Home ನಂಬಿಕೆ ಸುತ್ತಮುತ್ತ ಜಿಗಿದಾಡುವ ಜಿಂಕೆಯನ್ನು ನೋಡಿ ಬದುಕಿನ ಗುಟ್ಟನ್ನು ತಿಳಿಯಿರಿ!

ಜಿಗಿದಾಡುವ ಜಿಂಕೆಯನ್ನು ನೋಡಿ ಬದುಕಿನ ಗುಟ್ಟನ್ನು ತಿಳಿಯಿರಿ!

2584
0
SHARE

ಸೂರ್ಯೋದಯಕ್ಕೆ ಏಳುತ್ತೇವೆ. ಮಧ್ಯಾಹ್ನಕ್ಕೆ ಉಣ್ಣುತ್ತೇವೆ. ಮತ್ತೆ ರಾತ್ರಿ ಉಂಡು ಮಲಗುತ್ತೇವೆ. ಇವೆಲ್ಲವುಗಳ ನಡುವೆ ಬದುಕಿಗಾಗಿ ದುಡಿಯುತ್ತೇವೆ. ಇದು ನಿತ್ಯದ ಕಾಯಕ. ಇದರಲ್ಲಿ ತೃಪ್ತಿ ಉಂಟೇ? ಆ ದುಡಿಮೆಯನ್ನು ಸಂತಸದಿಂದ ಅಪ್ಪಿಕೊಂಡಿದ್ದೇವೆಯೇ? ದುಡಿಯುವುದೇ ಸಂತಸವೇ? ಉಣ್ಣುವುದೇ ಉದ್ದೇಶವೇ? ಬದುಕು ಎಂಬುದು ಮೂಲ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಇರುವ ಕಾಲಾವಕಾಶವೇ? ಇಷ್ಟಕ್ಕೇ ಸೀಮಿತವೇ? ಹಸಿವೆಗೆ ಬಡವನೂ ಉಣ್ಣಬೇಕು; ಶ್ರೀಮಂತನೂ ಉಣ್ಣಬೇಕು. ದುಡಿಯುವವನೂ ಉಣ್ಣಬೇಕು; ದುಡಿಯದವನೂ ಉಣ್ಣಬೇಕು. ಹಾಗಾದರೆ ಉಂಡು ಸುಖವಾಗಿರುವುದೇ ತೃಪ್ತಿಯ ಜೀವನವೇ? ಅಲ್ಲವೇ ಅಲ್ಲ. ಆದರೂ ಕೆಲವು ಕೆಲಸ, ಕೆಲವು ಊಟ, ಕೆಲವು ನೋಟ, ಕೆಲವು ಸನ್ನಿವೇಶ, ಕೆಲವರ ಸಾಂಗತ್ಯ ಹೀಗೆ ಹಲವಾರು ಸಂಗತಿಗಳು ನಮಗೆ ತೃಪ್ತಿ ಕೊಟ್ಟಿದ್ದಿದೆ. ಆದರೂ ಈ ತೃಪ್ತಿ ಎಂಬುದು ಅಷ್ಟಕ್ಕೆ ಸಾಕು ಅನಿಸಲಿಲ್ಲ. ಮತ್ತೊಂದು ಸುಖದ ಹುಡುಕಾಟ, ಅದಕ್ಕಾಗಿ ಹೋರಾಟ ಪ್ರತಿಫಲ ತೃಪ್ತಿ ಅಥವಾ ಅತೃಪ್ತಿ, ಇನ್ನು ಹೆಚ್ಚಿನ ಸಂದರ್ಭ ಸಂದಿಗ್ಧ. ಸುಖವೂ ಇಲ್ಲ; ದುಃಖವೂ ಇಲ್ಲದ ಸ್ಥಿತಿ. ಯಾಕೆ ಹೀಗೆ? ಕಾರಣ ಪರವಶತನ. ಮೋಹದೊಳಗೆ ಬಂಧಿಸಲ್ಪಡುವುದು.

