ಬಡಗನ್ನೂರು: ವಿಷ್ಣು ಸಹಸ್ರನಾಮ ಸ್ಮರಣೆಯಿಂದ ಜೀವನ ಪಾವನವಾಗುತ್ತದೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು. ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದ ನವೀಕರಣ ಪುನಃ ಪ್ರತಿಷ್ಠಾಷ್ಟಬಂಧ ಬ್ರಹ್ಮ ಕಲಶೋತ್ಸವದ ಧಾರ್ಮಿಕ ಸಭಾ ಕಾರ್ಯ ಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ನಮ್ಮ ಕಷ್ಟ ಮತ್ತು ಸುಖದ ಮಧ್ಯೆ ಭಗವಂತನ ದರ್ಶನ ಆಗಬೇಕು ಎಂಬ ಉದ್ದೇಶದಿಂದ ಪ್ರಾರ್ಥನೆ ಮಾಡುತ್ತೇವೆ. ನಾವು ದೇವರನ್ನು ಕಂಡದ್ದು ಕಲ್ಲು ಮಣ್ಣಿನಲ್ಲಿ. ಭಗವಂತನನ್ನು ಕಲ್ಲಿನಲ್ಲಿ, ಮರದಲ್ಲಿ ಸೃಷ್ಟಿ ಮಾಡಿ ಒಂದು ಸಾನ್ನಿಧ್ಯ ಕೊಡುವುದು ಜೀವನದ ದೊಡ್ಡ ಸಾಧನೆ. ಕಲ್ಲಿನಲ್ಲಿ ಮಣ್ಣಿನಲ್ಲಿ ಮೂರ್ತಿ ಮಾಡಿ ಒಂದು ಜಾಗದಲ್ಲಿ ಇಟ್ಟು ಕೇಂದ್ರೀಕೃತ ವ್ಯವಸ್ಥೆಗೊಳಿಸಿ ಅನುಸಂಧಾನ ಮಾಡಿ ಬ್ರಹ್ಮ ಮಹಾನ್ ಸುವಸ್ತುಗಳ ಕಲಶದೊಳಗೆ ಅನುಸಂಧಾನ ಮೂಲಕ ಕಲ್ಲಿಗೆ ಅವಾಹನೆ ಮಾಡುವ ಮೂಲಕ ದೇವರನ್ನು ಕಾಣುತ್ತೇವೆ. ಇದು ನಮ್ಮ ನೈಜ ