ಪುತ್ತೂರು : ಜೀರ್ಣೋದ್ಧಾರ ಗೊಳ್ಳುತ್ತಿರುವ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದಲ್ಲಿ ಆಧಾರ ಶಿಲಾ ಪ್ರತಿಷ್ಠೆ, ನಿಧಿಕುಂಭ ಸ್ಥಾಪನೆ, ಪಾದುಕನ್ಯಾಸ ಕಾರ್ಯಕ್ರಮ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಾಸ್ತುಶಿಲ್ಪಿ ಎಸ್.ಎಂ. ಪ್ರಸಾದ ಮುನಿಯಂಗಳ ಅವರ ನಿರ್ದೇಶನದಲ್ಲಿ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಎಡನೀರು ಮಠದ ಶ್ರೀ ಕೇಶವಾ ನಂದ ಭಾರತೀ ಸ್ವಾಮೀಜಿಯವರು, ಶಿಥಿಲ ಗೊಂಡಂತಹ ದೇವಸ್ಥಾನಗಳು -ದೈವಸ್ಥಾನಗಳು ಅಲ್ಲಿನ ನಿವಾಸಿಗಳ ಬದುಕಿನಲ್ಲಿ ಸಂಕಷ್ಟವನ್ನೂ ತರುತ್ತವೆ. ಕಾಲ ಕಾಲಕ್ಕೆ ಅಂತಹ ಸಾನ್ನಿಧ್ಯಗಳನ್ನು ಜೀರ್ಣೋದ್ಧಾರಗೊಳಿಸುವುದು ಭಕ್ತರ ಬದುಕಿನಲ್ಲಿ ದೊರೆಯುವ ಬಹುದೊಡ್ಡ ಸುಯೋಗ. ಜತೆಗೆ ಅಲ್ಲಿನ ಜನರಿಗೆ ಸಂತೃಪ್ತಿ ಮತ್ತು ಊರಿಗೆ ಸುಭೀಕ್ಷೆ ಸಿಗುತ್ತದೆ ಎಂದು ಅವರು ಹೇಳಿದರು.
ಜೀವನ ಪಾವನ
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವ ಸ್ಥಾನದ ಆನುವಂಶಿಕ ಮೊಕ್ತೇಸರರು ಹಾಗೂ ಪ್ರಧಾನ ಅರ್ಚಕ ವಾಸುದೇವ ಅಸ್ರಣ್ಣ ಮಾತ ನಾಡಿ, ದೇವಸ್ಥಾನಗಳ ಜೀರ್ಣೋದ್ಧಾರದಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಾಗ ಜೀವನ ಪಾವನವಾಗುತ್ತದೆ ಎಂದು ಹೇಳಿದರು.
ಸ್ವರ್ಣೋದ್ಯಮಿ ಬಲರಾಮ ಆಚಾರ್ಯ ಹಾಗೂ ಶಾಸಕ ಸಂಜೀವ ಮಠಂದೂರು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು.
ಪ್ರಮುಖ ಘಟ್ಟ
ಜೀರ್ಣೋದ್ಧಾರ ಸಮಿತಿಯ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಮಾತ ನಾಡಿ, ಜೀರ್ಣೋದ್ಧಾರ ಕಾರ್ಯದಲ್ಲಿ ಪಾದುಕಾನ್ಯಾಸ ಅತ್ಯಂತ ಪ್ರಮುಖ ಘಟ್ಟ ಎಂದರು.
ವಾಸ್ತು ಶಿಲ್ಪಿ ಎಸ್.ಎಂ. ಪ್ರಸಾದ್ ಮುನಿಯಂಗಳ, ಕಲ್ಲಿನ ಕೆತ್ತನೆಯ ಶಿಲ್ಪಿ ಶಂಕರ್, ಎಪಿಎಂಸಿ ನಿರ್ದೇಶಕ ಬೂಡಿಯಾರ್ ರಾಧಾಕೃಷ್ಣ ರೈ, ಶ್ರೀ ಧೂಮಾವತಿ ದೈವಸ್ಥಾನದ ಅಜಿತ್ ಕುಮಾರ್ ಜೈನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿಯ ಕಾರ್ಯಾ ಧ್ಯಕ್ಷ ಕೃಷ್ಣಾನಂದ ಸೂರ್ಯ ಸ್ವಾಗತಿಸಿ, ಜತೆ ಕೋಶಾಧಿಕಾರಿ ಸುದರ್ಶನ್ ಗೌಡ ಮುರ ವಂದಿಸಿದರು. ಪ್ರಧಾನ ಕಾರ್ಯದರ್ಶಿ ರಾಜೇಶ್ ಬನ್ನೂರು ಮತ್ತು ವಿನೋದ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.
ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿ, ಬಿಜೆಪಿ ನಗರ ಮಂಡಲದ ಪ್ರ.ಕಾರ್ಯದರ್ಶಿ ರಾಮದಾಸ್ ಹಾರಾಡಿ, ಪ್ರಮುಖರಾದ ರಾಘವೇಂದ್ರ ನಾಯಕ್, ಎಸ್. ಕೆ. ಆನಂದ್, ಆರ್.ಸಿ. ನಾರಾಯಣ, ಮಾಧವ, ಸುದರ್ಶನ್ ಕಂಪ, ನವೀನ್ ಚಂದ್ರ ನಾೖಕ್, ಶೋಭಾ ನಾಗರಾಜ್ ಉಪಸ್ಥಿತರಿದ್ದರು.