ಮನುಷ್ಯನು ಯಾವತ್ತು ವಿಷಯಲಂಪಟನಾಗುವನೋ ಅವತ್ತಿನಿಂದ ಆತ ಸುಖವೆಂಬ ಮಾಯೆಯಲ್ಲಿ ಬಿದ್ದು ನೋವನ್ನೇ ಉಣ್ಣುವಂತವನಾಗುತ್ತಾನೆ. ನಾವೆಲ್ಲ ಒಂದೆಲ್ಲ ಒಂದು ಅರಿಷಡ್ವರ್ಗಗಳಿಂದ ವಶವಾಗಿರುವವರೇ. ಒಬ್ಬನಲ್ಲಿ ಮೋಹ, ಇನ್ನೊಬ್ಬನಲ್ಲಿ ಲೋಭ, ಮತ್ತೊಬ್ಬನಲ್ಲಿ ಕಾಮ, ಮದ ಹೀಗೆ ಒಂದೊಂದಾದರೂ ನಮ್ಮನ್ನು ಆವರಿಸಿ ಬದುಕಿನಲ್ಲಿ ಸೋಲಿನ ಹಾದಿಯನ್ನ ತುಳಿಯುವಂತೆ ಮಾಡುತ್ತಿರುತ್ತವೆ. ಈ ಅರಿಷಡ್ವರ್ಗಗಳು ನಮ್ಮನ್ನು ಸುತ್ತಿಕೊಂಡರೆ ಸ್ವತಃ ನಮಗೂ ನಮ್ಮಿಂದ ಇತರರಿಗೂ ಅಪಾಯಕಾರಿಯೇ. ಶ್ರೀಮದ್ಭಾಗವತವು ಇಂತಹ ಸ್ಥಿತಿಯಿಂದ ಪಾರಾಗಲು ಜಿಂಕೆಯ ದೃಷ್ಟಾಂತವನ್ನು ಹೇಳುತ್ತದೆ. ವ್ಯಾಧನ ಹಾಡಿನಿಂದ ಜಿಂಕೆ ಮೋಹಿತವಾಗುತ್ತದಂತೆ. ವ್ಯಾಧ ಎಂದರೆ ಬೇಟೆಗಾರ. ಈತನ ಹಾಡಿಗೆ ಮರುಳಾಗಿ ಆತನ ಬಲೆಯಲ್ಲಿ ಸಿಕ್ಕಿಹಾಕಿಕೊಂಡು ಬಂಧನಕ್ಕೊಳಪಡುತ್ತದೆ. ಅಂತೆಯೇ ಮನುಷ್ಯನೂ ಕೂಡ ಆತನನ್ನು ಅರಿಷಡ್ವರ್ಗಗಳ ಕಡೆಗೆ ಸೆಳೆದುಕೊಳ್ಳುವಂತಹ ಗ್ರಾಮ್ಯಗೀತೆಗಳನ್ನು ಆಲಿಸಬಾರದು. ಅಂದರೆ ನಮ್ಮೊಳಗಿನ ಏಕಾಗ್ರತೆಯನ್ನು ಕೆಡಸಿ ವಿಷಯಗಳೆಡೆಗೆ ಆಸಕ್ತಿ ಮೂಡುವಂತೆ ಮಾಡುವ ಗೀತೆಗಳನ್ನು ಕೇಳಬಾರದು ಎನ್ನಲಾಗಿದೆ. ಇದಕ್ಕೆ ಇನ್ನೊಂದು ಉದಾಹರಣೆಯಾಗಿ ಜಿಂಕೆಯ ಗರ್ಭದಲ್ಲಿ ಜನಿಸಿದ ಋಷಶೃಂಗ ಮುನಿಯು ಸ್ತ್ರೀಯರ ಹಾಡು ಕುಣಿತಗಳನ್ನು ನೋಡಿ, ಕೇಳಿ ಅವರಿಗೆ ವಶನಾಗಿ, ಕೊನೆಗೆ ಅವರ ಕೈಗೊಂಬೆಯಾದುದನ್ನೂ ಹೇಳಲಾಗಿದೆ.

ಜಗತ್ತಿನಲ್ಲಿ ಒಂದಲ್ಲ ಒಂದು ವ್ಯಾಮೋಹಕ್ಕೆ ಸಿಲುಕದವನು ಸಿಗುವುದು ಕಷ್ಟ ಎಂಬುದು ಎಲ್ಲರಿಗೂ ಗೊತ್ತು. ಹಲವಾರು ಸನ್ನಿವೇಶಗಳಲ್ಲಿ ಇವನ್ನು ನೋಡಿದ್ದೇವೆ. ಈ ಮೋಹದಿಂದ ದೂರವಾಗದ ಹೊರತೂ ನಮಗೆ ಯಾವುದರಲ್ಲಿಯೂ ತೃಪ್ತಿ ದೊರೆಯದು. ಹಸಿದ ಹೊಟ್ಟೆಗೆ ಗಂಜಿಯನ್ನು ತಿಂದರೂ ತೃಪ್ತಿ ದೊರೆಯುತ್ತದೆ; ಮೃಷ್ಟಾನ್ನ ಉಂಡರೂ ತೃಪ್ತಿ ದೊರೆಯುತ್ತದೆ. ಆದರೆ ಮೋಹ ಮೃಷ್ಟಾನ್ನದಲ್ಲೇ ಸುಖವಿದೆ ಎಂದು ನಮ್ಮನ್ನು ಅದರತ್ತ ಎಳೆಯುತ್ತದೆ. ಆ ಮೃಷ್ಟಾನ್ನವನ್ನು ಹೊಂದುವುದಕ್ಕಾಗಿ ಹೋರಾಟಕ್ಕಿಳಿಯುತ್ತೇವೆ. ಅಡ್ಡ ದಾರಿಯನ್ನೂ ತುಳಿಯುತ್ತೇವೆ. ಅಷ್ಟಾಗಿ ಮೃಷ್ಟಾನ್ನ ಆ ಹೊತ್ತಿಗೆ ತಣ್ಣಗಿನ ಗಂಜಿಗಿಂತಲೂ ಕಡೆಯಾಗಿರುತ್ತದೆ! ಜಿಂಕೆ ಎಂಬುದು ಚಂಚಲ ಚಿತ್ತದ ಸೂಚಕವೂ ಹೌದು. ಅದು ನಿಂತಲ್ಲಿ ನಿಲ್ಲವುದಿಲ್ಲ. ನಮ್ಮ ಮನಸ್ಸೂ ಕೂಡ ಅದರಂತೆಯೇ ಚಂಚಲವಾದರೆ ಅಂಗೈಯಲ್ಲಿರುವ ಆನಂದವನ್ನು ಅನುಭವಿಸದೆ ಯಾವುದೋ ಮರಿಚಿಕೆಯ ಬೆನ್ನು ಹತ್ತಿ ಅತೃಪ್ತಿಯ ಮುಖ ಹೊತ್ತುಕೊಂಡು ಓಡುತ್ತಿರಬೇಕಷ್ಟೆ.

..ಮುಂದುವರಿಯುವುದು.

||ಸರಳವಾಗಿ ಯೋಚಿಸಿ ಸಂಸ್ಕಾರಯುತರಾಗಿ ಸರಳರಾಗಿ ಜೀವಿಸಿ||

  ಭಾಸ್ವ.

LEAVE A REPLY

Please enter your comment!
Please enter your name here