Home ನಂಬಿಕೆ ಸುತ್ತಮುತ್ತ ಶೈಲಪುತ್ರಿ

ಶೈಲಪುತ್ರಿ

1430
0
SHARE

ಶರದ್ ಋತುವಿನ ಒಂಬತ್ತು ರಾತ್ರಿಗಳಲ್ಲಿ ದುರ್ಗೆಯ ಒಂಬತ್ತು ಅವತಾರಗಳನ್ನು ಪೂಜಿಸುವುದು ಪದ್ಧತಿ. ದೇವಿಯು ಒಂಬತ್ತು ರೂಪಗಳಲ್ಲಿ ಬಂದು ದುಷ್ಟರ ಸಂಹಾರ ಮಾಡಿದ್ದಾಳೆಂಬುದು ಪುರಾಣಗಳಿಂದ ತಿಳಿಯುತ್ತದೆ. ಹಾಗಾಗಿ ಒಂದೊಂದು ರಾತ್ರಿಗೂ ಒಂದೊಂದು ವಿಶೇಷವಿದೆ. ಒಂದೊಂದು ರಾತ್ರಿ ದೇವಿಯ ಒಂದೊಂದು ರೂಪವನ್ನು ಪೂಜಿಸುವ ಮೂಲಕ ನಾವು ಕಷ್ಟದಿಂದ ಪಾರಾಗಬಹುದೆಂಬುದು ನಂಬಿಕೆ.

ಆ ಒಂಬತ್ತು ರೂಪಗಳು ಇವು;
೧. ಶೈಲಪುತ್ರಿ, ೨. ಬ್ರಹ್ಮಚಾರಿಣಿ, ೩. ಚಂದ್ರಘಂಟಾ, ೪. ಕೂಷ್ಮಾಂಡ, ೫. ಸ್ಕಂದಮಾ, ೬. ಕಾತ್ಯಾಯನಿ, ೭. ಕಾಳರಾತ್ರಿ, ೮. ಮಹಾಗೌರಿ ಮತ್ತು ೯. ಸಿದ್ಧಿದಾತ್ರಿ.
ನವರಾತ್ರಿಯ ಮೊದಲದಿನ ದುರ್ಗೆಯ ರೂಪವಾದ ಶೈಲಪುತ್ರಿಯನ್ನು ಆರಾಧಿಸಲಾಗುತ್ತದೆ. ಸತಿ ದೇವಿಯ ಪುನರ್ಜನ್ಮದ ರೂಪವೇ ಈ ಶೈಲಪುತ್ರಿ. ಶೈಲವೆಂದರೆ ಪರ್ವತ, ಪುತ್ರಿ ಎಂದರೆ ಮಗಳು ಎಂದರ್ಥ. ಅಂದರೆ ಪರ್ವತರಾಜನ ಮಗಳೇ ಶೈಲಪುತ್ರಿ.

ಸತಿ ದೇವಿಯು ತನ್ನ ತಂದೆ ದಕ್ಷನು ಪತಿಪರಮೇಶ್ವರನಿಗೆ ಮಾಡಿದ ಅವಮಾನವನ್ನು ಸಹಿಸದೆ ದಕ್ಷ ಮಾಡುತ್ತಿದ್ದ ಯಜ್ಞಕುಂಡಕ್ಕೆ ಹಾರಿ ಪ್ರಾಣತ್ಯಾಗ ಮಾಡುತ್ತಾಳೆ. ಆಮೇಲೆ ಮತ್ತೆ ಶಿವನನ್ನು ಸೇರುವುದಕ್ಕಾಗಿ ಪರ್ವತರಾಜನ ಮಗಳಾಗಿ ಹುಟ್ಟುತ್ತಾಳೆ. ಶಿವನನ್ನು ಪಡೆಯಲು ಕಾಡಿನಲ್ಲಿ ಹದಿನಾರು ವರುಷಗಳ ಕಾಲ ಘೋರತಪಸ್ಸನ್ನು ಮಾಡಿ ಮತ್ತೆ ಶಿವನನ್ನು ಸೇರುತ್ತಾಳೆ. ಇದು ಶೈಲಪುತ್ರಿಯ ದಂತಕತೆ.

ಶೈಲಪುತ್ರಿಯು ಶ್ವೇತಬಟ್ಟೆಯನ್ನುಟ್ಟು, ಗೂಳಿಯ ಮೇಲೆ ಸವಾರಿ ಮಾಡುವ ಮತ್ತು ದ್ವಿಭುಜೆಯಾದ ಅವಳ ಕೈಯಲ್ಲಿ ಕಮಲ ಮತ್ತು ತ್ರಿಶೂಲವಿದೆ. ಅರ್ಧಚಂದ್ರಾಕೃತಿಯು ಅವಳ ಹಣೆಯಲ್ಲಿದೆ. ಇದು ಶೈಲಪುತ್ರಿಯ ರೂಪ. ಶೈಲಪುತ್ರಿಯು ಮೂಲಾಧಾರ ಚಕ್ರ ದೇವತೆಯೆಂದೂ ಪ್ರಸಿದ್ಧಳು. ನಮ್ಮ ಜೀವನದಲ್ಲಿ ಶಕ್ತಿ ಮತ್ತು ಸ್ಥಿರತೆಗೆ ಇವಳನ್ನು ಪೂಜಿಸಬೇಕು.

