Home ಧಾರ್ಮಿಕ ಸುದ್ದಿ ಬ್ರಹ್ಮಕಲಶೋತ್ಸವ ವೇಳೆ ಸಂಸ್ಕಾರ, ಶುಚಿತ್ವಕ್ಕೆ ಆದ್ಯತೆ

ಬ್ರಹ್ಮಕಲಶೋತ್ಸವ ವೇಳೆ ಸಂಸ್ಕಾರ, ಶುಚಿತ್ವಕ್ಕೆ ಆದ್ಯತೆ

604
0
SHARE

ಸುಬ್ರಹ್ಮಣ್ಯ : ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ನಡೆಯುವ ಬ್ರಹ್ಮಕಲಶೋತ್ಸವ ವೇಳೆ ಸಂಸ್ಕಾರ ಮತ್ತು ಶುಚಿತ್ವಕ್ಕೆ ಆದ್ಯತೆ ನೀಡಬೇಕು ಎಂದು ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತಂತ್ರಿ ಉಚ್ಚಿಲ ಹೇಳಿದರು. ಹರಿಹರ ಪಳ್ಳತ್ತಡ್ಕ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ರವಿವಾರ ಶ್ರೀ ದೇವರ ಬಾಲಾಲಯ ಪ್ರತಿಷ್ಠಾಪನೆ ನೆರವೇರಿಸದ ಬಳಿಕ ಸಮಿತಿ ಸದಸ್ಯರ ಜತೆ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಧಾರ್ಮಿಕ ವಿಚಾರಗಳ ಕುರಿತು ಅವರು ಮಾತನಾಡಿದರು.

ದೇವಸ್ಥಾನದಲ್ಲಿ ನಡೆಯುವ ಧಾರ್ಮಿಕ ಆಚರಣೆಗಳ ವೇಳೆ ಶುಚಿತ್ವ ಕಾಪಾಡಿಕೊಂಡು, ವಿಶೇಷವಾಗಿ ಮಕ್ಕಳಲ್ಲಿ ಸಂಸ್ಕಾರ ತುಂಬುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಉಳಿದಂತೆ ಕಲೆ, ಧಾರ್ಮಿಕ ಪ್ರವಚನ ಇತ್ಯಾದಿಗೂ ಆದ್ಯತೆ. ಆರ್ಥಿಕ ಶಕ್ತಿಗೆ ಅನುಸಾರವಾಗಿ ಹಮ್ಮಿಕೊಳ್ಳುವುದು ಸೂಕ್ತ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಮಕೃಷ್ಣ ಕುಧ್ಕುಳಿ ಮಾತನಾಡಿ, ನಿತ್ಯ ಪೂಜೆಯ ಸಮಯದಲ್ಲಿ ಅಲ್ಪ ಬದಲಾವಣೆ ಆಗಿದೆ. ಬಾಲಾಲಯದ ಬಳಿಕ ರಾತ್ರಿ ಮತ್ತು ಮಧ್ಯಾಹ್ನದ ಪೂಜೆ ಬ್ರಹ್ಮಕಲಶೋತ್ಸವದ ತನಕ ರದ್ದುಗೊಂಡಿದೆ. ಬೆಳಗ್ಗೆ ನಡೆಯುವ ನಿತ್ಯದ ಮಹಾಪೂಜೆ 6.30ರಿಂದ ಆರಂಭಗೊಂಡು 8.30ಕ್ಕೆ ಮುಗಿಯಲಿದೆ. ಈ ವೇಳೆ ಕ್ಷೀರಾಭಿಷೇಕ, ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಕಾರ್ತಿಕ ಪೂಜೆ, ಮಹಾಪೂಜೆ, ಮಂಗಳಾರತಿ ಹಾಗೂ ಶನಿಪೂಜೆ ಸೇವೆಗಳು ನಡೆಯಲಿವೆ. ವರ್ಷಂಪ್ರತಿ ನಡೆಯುವ ಧನು ಪೂಜೆ ಸೇವೆ ಪ್ರಾತಃ ಕಾಲದ ಅವಧಿಯಲ್ಲಿ ಎಂದಿನಂತೆ ನಡೆಯಲಿದೆ.

ಮುಂಜಾನೆ ಶನಿಪೂಜೆ ದೇವಸ್ಥಾನದ ಪ್ರಮುಖ ಸೇವೆಯಾದ ಶನಿಪೂಜೆ ನಡೆಸುವ ಭಕ್ತರು ಮುಂಜಾನೆಯ ಅವಧಿಯಲ್ಲಿ ಉಪಸ್ಥಿತ ರಿರುವಂತೆ ಮನವಿ ಮಾಡಿಕೊಂಡರು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಮಕೃಷ್ಣ ಕುಧ್ಕುಳಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಸತೀಶ್‌ ಕೂಜುಗೋಡು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕಿಶೋರ್‌ ಕೂಜುಗೋಡು, ಆರ್ಥಿಕ ಸಮಿತಿ ಅಧ್ಯಕ್ಷ ಭವಾನಿ ಶಂಕರ ಪಿಂಡಿಮನೆ, ಗೌರವಾಧ್ಯಕ್ಷ ಡಾ| ಚಂದ್ರಶೇಖರ ಕಿರಿಭಾಗ, ಅರ್ಚಕ ಸುಬ್ರಹ್ಮಣ್ಯ ನರಸಿಂಹ ಭಟ್‌, ವ್ಯವಸ್ಥಾಪನ ಸಮಿತಿ ಸದಸ್ಯರಾದ ಶೈಲೇಶ್‌ ಕಟ್ಟೆಮನೆ, ಉಷಾ ಪ್ರಭಾಕರ ಕಿರಿಭಾಗ, ಡಿ.ಎಸ್‌. ಶ್ರೀಧರ್‌ ಭಾಗವತ್‌, ಶೋಭಾಮಣಿ, ಕೇಶವ ಮೂರ್ತಿ ಭಟ್‌, ನಾರಾಯಣ ಪುಳಿಕುಕ್ಕು, ಜನಾರ್ದನ ಗುಂಡಿಹಿತ್ಲು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here