ಸವಣೂರು: ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನವು 8 ಶತಮಾನಗಳ ಇತಿಹಾಸ ಹೊಂದಿದ್ದು, ಇಲ್ಲಿ ಆರೂಢ ಸಾನ್ನಿಧ್ಯ ಶ್ರೀ ವಿಷ್ಣುಮೂರ್ತಿ ದೇವರು, ಪರಿವಾರ ದೈವಗಳಾದ ರಾಜನ್ ದೈವ-ಶಿರಾಡಿ ಭೂತ (ಬೊಟ್ಟಿ ಭೂತ), ಹುಲಿಭೂತ, ರಕ್ತೇಶ್ವರಿ, ಪಂಜುರ್ಲಿ ಹಾಗೂ ಗುಳಿಗ ಹಾಗೂ ನಾಗ ಸಾನ್ನಿಧ್ಯ ಹೊಂದಿದ ಪುಣ್ಯಕ್ಷೇತ್ರ.
ಮುಜರಾಯಿ ಇಲಾಖೆಗೆ ಒಳಪಟ್ಟರೂ ಈ ದೇವಸ್ಥಾನದ ಯಾವುದೇ ಅಭಿವೃದ್ಧಿ ಕಂಡಿಲ್ಲ. ಐದು ತಿಂಗಳಿಂದ ಇಲ್ಲಿನ ದೇವರಿಗೆ ನಿತ್ಯ ಪೂಜೆಯೂ ನಡೆಯುತ್ತಿಲ್ಲ. ಪೂಜೆಗೆ ಅಗತ್ಯ ವಸ್ತುಗಳ ಖರೀದಿ ಹಾಗೂ ಅರ್ಚಕರಿಗೆ ಸಂಬಳ ನೀಡಲು ದುಡ್ಡಿಲ್ಲ ಎಂಬ ಸ್ಥಿತಿ ಇಲ್ಲಿನದು.
ದೇವಸ್ಥಾನವಿರುವ ಸ್ಥಳವು ಸರ್ವೆ ನಂಬ್ರ: 101/1ರಲ್ಲಿ ವಿಸ್ತೀರ್ಣ 14 ಸೆಂಟ್ಸ್ (ದೇವಸ್ಥಾನ ಇರುವ ಜಾಗ), ಸರ್ವೆ ನಂಬ್ರ: 103/5ರಲ್ಲಿ ವಿಸ್ತೀರ್ಣ 19 ಸೆಂಟ್ಸ್ (ದೇವಸ್ಥಾನಕ್ಕೆ ಬರುವ ದಾರಿ) ಹಾಗೂ ಸರ್ವೆ ನಂಬ್ರ: 99/5 ರಲ್ಲಿ ವಿಸ್ತೀರ್ಣ 5 ಸೆಂಟ್ಸ್ (ನಾಗಬನ) ಜಾಗವನ್ನು ಸರಕಾರವು ದೇಗುಲದ ಹೆಸರಿನಲ್ಲಿ ಕಾದಿರಿಸಿದೆ.
“ಸಿ’ ಪ್ರವರ್ಗ
ಈ ದೇವಸ್ಥಾನವು ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆಯ ಎಂಡೋಮೆಂಟ್ನ “ಸಿ’ ಪ್ರವರ್ಗದ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನಗಳ ಹೆಸರಿನ ಪಟ್ಟಿಯಲ್ಲಿ ಒಳಪಟ್ಟಿದೆ.
ನಾಗೇಶ್ ರಾವ್ ಎಲಿಯ ಈವರು ಈ ವರೆಗೆ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಆಡಳಿತ ನಿರ್ವಹಿಸಿ, ಮೇ ತಿಂಗಳಲ್ಲಿ ರಾಜೀನಾಮೆ ನೀಡಿದ್ದಾರೆ. ಅನಂತರ ಮುಂಡೂರು ವ್ಯಾಪ್ತಿಯ ಗ್ರಾಮ ಲೆಕ್ಕಾಧಿಕಾರಿ ತುಳಸಿ ಅವರು ಆಡಳಿತಾಧಿಕಾರಿಯಾಗಿ ಸರಕಾರದ ವತಿಯಿಂದ ನೇಮಕವಾಗಿದ್ದಾರೆ.
