ಸಂಪ್ಯ: ಭಗವಂತ ಎಲ್ಲ ಕಡೆ ಇದ್ದಾನೆ. ಆದರೂ ಕಣ್ಣಿಗೆ ಕಾಣ ಸಿಗುವುದಿಲ್ಲ. ನಾವು ಭಕ್ತಿಯಿಂದ ಪೂಜಿಸಿದಾಗ ಮಾತ್ರ ಅವನ ಕೃಪೆ ನಮ್ಮ ಮೇಲಿರುತ್ತದೆ ಎಂದು ಉಡುಪಿ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಹೇಳಿದರು.
ಸಂಪ್ಯ ಬೂಡಿಯಾರು ಹೊಸಮನೆ ಶ್ರೀಚಕ್ರ ರಾಜರಾಜೇಶ್ವರಿ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ದುಪ್ಪಟ್ಟು ಪ್ರತಿಫಲ
ಒಂದು ಊರಿನ ದೇವಸ್ಥಾನ ಸರಿಯಾದ ರೀತಿಯಲ್ಲಿ ಇದ್ದಾಗ ಆ ಊರು ಸುಭಿಕ್ಷೆಯಿಂದ ಇರುತ್ತದೆ. ನಮ್ಮ ಶರೀರಕ್ಕೆ ಅನಾರೋಗ್ಯ ಬಾಧಿಸಿದಾಗ ಇಡೀ ದೇಹಕ್ಕೆ ತೊಂದರೆ ಆಗುವಂತೆ ದೇವರ ಶರೀರದಂತಿರುವ ದೇವಸ್ಥಾನದ ಗರ್ಭಗುಡಿಗೆ ಏನಾದರೂ ತೊಂದರೆ ಉಂಟಾದಲ್ಲಿ ಆ ದೇವಸ್ಥಾನದ ಸಾನ್ನಿಧ್ಯ ಕುಂಠಿತವಾಗುತ್ತದೆ. ಇದಕ್ಕಾಗಿ ದೇವಸ್ಥಾನದ ನಿರ್ಮಾಣ ಕಾರ್ಯಗಳೂ ಸಾಂಪ್ರ ದಾಯಿಕ ವಾಗಿಯೇ ನಡೆಯಬೇಕು ಎಂದು ಹೇಳಿದರು. ಭಕ್ತಿಯಿಂದ ದೇವರಿಗೆ ಅರ್ಪಿಸುವ ಸೇವೆಗಳಿಗೆ ದುಪ್ಪಟ್ಟು ಪ್ರತಿಫಲ ದೊರೆಯುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ ಶಾಸಕ ಸಂಜೀವ ಮಠಂದೂರು ಮಾತನಾಡಿ, ದೇವಸ್ಥಾನಗಳು ಹಿಂದೂ ಸಮಾಜದ ದ್ಯೋತಕ. ಶ್ರದ್ಧಾ ಕೇಂದ್ರಗಳು ಎಲ್ಲ ಜಾತಿ, ಪಂಗಡದವರನ್ನು ಒಟ್ಟುಗೂಡಿಸುವ ತಾಣಗಳು ಎಂದರು.
ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಜಯಂತ ನಡುಬೈಲು, ಆರ್ಯಾಪು ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಮರಿಕೆ ಮಾತನಾಡಿದರು.
ದೇವಸ್ಥಾನದ ವಾಸ್ತುಶಿಲ್ಪಿ ನಾಗರಾಜ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಿ.ಟಿ. ಸುರೇಶ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗಂಗಾಧರ ಅಮೀನ್ ಹೊಸಮನೆ, ಪದಾಧಿಕಾರಿಗಳಾದ ಪ್ರದೀಪ್ ಹಾಗೂ ಕೃಷ್ಣಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಜಯಂತ ಶೆಟ್ಟಿ ಕಂಬಳತ್ತಡ್ಡ ಸ್ವಾಗತಿಸಿ, ಸಂತೋಷ್ ಸುವರ್ಣ ಮೇರ್ಲ ವಂದಿಸಿದರು. ರಾಜೇಶ್ ಬನ್ನೂರು ಹಾಗೂ ಉಮೇಶ್ ಎಸ್. ಕೆ. ಕಾರ್ಯಕ್ರಮ ನಿರ್ವಹಿಸಿದರು.