ಉಡುಪಿ: ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಜ. 9ರಂದು ಶತರುದ್ರ ಪಾರಾಯಣ ಸಹಿತ ರುದ್ರಯಾಗ, ಮಹಾ ಅನ್ನಸಂತರ್ಪಣೆಯು ಕ್ಷೇತ್ರದ ವತಿಯಿಂದ ನೆರವೇರಲಿದೆ.
ಅಮ್ಮನ ಪ್ರೇರಣೆ
ಶತರುದ್ರೀಯ ಪಠನದಿಂದಲೇ ಅಮೃತತ್ವವನ್ನು ಪಡೆಯಬಹುದೆಂದು ಯಜ್ಞವಲ್ಯ ಮಹರ್ಷಿಗಳು ರುದ್ರೋಪಾಸನೆಯ ಮಹತ್ವವನ್ನು ವಿವರಿಸಿದ್ದಾರೆ. ಅಮೃತತ್ವವುಳ್ಳ ರುದ್ರದೇವರ ಆರಾಧನೆಯನ್ನು ಶತರುದ್ರ ಪಾರಾಯಣ ಪಠನದೊಂದಿಗೆ ನೆರವೇರಿಸುವಂತೆ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿಯವರಿಗೆ ಮಾತೆ ಪ್ರೇರೇಪಿಸಿದ್ದಾಳೆ. ಕಳೆದ ನ. 23ರಂದು ಸಂಪನ್ನಗೊಂಡ ಲಕ್ಷ ಗಾಯತ್ರಿ ಮಂತ್ರ ಜಪ ಯಜ್ಞದ ಒಂದು ಮಂಡಲದೊಳಗಾಗಿ (48 ದಿನ) ರುದ್ರಯಾಗವನ್ನು ಸಂಪನ್ನಗೊಳಿಸಬೇಕೆಂಬ ಪ್ರೇರಣೆಯಂತೆ ಈ ಮಹಾನ್ ಯಾಗವನ್ನು ಜ. 9ರಂದು ನೆರವೇರಿಸಲು ಸಂಕಲ್ಪಿಸಲಾಗಿದೆ. ಆಧ್ಯಾತ್ಮಿಕ ಕ್ಷೇತ್ರದ ಸಾಧಕರಾದ ಗುರೂಜಿ 14ನೇ ಪ್ರಾಯದಿಂದಲೇ ಗಾಯತ್ರಿ ಮಂತ್ರದೊಂದಿಗೆ ಶಿವ ಪಂಚಾಕ್ಷರಿ ಮಂತ್ರವನ್ನು ಅನುಷ್ಠಾನ ಮಾಡಿ ಜಪದ ನಿರಂತರತೆಯಿಂದ ಜಪ ಯೋಗ ಸಾಧಕರಾಗಿ ಸಮಾಜದಲ್ಲಿ ಸರ್ವ ಧರ್ಮೀಯರಿಗೂ ಆಧ್ಯಾತ್ಮಿಕ ಮಾರ್ಗದರ್ಶಕರಾಗಿದ್ದಾರೆ.
ಶಿವಲಿಂಗಾಕೃತಿಯ ಚಪ್ಪರ
ಶಿವನು ಪ್ರಕೃತಿ ಪ್ರಿಯನೂ ಹೌದು. ಈ ನೆಲೆಯಲ್ಲಿ ಪ್ರಕೃತಿಯಲ್ಲಿ ಬೆಳೆಯಲ್ಪಡುವ ಎಲ್ಲ ಹಣ್ಣುಹಂಪಲು, ಬಿಲ್ವ, ಎಕ್ಕ, ವೀಳ್ಯ, ಹಲಸು, ಮಾವು ಎಲೆಗಳನ್ನು ಪ್ರಾಕೃತಿಕ ಬಿದಿರಿನಿಂದ ಮಾಡಲ್ಪಟ್ಟ ಶಿವಲಿಂಗವನ್ನು ಹೋಲುವ ಚಪ್ಪರಕ್ಕೆ ಪೋಣಿಸಲಾಗಿದೆ. ಮುಖ್ಯದ್ವಾರವನ್ನು ವೀಳ್ಯದೆಲೆ, ಅಡಿಕೆಯಿಂದ ಶೃಂಗರಿಸಿದರೆ, ಉಳಿದ ದ್ವಾರಗಳಲ್ಲಿ ಶಿವಪ್ರಿಯವಾದ ಬಿಲ್ವಪತ್ರೆಗಳಿಂದ ಅಲಂಕರಿಸಲಾಗಿದೆ. ಪ್ರಕೃತಿಗೂ ಶಿವನಿಗೂ ಅನ್ಯೋನ್ಯ ಸಂಬಂಧವಿದ್ದು, “ಶಕ್ತಿ ಇಲ್ಲದ ಶಿವನು ಶವಕ್ಕೆ ಸಮಾನ’ ಎನ್ನುವ ಉಲ್ಲೇಖವೂ ಇದೆ. ಪ್ರಕೃತಿಯನ್ನೇ ತನ್ನೊಳಗಿರಿಸಿಕೊಂಡ ಶಿವ ಪ್ರಕೃತಿಯನ್ನು ಇಷ್ಟಪಡುತ್ತಾನೆ. ಈ ನೆಲೆಯನ್ನು ಪ್ರಕೃತಿಯನ್ನೇ ಹೋಲುವ ಚಪ್ಪರದಲ್ಲಿ ರುದ್ರಯಾಗ ಸಂಪನ್ನಗೊಳ್ಳಲಿದೆ ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾರೆ.