ಈ ದೇವಸ್ಥಾನದಲ್ಲಿ ನಿತ್ಯ ಬೆಳಗ್ಗೆ ಒಂದು ಹೊತ್ತಿನ ಪೂಜೆ, ವಿಷು ಕಣಿ, ದೈವಗಳಿಗೆ ಪತ್ತನಾಜೆ ತಂಬಿಲ, ನಾಗರ ಪಂಚಮಿಯಂದು ನಾಗತಂಬಿಲ, ಕದಿರು (ತೆನೆ) ತುಂಬಿಸುವುದು, ನವರಾತ್ರಿಗೆ ದುರ್ಗಾ ಪೂಜೆ ಮತ್ತು ಗಣಪತಿ ಹೋಮ, ದೀಪಾವಳಿಗೆ ಮರ ಹಾಕುವ ಆಚರಣೆ ಇತ್ಯಾದಿ ಪೂಜೆಗಳು ನಡೆಯುವುದು ಪದ್ಧತಿ. ಭಕ್ತರೂ ಇತ್ತೀಚೆಗೆ ದೇವಸ್ಥಾನಕ್ಕೆ ಬರುವುದು ವಿರಳವಾದ್ದರಿಂದ ದೇಗುಲಕ್ಕೆ ಆದಾಯವೇ ಇಲ್ಲದಂತಾಗಿದೆ.
ಈಗ ದೇಗುಲದ ಸುತ್ತು ಪೌಳಿಗಳ ಛಾವಣಿ, ತೀರ್ಥಮಂಟಪ, ಗರ್ಭಗುಡಿ, ದೈವ ಹಾಗೂ ನಾಗ ಸಾನ್ನಿಧ್ಯಗಳು ಶಿಥಿಲಗೊಂಡಿವೆ. 13 ವರ್ಷಗಳ ಹಿಂದೆ ದೇಗುಲದ ಕುರಿತು ಅಷ್ಟಮಂಗಲ ಪ್ರಶ್ನೆ ಹಾಗೂ ಮತ್ತೂಮ್ಮೆ ತಾಂಬೂಲ ಪ್ರಶ್ನೆಯಲ್ಲಿ ಕಂಡುಬಂದ ರೀತಿಯಲ್ಲಿ ಸದ್ರಿ ದೇಗುಲವನ್ನು ಶೀಘ್ರವಾಗಿ ಜೀರ್ಣೋದ್ಧಾರ ಮಾಡಬೇಕೆಂದು, ಹೊಸದಾಗಿ ಶ್ರೀ ಮಹಾಗಣಪತಿ, ಶ್ರೀ ರಾಜರಾಜೇಶ್ವರಿ ದೇವಿಯನ್ನೂ ಆರಾಧಿಸಿಕೊಂಡು ಬರುವಂತೆ ದೈವಜ್ಞರು ತಿಳಿಸಿದ್ದಾರೆ. ಆದರೆ, ಈ ನಿಟ್ಟಿನಲ್ಲಿ ಪ್ರಯತ್ನವಾಗಿಲ್ಲ.
ಕಷ್ಟದಲ್ಲಿ ನಡೆಸಿದ್ದೇನೆ
1975ರಿಂದ 2019 ಮೇ ತನಕ ದೇವಸ್ಥಾನದ ಆಡಳಿತ ಮೊಕ್ತೇಸರನಾಗಿ¨ªೆ. ಹೇಗೋ ಕಷ್ಟದಲ್ಲಿ ಇಲ್ಲಿತನಕ ದೇವಸ್ಥಾನ ನಡೆಸಿಕೊಂಡು ಬಂದಿದ್ದೇನೆ. ದೇವಸ್ಥಾನದ ಖರ್ಚಿಗೆ ತಿಂಗಳಿಗೆ ಕನಿಷ್ಠ 6 ಸಾವಿರ ರೂ. ಬೇಕು. ನನಗೂ ವಯಸ್ಸಾಗಿದೆ. ಅದಕ್ಕಾಗಿ ರಾಜೀನಾಮೆ ನೀಡಿ, ಸರಕಾರಕ್ಕೆ ಒಪ್ಪಿಸಿದ್ದೇನೆ.
– ನಾಗೇಶ್ ರಾವ್
ಮಾಜಿ ಆಡಳಿತ ಮೊಕ್ತೇಸರರು
ಸರಕಾರಕ್ಕೆ ವರದಿ
ಮುಜರಾಯಿ ಇಲಾಖೆಗೊಳಪಟ್ಟ ದೇವಸ್ಥಾನವಾದ್ದರಿಂದ ವ್ಯವಸ್ಥಾಪನ ಸಮಿತಿ ರಚನೆಯ ಕುರಿತಂತೆ ವರ್ಷದ ಹಿಂದೆ ಅರ್ಜಿ ಕರೆಯಲಾಗಿತ್ತು. ಆದರೆ ಯಾರೊಬ್ಬರೂ ಅರ್ಜಿ ಸಲ್ಲಿಸದೇ ಇದ್ದುದರಿಂದ ಸಮಿತಿ ರಚನೆಯಾಗಿಲ್ಲ. ಈ ಕುರಿತು ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ.
– ತುಳಸಿ
ಗ್ರಾಮ ಲೆಕ್ಕಾಧಿಕಾರಿ, ಸರ್ವೆ