Home ಧಾರ್ಮಿಕ ಸುದ್ದಿ ಜ.25ರಿಂದ ಶಿಲಾಮಯ ದೇಗುಲ ಸಮರ್ಪಣೆ, ಬ್ರಹ್ಮಕಲಶೋತ್ಸವ

ಜ.25ರಿಂದ ಶಿಲಾಮಯ ದೇಗುಲ ಸಮರ್ಪಣೆ, ಬ್ರಹ್ಮಕಲಶೋತ್ಸವ

1684
0
SHARE

ಕುಂದಾಪುರ: ಇತಿಹಾಸ ಪ್ರಸಿದ್ಧ ಹಟ್ಟಿಯಂಗಡಿ ಶ್ರೀ ಲೋಕನಾಥೇಶ್ವರ ಮತ್ತು ಸಪರಿವಾರ ದೇವರುಗಳ ಸಂಪೂರ್ಣ ಶಿಲಾಮಯ ದೇಗುಲ ಅಷ್ಟಬಂಧ ಪುನರ್‌ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ, ಮಹಾರಥೋತ್ಸವ ಜ. 25ರಿಂದ ಫೆ.3ರ ವರೆಗೆ ನಡೆಯಲಿದೆ.

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕರುಣಾಕರ ಶೆಟ್ಟಿ, ಆಡಳಿತ ಮಂಡಳಿಯ ಅಧ್ಯಕ್ಷ ಸನತ್‌ಕುಮಾರ್‌ ರೈ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಿ. ಅಪ್ಪಣ್ಣ ಹೆಗ್ಡೆ ಅವರ ನೇತೃತ್ವದಲ್ಲಿ ವೇದಮೂರ್ತಿ ಹಟ್ಟಿಯಂಗಡಿ ರಾಮಚಂದ್ರ ಭಟ್, ವಾಸ್ತುತಜ್ಞ ಎಸ್‌.ಎಂ. ಪ್ರಸಾದ್‌ ಮುನಿಯಂಗಳ ಮಾರ್ಗದರ್ಶನದಲ್ಲಿ ಗರ್ಭಗುಡಿ, ತೀರ್ಥ ಮಂಟಪ, ಹೆಬ್ಟಾಗಿಲು ಮತ್ತು ಸುತ್ತು ಪ್ರಕಾರಗಳೊಂದಿಗೆ ಜ.25ರಿಂದ ಫೆ.3ರ ತನಕ ನಡೆಯುವ ಧಾರ್ಮಿಕ ವಿಧಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ. ವಾತುಲಾಗಮ ರತ್ನ ತಾಂತ್ರಿಕ ವೇದಮೂರ್ತಿ ಗಜಾನನ ಕೃಷ್ಣ ಭಟ್ ಹಿರೇಗೋಕರ್ಣ ನೇತೃತ್ವದಲ್ಲಿ ಧಾರ್ಮಿಕ ವಿಧಿ ಜರುಗಲಿದೆ.

ಕುಂದಾಪುರ ತಾಲೂಕು ಕೇಂದ್ರದಿಂದ 8ಕಿ.ಮೀ ದೂರವಿರುವ ದೇಗುಲವು ಅತ್ಯಂತ ಪ್ರಾಚೀನ ಇತಿಹಾಸ ಹೊಂದಿದೆ. ಅನೇಕ ರಾಜವಂಶಸ್ಥರ ಆರಾಧನೆಗೆ ಒಳಪಟ್ಟ ಕ್ಷೇತ್ರ ಆಗಿದೆ. ಹಚ್ಚಹಸುರಿನ ಪರಿಸರದ ನಡುವೆ ವಾರಾಹಿ ನದಿ ತಟದಲ್ಲಿರುವ ದೇಗುಲ ಕ್ರಿ.ಶ.4ನೇ ಶತಮಾನದಿಂದಲೂ ರಾಜಾಶ್ರಯದ ಪೂಜಾ ವೈಭವದಿಂದ ಮೆರೆದಿತ್ತು. ಕಾಲಕ್ರಮೇಣ ಇತ್ತಿಚಿಗಿನ ಕೆಲವು ದಶಕಗಳಲ್ಲಿ ನಾನಾ ಕಾರಣಕ್ಕೆ ದೇವಳ ಶಿಥಿಲಗೊಂಡು ಹಿಂದಿನ ವೈಭವ ಮರೆಯಾಗಿತ್ತು. ದೇಗುಲದ ದುಸ್ಥಿತಿ ಕಂಡ ಭಕ್ತರು ಜೀರ್ಣೋದ್ಧಾರದ ಸಂಕಲ್ಪ ಮಾಡಿ ಅಷ್ಟಮಂಗಲ ಪ್ರಶ್ನೆಯನ್ನಿಟ್ಟು ಕೋಟ್ಯಾಂತರ ರೂ ವೆಚ್ಚದಲ್ಲಿ ಇದೀಗ ಸಂಪೂರ್ಣ ಶಿಲಾಮಯ ದೇಗುಲ ನಿರ್ಮಿಸಿದ್ದು ಲೋಕಾರ್ಪಣೆಗೆ ಸಜ್ಜುಗೊಂಡಿದೆ.

