ಮಹಾನಗರ: ನಗರದ ಕರಂಗಲ್ಪಾಡಿಯ ಸುಬ್ರಹ್ಮಣ್ಯ ಸಭಾ ಆಶ್ರಯದಲ್ಲಿ ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದ ಶಂಕರ ಅಭಿಯಾನದ ಅಂಗವಾಗಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಶಂಕರ ಜಯಂತಿ ಕಾರ್ಯಕ್ರಮ ಜಗಿತು.
ಸಮಾರಂಭದಲ್ಲಿ ಪ್ರವಚನ ನೀಡಿದ ಡಾ| ವಾಗೀಶ್ವರೀ ಶಿವರಾಂ, ಸನಾತನ ಧರ್ಮ ವಿರುದ್ಧವಾದ ಬಿರುಗಾಳಿಯ ಎದುರು ವೈದಿಕ ಧರ್ಮವನ್ನು ಮತ್ತೂಮ್ಮೆ ದೃಢಗೊಳಿಸಿ ಆಂತರಿಕ ಮೌಡ್ಯಗಳನ್ನು ಖಂಡಿಸಿ ಸನಾತನ ಧರ್ಮವನ್ನು ಸಮನ್ವಯ ಮತ್ತು ಸಾಮರಸ್ಯದ ಆಧಾರದ ಮೇಲೆ ಪುನಃ ಪ್ರತಿಷ್ಠಾಪಿಸಿದ ಜಗದ್ಗುರು ಆದಿ ಶಂಕರಾಚಾರ್ಯ ಅವರನ್ನು ಲೋಕಕ್ಕೆಲ್ಲ ಮಂಗಳವನ್ನುಂಟು ಮಾಡಿದಕ್ಕಾಗಿ ‘ಶಂಕರಂ ಲೋಕ ಶಂಕರಂ’ ಎಂದು ಸ್ತುತಿಸಲಾಗುತ್ತಿದೆ ಎಂದರು.
ವೇದವ್ಯಾಸರು ಕೂಡ ಜಗದ್ಗುರು
ದ್ವಾಪರ ಯುಗದಲ್ಲಿನ ಅಮಾನವೀಯ ವೈಪರೀತ್ಯಗಳೆದುರು ಧರ್ಮ ಸ್ಥಾಪಿಸಿದ ಶ್ರೀಕೃಷ್ಣನನ್ನು ‘ಕೃಷ್ಣಂ ವಂದೇ ಜಗದ್ಗುರುಂ’ ಎನ್ನುತ್ತಾರೆ. ಧರ್ಮ ಮೂಲವಾದ ವೇದಾದಿ ಸಾಹಿತ್ಯಗಳನ್ನು ಗ್ರಹಿಸಲಾಗದ ಬೌದ್ಧಿಕ ಅವನತಿ ಸಮಾಜದಲ್ಲಿ ಉಂಟಾದಾಗ ವೇದ ವಿಭಾಗ ವ್ಯವಸ್ಥೆ ಮಾಡಿ ನಿರ್ದಿಷ್ಟ ದಾರಿತೋರಿದ ವೇದವ್ಯಾಸರನ್ನು ಕೂಡ ಜಗದ್ಗುರು ಎನ್ನುತ್ತಾರೆ ಎಂದವರು ವಿವರಿಸಿದರು.
‘ಗೇಯಂ ಗೀತಾ ನಾಮ ಸಹಸ್ರಂ, ವೇದೋ ನಿತ್ಯ ಮಧೀಯತಾಂ’ ಎಂಬಂತೆ ಸಾಮೂಹಿಕವಾದ ವೇದೋಪನಿಷತ್ ಭಗವದ್ಗೀತಾ ರುದ್ರ ಮಂತ್ರ, ಸಹಸ್ರನಾಮಗಳ ಪಾರಾಯಣವು ಬಹು ವಿಶಿಷ್ಟವಾದ ಕಾರ್ಯಕ್ರಮ ಎಂದರು.
ಶಂಕರ ಜಯಂತಿ ಅಂಗವಾಗಿ ಹಲವು ಸಂಘ – ಸಂಸ್ಥೆಗಳು ಸೇರಿಕೊಂಡು ಹೋಮ, ವೇದೋಪನಿಷತ್- ಗೀತಾ ಪಾರಾಯಣ, ರುದ್ರಾಭಿಷೇಕ ಸತ್ಯನಾರಾಯಣ ಪೂಜೆ, ಭಜನೆ, ಸಂಗೀತ, ನೃತ್ಯ, ನಾಟಕ ಪ್ರದರ್ಶನ ಇತ್ಯಾದಿಗಳು ನಡೆದವು. ಶಾಂಕರ ಅಭಿಯಾನದ ಜಿಲ್ಲಾ ಸಂಚಾಲಕರಾದ ಬೆಳ್ಳೆ ಕರುಣಾ ರಾವ್, ಶ್ರೀಧರ ಶಾಸ್ತ್ರಿ ನಿರ್ವಹಿಸಿದರು.