ಮಹಾನಗರ: ದೇವರನ್ನು ಚಿನ್ನ, ಬೆಳ್ಳಿಯಿಂದ ಅಲಂಕಾರ ಮಾಡುವುದರಿಂದ ನಮ್ಮ ಬದುಕು ಕೂಡ ಬಂಗಾರದಂತೆ ಆಗಬೇಕು ಎಂಬ ಸತ್ ಸಂಕಲ್ಪ ಅಡಗಿದೆ. ಕವಿ ಚಿಂತನೆಯ ಗಣಪತಿಯಲ್ಲಿ ಹಲವಾರು ವಿಷಯಗಳು ಅಡಗಿದೆ. ದೇವರ ಸೇವೆ, ಸಮಾಜ ಸೇವೆ ಎಲ್ಲವೂ ನಮ್ಮ ಭರತ ಭೂಮಿಗಾಗಿ ಎಂದು ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
ಹಿಂದೂ ಯುವ ಸೇನೆ ಆಶ್ರಯದಲ್ಲಿ ನಗರದ ಕೇಂದ್ರ ಮೈದಾನದಲ್ಲಿ ಆಯೋಜಿ ಸಲಾದ 26ನೇ ವರ್ಷದ ಮಂಗಳೂರು ಗಣೇಶೋತ್ಸವದ ಪ್ರಥಮ ದಿನದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಅಂತಾರಾಷ್ಟ್ರೀಯ ವಾಸ್ತು ತಜ್ಞ ಗುರುಜೀ ಉಮೇಶ್ ಆಚಾರ್ಯ, ಮನಪಾ ಸದಸ್ಯ ದಿವಾಕರ್ ಪಾಂಡೇಶ್ವರ, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಶ್ರೀನಿವಾಸ್ ಶೆಟ್ಟಿ ನಾರ್ಯ, ಉದ್ಯಮಿ ಜ್ಞಾನೇಶ್ ಆಳ್ವ, ಚಾರ್ಟೆಡ್ ಅಕೌಟೆಂಟ್ ಶಿವಕುಮಾರ್ ಕೆ., ಬಜಾಲ್ ಪೆರ್ಜಿಲ ಅಣ್ಣಪ್ಪ ಪಂಜುರ್ಲಿ ದೈವಸ್ಥಾನದ ಅಧ್ಯಕ್ಷ ವಿಶ್ವನಾಥ್ ಸಾಲ್ಯಾನ್, ಸಗ್ರಹಮುಖ ಶನೈಶ್ಚರ ಯಾಗ ಸಮಿತಿಯ ಕಾರ್ಯಾಧ್ಯಕ್ಷ ಎಚ್.ಕೆ. ಪುರುಷೋತ್ತಮ್, ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಭಾಸ್ಕರಚಂದ್ರ ಶೆಟ್ಟಿ, ಅಧ್ಯಕ್ಷ ಬಿ. ಶಶಿಕಾಂತ್ ನಾಗ್ವೇಕರ್, ಕಾರ್ಯದರ್ಶಿ ರಾಮಚಂದ್ರ ಚೌಟ, ಹಿಂದೂ ಯುವ ಸೇನಾ ಅಧ್ಯಕ್ಷ ಯಶೋಧರ ಚೌಟ, ನಾರಾಯಣ ಶೆಟ್ಟಿ ಆಕಾಶಭವನ, ರಘು ಡಿ. ಕೋಟ್ಯಾನ್ ಉಪಸ್ಥಿತರಿದ್ದರು. ಪ್ರವೀಣ್ ಎಸ್. ಕುಂಪಲ ಸ್ವಾಗತಿಸಿದರು. ಕಿರಣ್ ರೈ ಬಜಾಲ್ ವಂದಿಸಿದರು. ಧರ್ಮೇಂದ್ರ ಎಂ.ಪಿ. ನಿರೂಪಿಸಿದರು.