ಮಹಾನಗರ: ನಗರದ ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನ. 6ರಿಂದ ನ. 8ರ ವರೆಗೆ ದೀಪಾವಳಿಯ ಸಂದರ್ಭ ಸಹಸ್ರ ದೀಪೋತ್ಸವ ಜರಗಿತು.
ನರಕ ಚತುರ್ದಶಿಯಂದು ಬೆಳಗ್ಗೆ 5.30ಕ್ಕೆ ಶ್ರೀ ದೇವರಿಗೆ ತೈಲಾಭ್ಯಂಜನ, ಎಳ್ಳೆಣ್ಣೆ ಅಭಿಷೇಕ, ಪಂಚಾಮೃತ ಅಭಿಷೇಕ, ನ. 7ರಂದು ಪ್ರಾತಃಕಾಲ ಪವಮಾನ ಅಭಿಷೇಕ, ಸಂಜೆ ಲಕ್ಷ್ಮೀ ಪೂಜೆ, ನ. 8ರಂದು ಪ್ರಾತಃಕಾಲ ಪಂಚಾಮೃತ ಅಭಿಷೇಕ, ಸೀಯಾಳ ಅಭಿಷೇಕ ನಡೆಯಿತು. ಎಲ್ಲ ದಿನಗಳಲ್ಲೂ ಶ್ರೀ ದೇವರಿಗೆ ಮಧ್ಯಾಹ್ನ ಹಾಗೂ ರಾತ್ರಿ ವಿಶೇಷ ಅಲಂಕಾರ ಪೂಜೆ, ಸಂಜೆ 7ಕ್ಕೆ ಸಹಸ್ರ ದೀಪಾಲಂಕಾರ ಸಹಿತ ದೀಪಾರಾಧನೆ, ದೀಪೋತ್ಸವ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಾಟ್ಯ ವಿದುಷಿ ಸುಮಾ ದಾಮೋದರ್, ಮಯೂರಿ ನಾಟ್ಯಾಲಯ ಅವರ ಶಿಷ್ಯವೃಂದದಿಂದ ಸಂಗೀತ ನೃತ್ಯ ವೈಭವ, ಅಕ್ಷತಾ ಬೈಕಾಡಿ ಹಾಗೂ ಸೌಧಾಮಿನಿ ರಾವ್ ಕಟಪಾಡಿ ಅವರಿಂದ ಭರತನಾಟ್ಯ, ನೃತ್ಯಾರಾಧನಾ, ವಿದುಷಿ ವಿನುತಾ ಲಕ್ಷ್ಮೀ ಕಾಂತ ವಿದ್ಯಾರ್ಥಿಗಳಿಂದ ಗಾನ ವೈಭವ, ಭರತ ನಾಟ್ಯ ನಡೆಯಿತು. ನ. 8ರಂದು ಸಂಜೆ 7 ಕ್ಕೆ ಸಾಮೂಹಿಕ ಗೋಪೂಜೆ ವಿಜೃಂಭಣೆಯಿಂದ ನಡೆಯಿತು. ರಾತ್ರಿ 8ಕ್ಕೆ ಮಹಾಸೇವೆ – ರಂಗಪೂಜೆ , ತುಳಸೀ ಪೂಜೆ, ತುಳಸಿ ನಾಮಸಂಕೀರ್ತನೆ ನಡೆಯಿತು.
ಆಡಳಿತ ಮೊಕ್ತೇಸರರಾದ ಕೆ.ಸಿ. ನಾೖಕ್, ವೈದ್ಯರಾದ ಡಾ| ಸುಧೀರ್ ಹೆಗ್ಡೆ, ಡಾ| ಕೆ. ವಿ. ದೇವಾಡಿಗ, ಗೋವನಿತಾಶ್ರಯ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿಡಾ| ಪಿ. ಅನಂತಕೃಷ್ಣ ಭಟ್, ಶಕ್ತಿ ವಿದ್ಯಾಲಯದ ಆಡಳಿತಾಧಿಕಾರಿ ಜನಾರ್ದನ ಬೈಕಾಡಿ, ಪ್ರಾಂಶುಪಾಲ ಪ್ರಭಾಕರ ಜಿ.ಎಸ್., ಪ್ರಧಾನ ಸಲಹೆಗಾರ ರಮೇಶ್ ಕೆ. ಮೊದಲಾದವರು ಉಪಸ್ಥಿತರಿದ್ದರು.
ನ. 20ರ ಉತ್ಥಾನ ದ್ವಾದಶಿ (ತುಳಸಿ ಪೂಜೆ) ವರೆಗೂ ಪ್ರತಿದಿನ ರಾತ್ರಿ 8ಕ್ಕೆ ಮಹಾಪೂಜೆಯ ಬಳಿಕ ಶ್ರೀ ದೇವರಿಗೆ ಪ್ರಿಯವಾದ ತುಳಸಿ ನಾಮಸಂಕೀರ್ತನೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.