ಶೃಂಗೇರಿ: ಶರನ್ನವರಾತ್ರಿ ಉತ್ಸವದ ಮೊದಲ ದಿನವಾದ ಬುಧವಾರ ಶ್ರೀ ಶಾರದಾ ದೇಗುಲದಲ್ಲಿ ಶ್ರೀ ಶಾರದಾ ಪ್ರತಿಷ್ಠೆಯೊಂದಿಗೆ ನವರಾತ್ರಿ ಉತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ವಿಶೇಷ ಸಂದೇಶ ನೀಡಿ, ನವರಾತ್ರಿ ಎಂದರೆ ಒಂಭತ್ತು ರಾತ್ರಿಗಳು. ಲೋಕ ಕಂಟಕರಾಗಿದ್ದ ಮಧು ಕೈಕಟಬ, ಶುಂಭ ನಿಷುಂಭ, ಮಹಿಷಾಸುರ ಮೊದಲಾದ ರಾಕ್ಷಸರನ್ನು ಕೊಂದ ಆ ಜಗನ್ಮಾತೆಯನ್ನು ನವರಾತ್ರಿಯಲ್ಲಿ ವಿಶೇಷವಾಗಿ ಪೂಜಿಸಲಾಗುತ್ತದೆ. ಶರತ್ಕಾಲದಲ್ಲಿ ಜಗನ್ಮಾತೆಗೆ ವಿಶೇಷ ಪೂಜೆ ಸಲ್ಲಿಸಿ ದೇವಿ ಮಹಾತೆ¾ಯನ್ನು ಪಠಿಸುವುದರಿಂದ ಜಗನ್ಮಾತೆಯು ಸಂತುಷ್ಟಳಾಗಿ ಭಕ್ತರಿಗೆ ಸಕಲ ಸುಖ ಸೌಖ್ಯ ಅನುಗ್ರಹಿಸುತ್ತಾಳೆ ಎಂದರು.
ನವರಾತ್ರಿಯ ಮೊದಲ ದಿನ ಶ್ರೀ ಶಾರದಾಂಬೆಗೆ ಹಂಸ ವಾಹನಲಂಕಾರ (ಬ್ರಾಹ್ಮಿ) ಮಾಡಲಾಗಿತ್ತು. ತಾಯಿ ಶಾರದೆಯ ಕೈಯಲ್ಲಿ ಕಮಂಡಲ, ಪುಸ್ತಕ, ಪಾಶ, ಅಕ್ಷರಮಾಲೆ ಮತ್ತು ಚಿನ್ಮುದ್ರೆ ಧರಿಸಿ, ಹಂಸ ವಾಹನರೂಡಳಾಗಿ ಬ್ರಹ್ಮನ ಪಟ್ಟದ ರಾಣಿಯಾಗಿ ಭಕ್ತರಿಗೆ ದರ್ಶನ ನೀಡಿದಳು. ಬೆಳಗ್ಗೆಯೇ ಶ್ರೀ ಶಾರದಾ ಸನ್ನಿಧಿಯಲ್ಲಿ ವಿವಿಧ ಪೂಜಾ ವಿಧಿ ವಿಧಾನಗಳು ನಡೆದವು. ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಗುರುಭವನದಿಂದ ಆಗಮಿಸಿ ಶ್ರೀ ಶಾರದೆಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತರಿಗೆ ಪ್ರಸಾದ ನೀಡಿದರು. ನಂತರ ಕಿರಿಯ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ, ತೆಪ್ಪದ ಮೂಲಕ ತುಂಗಾ ನದಿ ದಾಟಿ ಗಂಗಾ ಪೂಜೆ ನೆರವೇರಿಸಿದರು. ನಂತರ ಶ್ರೀಮಠದ ಎಲ್ಲ ದೇಗುಲಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಶ್ರೀ ಶಾರದಾ ಸನ್ನಿಧಿಯಲ್ಲಿ ಶ್ರೀ ಸೂಕ್ತ, ದೇವಿ ಸೂಕ್ತ, ಸಪ್ತಶತಿ ಪಾರಾಯಣ ನಡೆಯಿತು.
ಗುರುವಾರದ ಕಾರ್ಯಕ್ರಮ: ಶ್ರೀ ಶಾರದಾಂಬೆಗೆ ಹಂಸ ವಾಹನಲಂಕಾರ, ಉಭಯ ಜಗದ್ಗುರುಗಳಿಂದ ಶ್ರೀ ಶಾರದಾಂಬೆಗೆ ವಿಶೇಷ ಪೂಜೆ, ಸಂಜೆ ಬೀದಿ ಉತ್ಸವ ಮೆಣಸೆ ಗ್ರಾಪಂ ಭಕ್ತಾದಿಗಳು ಮತ್ತು ವಿವಿಧ ಸಂಘ-ಸಂಸ್ಥೆಯಿಂದ ನಡೆಯಲಿದೆ. ರಾತ್ರಿ ಜಗದ್ಗುರುಗಳ ದರ್ಬಾರ್, ದಿಂಡಿ ದೀಪಾರಾಧನೆ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ. ಸಂಜೆ ಹೈದರಾಬಾದ್ನ ಕೆ. ಶಿವಪ್ರಸಾದ್ ಮತ್ತು ತಂಡದಿಂದ ವಿಶಲ್ ಸಂಗೀತ ಕಾರ್ಯಕ್ರಮ ನಡೆಯಲಿದೆ