Home ಧಾರ್ಮಿಕ ಸುದ್ದಿ ಷಣ್ಮುಖದೇವ ದೇವಸ್ಥಾನದ ಜಾತ್ರೆ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ

ಷಣ್ಮುಖದೇವ ದೇವಸ್ಥಾನದ ಜಾತ್ರೆ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ

1347
0
SHARE

ಸವಣೂರು : ಶ್ರದ್ಧಾಕೇಂದ್ರಗಳ ಅಭಿವೃದ್ಧಿ ಗ್ರಾಮದ ಅಭಿವೃದ್ಧಿಯಾಗಿದೆ. ಊರಿನ ಜನತೆ ಒಗ್ಗಟ್ಟಾಗಿ ಕ್ಷೇತ್ರವನ್ನು ಬೆಳಗಿದರೆ ಅದುವೇ ಗ್ರಾಮಕ್ಕೆ ದೊಡ್ಡ ವರದಾನವಾಗಿದೆ ಎಂದು ಧಾರ್ಮಿಕ ಪರಿಷತ್‌ ಸದಸ್ಯ ಎನ್‌.ಕೆ. ಜಗನ್ನಿವಾಸ ರಾವ್‌ ಹೇಳಿದರು.

ಅವರು ಕೊಳ್ತಿಗೆ ಗ್ರಾಮದ ಬಾಯಂಬಾಡಿ ಶ್ರೀ ಷಣ್ಮುಖದೇವ ದೇವಸ್ಥಾನದ ವರ್ಷಾವಧಿ ಜಾತ್ರೆ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ದೇವಸ್ಥಾನದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದರು.

ನಂಬಿಕೆಯೇ ನಮ್ಮ ಜೀವನದ ಅಭಿವೃದ್ಧಿಗೆ ನಾಂದಿಯಾಗುತ್ತದೆ. ದೇವಸ್ಥಾನದ ಅರ್ಚಕರು ದೇವರು ಮತ್ತು ಭಕ್ತರ ನಡುವಿನ ನಂಬಿಕೆಯ ಸಂಪರ್ಕ ಕೊಂಡಿಯಾಗಿದ್ದಾರೆ. ಅರ್ಚಕರು ಭಕ್ತರ ಮೇಲೆ ತೋರುವ ಪ್ರೀತಿಯೂ ಭಕ್ತರು ದೇವಸ್ಥಾನಗಳಿಗೆ ಭೇಟಿ ಕೊಡುವಂತೆ ಮಾಡುತ್ತದೆ ಎಂದರು.

ವಸತಿ ಗೃಹಕ್ಕೆ ಅನುದಾನ

ರಾಜ್ಯದಲ್ಲಿ 45 ಸಾವಿರ ದೇವಸ್ಥಾನಗಳಿವೆ. ಅದರಲ್ಲಿ ಸುಮಾರು 15 ಸಾವಿರದಷ್ಟು ಸಣ್ಣ ದೇವಸ್ಥಾನಗಳಾಗಿವೆ. ದೇವಸ್ಥಾನಗಳ ಅಭಿವೃದ್ಧಿಯಲ್ಲಿ ಧಾರ್ಮಿಕ ಪರಿಷತ್‌ ಬಹಳಷ್ಟು ಕೆಲಸ ಮಾಡುತ್ತಿದೆ ಎಂದ ಜಗನ್ನಿವಾಸ ರಾವ್‌, ಪರಿಷತ್‌ ವತಿಯಿಂದ ಬಾಯಂಬಾಡಿ ದೇವಸ್ಥಾನಕ್ಕೆ ಅರ್ಚಕರ ವಸತಿ ಗೃಹಕ್ಕೆ 2 ಲಕ್ಷ ರೂ. ಅನುದಾನ ಮಂಜೂರು ಮಾಡಲಾಗಿದೆ. ವಸತಿಗೃಹದ ಕಾಮಗಾರಿ ಸದ್ಯದಲ್ಲೇ ಆರಂಭವಾಗಲಿದೆ ಎಂದು ತಿಳಿಸಿದರು.

ದಾನಿಗಳ ನಾಮಫಲಕ ಅನಾವರಣ ಮಾಡಿದ ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ ಮಾತನಾಡಿ, ಭಕ್ತರು ಮತ್ತು ಸಮಿತಿಯವರು ಒಟ್ಟಿಗೆ ಸೇರಿಕೊಂಡು ಕೆಲಸ ಮಾಡಿದಾಗ ದೇವಸ್ಥಾನದ ಅಭಿವೃದ್ಧಿಯಾಗುತ್ತದೆ ಎಂಬುದಕ್ಕೆ ಕ್ಷೇತ್ರದಲ್ಲಾದ ಕೆಲಸಗಳೇ ಸಾಕ್ಷಿ ಎಂದರು.

ತಾ.ಪಂ. ಸದಸ್ಯ ರಾಮ ಪಾಂಬಾರು, ಉತ್ಸವ ಸಮಿತಿ ಅಧ್ಯಕ್ಷ ಕೆ.ಆರ್‌. ಲಕ್ಷ್ಮಣ ಗೌಡ ಕುಂಟಿಕಾನ ಸ್ಥಳಮನೆ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಕೆ. ಗಂಗಾಧರ ಗೌಡ ಕೆಮ್ಮಾರ, ವಿಷ್ಣು ಭಟ್ ಎಕ್ಕಡ್ಕ, ಗಂಗಾಧರ ಗೌಡ ಡಿ. ಕೊಬಂರ್ಡ್ಕ ದೊಡ್ಡಮನೆ, ವೆಂಕಪ್ಪ ನಾಯ್ಕ ಕಣ್ಣಕಜೆ, ಹರ್ಷಕುಮಾರಿ ಲಕ್ಷ್ಮಣ ಗೌಡ ಕುಂಟಿಕಾನ ಸ್ಥಳಮನೆ, ಭವಾನಿ ಶಂಕರಿ ಆಟೋಳಿ, ಶ್ರೀಧರ ಪೂಜಾರಿ ಚಾಳೆಪಡ್ಪು ಉಪಸ್ಥಿತರಿದ್ದರು. ಷಣ್ಮುಖದೇವ ಪ್ರೌಢಶಾಲಾ ವಿದ್ಯಾರ್ಥಿನಿಯರಾದ ಹರ್ಷಿತಾ, ಯಶಸ್ವಿನಿ ಮತ್ತು ಯಶಸ್ವಿ ಪ್ರಾರ್ಥಿಸಿದರು. ಅಭಿವೃದ್ಧಿ ಸಮಿತಿ ಅಧ್ಯಕ್ಷ ತೀರ್ಥಾನಂದ ದುಗ್ಗಳ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶಿವರಾಮ ಭಟ್ ಅಮಳ ಕಾರ್ಯಕ್ರಮ ನಿರೂಪಿಸಿದರು. ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ದಿವಾಕರ ರೈ ಕೆರೆಮೂಲೆ ವಂದಿಸಿದರು.

LEAVE A REPLY

Please enter your comment!
Please enter your name here