ಜ.25ರಂದು ಬೆಳಗ್ಗೆ 8ರಿಂದ ಮಹಾಸಂಕಲ್ಪ, ಗಣೇಶ ಪೂಜೆ, ಸಾಮೂಹಿಕ ಪ್ರಾರ್ಥನೆಯೊಂದಿಗೆ ಲೋಕಾರ್ಪಣೆ ಧಾರ್ಮಿಕ ವಿಧಿ ಹಾಗೂ ಸಂಜೆ 6.30ರಿಂದ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ವೈವಿಧ್ಯ ನಡೆಯಲಿದೆೆ. ಜ.26ರಂದು ಬೆಳಗ್ಗಿನಿಂದ ನಾನಾ ಧಾರ್ಮಿಕ ವಿಧಿ ಸಂಜೆ ಪ್ರತಿಷ್ಠಾ ಹವನ, ಶಾಂತಿಹವನ ಇತ್ಯಾದಿ ಹೋಮ ಹವನಾದಿಗಳು ಮತ್ತು ಸಾಂಸ್ಕೃತಿ ಕಾರ್ಯಕ್ರಮ ನೃತ್ಯ ಸೌರಭ ನಡೆಯಲಿದೆ.

ಜ.27ರಂದು ಬೆಳಗ್ಗೆ 7.30ರಿಂದ ಸಪರಿವಾರ ಶ್ರೀ ಲೋಕನಾಥೇಶ್ವರ ದೇವರ ಪ್ರತಿಷ್ಠಾ ಮಹೋತ್ಸವ ಜರಗುವುದು. ಸಂಜೆ 5.30ಕ್ಕೆ ಲಕ್ಷ್ಮಿನಾರಾಯಣ ಹೃದಯ ಪಾರಾಯಣ, ಧಾರ್ಮಿಕ ಸಭೆ ನಡೆಯಲಿದ್ದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ| ಜಯಮಾಲ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿರೋಧ‌ ಪಕ್ಷ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಭಾಗವಹಿಸುವರು. ಸಂಜೆ 7ರಿಂದ ನೃತ್ಯ ಸಿಂಚನ ಸಾಂಸ್ಕೃತಿ ಕಾರ್ಯಕ್ರಮ ನಡೆಯಲಿದೆ. ಜ.28 ಮತ್ತು ಜ.29ರಂದು ರಂದು ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸಂಜೆ ಸಾಂಸ್ಕೃತಿ ಕಾರ್ಯಕ್ರಮ ನಡೆಯಲಿದೆ.

ಜ.30ರಂದು ಬ್ರಹ್ಮಕಲಶಾಭಿಷೇಕ, ಸಂಜೆ 5.30ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಹೊಸನಗರ ಹೊಂಬುಜ ಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿ ಶ್ರೀ ಡಾ| ದೇವೆಂದ್ರ ಕೀರ್ತಿ ಪಟ್ಟಾಚಾರ್ಯವರ್ಯ ಭಟ್ಟಾರಕ ಮಹಾಸ್ವಾಮಿ ಹಾಗೂ ಉಡುಪಿ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥಸ್ವಾಮೀಜಿ ಆಶೀರ್ವಚನ ನೀಡುವರು. ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮದರ್ಶಿ ಭೀಮೇಶ್ವರ ಜೋಶಿ, ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ ಉಪಸ್ಥಿತರಿರುವರು. ವಾಸ್ತುಶಿಲ್ಪಿ ಎಂ.ಎಸ್‌. ಪ್ರಸಾದ್‌ ಮುನಿಯಂಗಳ ಧಾರ್ಮಿಕ ಉಪನ್ಯಾಸ ನೀಡುವರು.

ಜ.31ರಂದು ಸಂಜೆ 5.30ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಚಿಕ್ಕಮಗಳೂರು ಜಿಲ್ಲೆ ಜನಜಾಗೃತಿ ವೇದಿಕೆಯ ಅಧ್ಯಕ್ಷ ಚಿಪ್ರಗುತ್ತಿ ಪ್ರಶಾಂತ್‌ ಧಾರ್ಮಿಕ ಉಪನ್ಯಾಸ ನೀಡುವರು. ಫೆ.1ರಂದು ಮಹಾರಥೋತ್ಸವ, ಫೆ.2ರಂದು ಓಕುಳಿ ಉತ್ಸವ, ಫೆ.3ರಂದು ಧ್ವಜಾರೋಹಣ ನಡೆಯಲಿದೆ. ಲೋಕಾರ್ಪಣೆ ಧಾರ್ಮಿಕ ವಿಧಿಯ ಪ್ರತಿದಿನ ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಸಾಂಸ್ಕೃತಿಕ ವೈವಿಧ್ಯನಡೆಯಲಿದೆ.

LEAVE A REPLY

Please enter your comment!
Please enter your name here