ಆಲಂಕಾರು : ಶರವೂರು ಶ್ರೀ ದುರ್ಗಾಪರಮೇಶ್ವರಿ ದೇಗುಲದ ವಾರ್ಷಿಕ ಜಾತ್ರೆ ಮಾ. 14 ರಂದು ಮೊದಲ್ಗೊಂಡು ಮಾ. 24 ರಂದು ಮುಕ್ತಾಯಗೊಳ್ಳಲಿದೆ.
ಮಾ. 16ರ ಸಂಜೆ ಕ್ಷೇತ್ರದ ದೈವಗಳಾದ ಅರಸು ಉಳ್ಳಾಯ, ಮಹಿಷಂತಾಯ ಮತ್ತು ರಕ್ತೇಶ್ವರಿ ದೈವಗಳ ನರ್ತನೋತ್ಸವ ನಡೆಯಿತು. ಮಾ. 17ರಂದು ರುದ್ರಚಾಮುಂಡಿ, ಧೂಮಾವತಿ, ಬಂಟ, ಮತ್ತು ಕೊಡಮಣಿತ್ತಾಯ ದೈವಗಳ ನರ್ತನೋತ್ಸವ ನಡೆಯಿತು.
ಮಾ. 19ರಂದು ಶ್ರೀದೇವಿಯ ಪೇಟೆ ಸವಾರಿ ಮತ್ತು ಸಾರ್ವಜನಿಕ ಕಟ್ಟೆಪೂಜೆ ನಡೆಯುವುದು. ಮಾ. 20ರಂದು ವಸಂತಕಟ್ಟೆ ಪೂಜೆ ನಡೆಯಲಿದ್ದು, 21ರಂದು ಶ್ರೀ ದೇವಿಯ ದರ್ಶನ ಬಲಿ ಮತ್ತು ಬಟ್ಟಲು ಕಾಣಿಕೆ ನಡೆಯಲಿದೆ.
ಮಾ. 22ರ ಸಂಜೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಮಂಗಳೂರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಸದಾನಂದ ಪೆರ್ಲ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.
ಬೆಂಗಳೂರು ಸಹಕಾರ ನಗರ ಪತ್ತಿನ ಅಧ್ಯಕ್ಷ ಗುರುಪ್ರಸಾದ್ ರೈ, ಬಲರಾಮ ಆಚಾರ್ಯ ಜಿ.ಎಲ್., ಗಣೇಶ್ ಬೀಡಿ ಮ್ಯಾನೇಜಿಂಗ್ ಡೈರೆಕ್ಟರ್ ಜಗನ್ನಾಥ ಶೆಣೈ, ಉದ್ಯಮಿ ವಸಂತ ಸಿ. ಶೆಟ್ಟಿ, ಮಂಗಳೂರು ಯುವವಾಹಿನಿ ಕೇಂದ್ರದ ಅಧ್ಯಕ್ಷ ಜಯಂತ ನಡುಬೈಲ್, ರಾಜಶೇಖರ ಹೆಬ್ಟಾರ್, ಉಪನ್ಯಾಸಕ ಕೃಷ್ಣ ಕಾಪಿಕಾಡ್ ಗೌರವ ಉಪಸ್ಥಿತರಿರುವರು. ಬಳಿಕ ಮಹಾರಥೋತ್ಸವ ನಡೆಯುವುದು.
ಮಾ. 23ರಂದು ಕವಾಟೋದ್ಘಾಟನೆ ಮತ್ತು ಸಂಜೆ ಅವಭೃಥ ಮೆರವಣಿಗೆ ನಡೆದು ಧ್ವಜಾವರೋಹಣ ನಡೆಯಲಿದೆ. ಮಾ. 24ರಂದು ಭದ್ರಕಾಳಿ ಅಮ್ಮನವರ ಗುಡಿಯಲ್ಲಿ ಶಿರಾಡಿ ಮತ್ತು ಗುಳಿಗ ದೈವಗಳ ನರ್ತನೋತ್ಸವ ನಡೆದು ಕ್ಷೇತ್ರ ವಾರ್ಷಿಕ ಜಾತ್ರೆ ಮುಕ್ತಾಯಗೊಳ್ಳಲಿದೆ ಎಂದು ದೇಗುಲದ ಪ್ರಕಟನೆ ತಿಳಿಸಿದೆ.