ಸರ್ವರಿಗೂ ಒಳಿತು
ಈ ಯಾಗದಿಂದ ಕಾಲಕಾಲಕ್ಕೆ ಮಳೆ, ಮಳೆಯಿಂದ ಬೆಳೆ, ಬೆಳೆಯಿಂದ ಸರ್ವ ಸಮೃದ್ಧಿ, ಸರ್ವ ಸಮೃದ್ಧಿಯಿಂದ ಸ್ವಸ್ಥ ಸಮಾಜ ನಿರ್ಮಾಣವಾಗಿ ಶೋಭೆಗಳಿಲ್ಲದ ಸಜ್ಜನರು ನಿರ್ಭಯದಿಂದ ಬದುಕು ಸಾಗಿಸುವ ಅವಕಾಶ ಒದಗುತ್ತದೆ. ಎಲ್ಲ ಯಜ್ಞ, ಯಾಗದಿಗಳ ಫಲವೂ ಇದೇ ಆಗಿರುತ್ತದೆ.
ಯಾಗವು ಸಮಾಜಮುಖೀ ಆದುದರಿಂದ ಪ್ರತಿಫಲವೂ ಸರ್ವರಿಗೂ ಲಭಿಸಲಿದೆ.
ಸತ್ಕರ್ಮದಿಂದ ಸತ್ಫಲ
ಪ್ರಕೃತಿಯ ಜಡತ್ವವನ್ನು ಹೋಗಲಾಡಿಸಲು ರುದ್ರಯಾಗ ಅತ್ಯಂತ ಸಹಕಾರಿ. ಈ ಯಾಗದಿಂದ ಜಡತ್ವ ಕಳೆದುಕೊಂಡ ಪ್ರಕೃತಿಯ ಚೈತನ್ಯಶಕ್ತಿ ಹೆಚ್ಚಾಗಲಿದೆ. ಈ ಹೋಮಕ್ಕೆ ಎಳ್ಳು, ಭತ್ತ ಇತರ ದ್ರವ್ಯಗಳನ್ನು ಹೋಮಿಸುವುದರಿಂದ ಆರೋಗ್ಯವೂ ಉತ್ತಮವಾಗಲಿದೆ. ರುದ್ರಯಾಗ ಮಾಡುವುದರಿಂದ ತ್ರಿಮೂರ್ತಿಗಳನ್ನೂ ಆರಾಧನೆ ಮಾಡಿದಂತಾಗುತ್ತದೆ. (ಅಧಿ ದೇವತೆ ವಿಷ್ಣು, ಪ್ರತ್ಯಧಿದೇವತೆ ಬ್ರಹ್ಮ). ರುದ್ರಾರಾಧನೆಗೆ ವಿಶೇಷ ಶಕ್ತಿಯಿದ್ದು ಅಪಮೃತ್ಯು, ಮಹಾವ್ಯಾಧಿಗಳನ್ನು ನಿಯಂತ್ರಿಸುವ ಶಕ್ತಿ ರುದ್ರದೇವರಿಗಿದೆ. ಇಂತಹ ಪವಿತ್ರ ಯಾಗದಲ್ಲಿ ಪಾಲ್ಗೊಂಡು ರುದ್ರದೇವರ, ಆದಿಶಕ್ತಿಯ ಕೃಪೆಗೆ ಪಾತ್ರರಾಗೋಣ.
-ಶ್ರೀ ರಮಾನಂದ ಗುರೂಜಿ, ಧರ್ಮದರ್ಶಿ