಯಾಗ ವೇದಿಕೆಯ ಭೂಮಿ ಪೂಜೆಗೆ ರಾಜ್ಯ ಮೀನುಗಾರಿಕೆ,ಜಲ ಸಂಪನ್ಮೂಲ ಮತ್ತು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಶನಿವಾರ ಚಾಲನೆ ನೀಡಿದರು.
ಧಾರ್ಮಿಕ ವಿಧಿ ವಿಧಾನಗಳನ್ನು ಯಾಗದ ಮಹಾ ಸಂಚಾಲಕ ವೇ|ಮೂ|ಕುತ್ಯಾರು ಕೇಂಜ ಶ್ರೀಧರ ತಂತ್ರಿ ಮಾರ್ಗದರ್ಶನದಲ್ಲಿ ಕುತ್ಯಾರು ಕೇಂಜ ಭಾರ್ಗವ ತಂತ್ರಿ ನೆರವೇರಿಸಿದರು.
ಬಳಿಕ ನಡೆದ ಸಮಾರಂಭದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ರಾಜ್ಯದ ಕೆಲವು ಹಿಂದುಳಿದ ಪ್ರದೇಶಗಳಲ್ಲಿ ದೇವಸ್ಥಾನಗಳ ಮೂಲಕವೇ ವ್ಯಾಜ್ಯ ತೀರ್ಮಾನವಾಗುತ್ತಿದ್ದು, ದೇಗುಲಗಳಿಂದ ಉತ್ತಮ ಸಮಾಜದ ನಿರ್ಮಾಣವಾಗುತ್ತಿದೆ.
ಗ್ರಹಣ ಕಾಲದಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆಯುವ ಯಾಗದಲ್ಲಿ ಸಮರ್ಪಣಾ ಮನೋಭಾವದಿಂದ ದುಡಿಯುವ ತಂಡ ಕುತ್ಯಾರಿನಲ್ಲಿದೆ.ನಾಡಿನ ಸಮೃದ್ಧಿಗಾಗಿ ನಡೆಯುವ ಉತ್ತಮ ಕಾರ್ಯಕ್ಕೆ ತನ್ನಿಂದ ಸಾಧ್ಯವಿದ್ದಷ್ಟು ಕೆಲಸ ಮಾಡಿ ಸಹಕಾರ ನೀಡುವುದಾಗಿ ತಿಳಿಸಿದರು.
ಈ ಸಂದರ್ಭ ಸಚಿವರನ್ನು ಗ್ರಾಮಸ್ಥರ ಪರವಾಗಿ ಸಮ್ಮಾನಿಸಲಾಯಿತು. ಕುತ್ಯಾರು ಅರಮನೆಯ ಜಿನೇಶ್ ಬಳ್ಳಾಲ್, ಕುತ್ಯಾರು ಗ್ರಾ.ಪಂ.ಅಧ್ಯಕ್ಷ ಧೀರಜ್ ಶೆಟ್ಟಿ, ವಿದ್ಯಾದಾಯಿನಿ ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕಿ ಶರ್ಮಿಳಾ ವೇದಿಕೆಯಲ್ಲಿದ್ದರು. ಮುಜರಾಯಿ ಇಲಾಖೆಯ ತಹಶೀಲ್ದಾರ್ ಪ್ರಶಾಂತ ಕುಮಾರ್ ಶೆಟ್ಟಿ, ಹಿರಿಯರಾದ ಕುತ್ಯಾರು ಕಿಶೋರ್ ಕುಮಾರ್ ಶೆಟ್ಟಿ, ಬೆಳ್ಳಿಬೆಟ್ಟು ವೇ|ಮೂ| ಗಣೇಶ್ ಭಟ್,ಕೇಂಜ ಹರಿಕೃಷ್ಣ ಭಟ್, ಉದ್ಯಮಿ ಸಾಯಿನಾಥ ಶೆಟ್ಟಿ ಕೇಂಜ,ಪ್ರವೀಣ್ ಭಂಡಾರಿ,ಪವನ್ ಶೆಟ್ಟಿ ಕೇಂಜ,ಕುತ್ಯಾರು ಯುವಕ ಮಂಡಲದ ಅಧ್ಯಕ್ಷ ಪ್ರವೀಣ್ ಆಚಾರ್ಯ, ಕುತ್ಯಾರು ಗ್ರಾ.ಪಂ. ಸದಸ್ಯರಾದ ಲತಾ ಆಚಾರ್ಯ,ಧೀರಜ್ ಕುಲಾಲ್, ಯುವಕ ಮಂಡಲದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ವೇ|ಮೂ|ಕುತ್ಯಾರು ಕೇಂಜ ಶ್ರೀಧರ ತಂತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಯಾಗದ ಮುಖ್ಯ ವ್ಯವಸ್ಥಾಪಕ ಕುತ್ಯಾರು ಪ್ರಸಾದ್ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು. ಯಾಗ ಸಂಘಟನಾ ಸಮಿತಿಯ ಅಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ವಂದಿಸಿದರು.