ಓಂಕಾರಹಃ ಮೇ ಶಿರಾಹ್ ಪಟು ಮೂಲಾಧರ ನಿವಾಸಿನಿ |
ಹಿಮಾಕರಹಃ ಪಟು ಲಾಲೇಟ್ ಬಿಜರೂಪ ಮಹೇಶ್ವರಿ ||
ಶ್ರಿಂಕಾರ ಪಟು ವಾದನೇ ಲಾವಣ್ಯ ಮಹೇಶ್ವರಿ |
ಹಂಕಾರ ಪಟು ಹೃದಯಯಂ ತಾರಿಣಿ ಶಕ್ತಿ ಸ್ವಾಘ್ರಿತಾ
ಫಟ್ಕರಾ ಪಟು ಸರ್ವಾಂಗೆ ಸರ್ವ ಸಿದ್ಧಿ ಫಲಾಪ್ರದಾ || ಈ ಶ್ಲೋಕವನ್ನು ಪಠಿಸಿ ಶೈಲಪುತ್ರಿಯ ಕೃಪೆಗೆ ಒಳಗಾಗಬಹುದು.

ದೇವರ ಎಲ್ಲ ರೂಪಗಳೂ ನಮಗೆ ಸೂಕ್ಷ್ಮವಾದ ಒಂದೊಂದು ಪಾಠವನ್ನು ಹೇಳುತ್ತವೆ. ಅಂತೆಯೇ ಈ ಶೈಲಪುತ್ರಿ ರೂಪವೂ ನಾವು ಪಾಲಿಸಬೇಕಾದ ಬದುಕಿನ ತತ್ತ್ವವನ್ನು ಸೂಚಿಸುತ್ತದೆ. ಶ್ವೇತಬಟ್ಟೆಯಲ್ಲಿರುವ ಆಕೆ ಶಾಂತಿಯುತವಾದ ನಡವಳಿಕೆಯನ್ನು ಬೆಳೆಸಿಕೊಳ್ಳಲು ಪ್ರೇರಣೆಯಾಗಿದ್ದಾಳೆ. ಪರ್ವತರಾಜನ ಮಗಳಾಗಿ ಪರ್ವತ ಎಂದರೆ ಪ್ರಕೃತಿಯನ್ನು ಪ್ರೀತಿಸಿ, ಶುದ್ಧವಾಗಿರಿಸಿಕೊಳ್ಳಿರೆಂದು ಸೂಚಿಸುವಳು. ಇನ್ನು ಗೂಳಿಯ ಮೇಲೆ ಕುಳಿತಿರುವುದು ಮೂಕಪ್ರಾಣಿಗಳೆಲ್ಲವೂ ದೇವ-ದೇವತೆಯರ ವಾಹನಗಳಾಗಿದ್ದು ಅವನ್ನು ಹಿಂಸಿಸಬಾರದೆಂಬುದರ ಸಂಕೇತವಾಗಿದೆ. ಒಂದು ಕೈಯಲ್ಲಿರುವ ತ್ರಿಶೂಲ ತಾಪತ್ರಯಗಳ ನಿವಾರಣೆಯ ಸೂಚಕ ಮತ್ತು ನಮ್ಮ ಮನಸ್ಸು ದುಷ್ಟತನದತ್ತ ದೃಷ್ಟಿ ಹಾಯಿಸಬಾರದು, ಅದರಿಂದ ಶೂಲದಂತಹ ಅಸ್ತ್ರದಿಂದ ನಮ್ಮನ್ನು ನಾವೇ ಇರಿದುಕೊಂಡಂತೆ ಎಂಬುದನ್ನು ಸಾರುತ್ತದೆ. ಅವಳ ಇನ್ನೊಂದು ಕೈಯಲ್ಲಿ ಕಮಲವಿದೆ. ಕಮಲ ಎಂಬುದು ಕೋಮಲವಾದ ಎಸಳುಗಳುಳ್ಳ, ನೀರಿನಲ್ಲಿ ಅರಳುವ ಸುಂದರ ಹೂವು. ಅದು ವಿನಯ ಮತ್ತು ತಾಳ್ಮೆಯ ಸಂಕೇತ. ತಿಳಿಯಾದ ಮನಸ್ಸಿನಲ್ಲಿ ತಳಮಳವಿರುವುದಿಲ್ಲ. ಸತ್ಯದ ಹಾದಿಯಷ್ಟೇ ಕಾಣುತ್ತದೆ. ಇವಷ್ಟೇ ಅಲ್ಲದೆ ದೇವೀ ರೂಪಗಳು ಹೆಣ್ಣಿನ ಶಕ್ತಿಯನ್ನು ಪ್ರತಿಬಿಂಬಿಸುತ್ತವೆ.

ಎಲ್ಲಾ ಹಬ್ಬಗಳೂ ಅಜ್ಞಾನದಿಂದ ಸುಜ್ಞಾನದೆಡೆಗೆ ದಾರಿ ತೋರುವ ಅವಕಾಶಗಳಿವೆ. ಆ ಜ್ಞಾನವನ್ನು ನಮ್ಮಲ್ಲಿ ತುಂಬಿಕೊಂಡು ಎಲ್ಲರೂ ಒಂದಾಗಿ ಬಾಳೋಣ; ಶಾಂತಿ ಎಲ್ಲರಲ್ಲಿ ನೆಲೆಸುವಂತಾಗಲಿ ಎಂದು ಶೈಲಪುತ್ರಿಯಲ್ಲಿ ಈ ದಿನ ಪ್ರಾರ್ಥಿಸೋಣ.
ಇನ್ನು ನಾಳೆಗೆ……

|| ಸರಳವಾಗಿ ಯೋಚಿಸಿ-ಸಂಸ್ಕಾರಯುತರಾಗಿ-ಸರಳವಾಗಿ ಜೀವಿಸಿ||

ವಿಷ್ಣು ಭಟ್ಟ, ಹೊಸ್ಮನೆ.

LEAVE A REPLY

Please enter your comment!
Please enter your name here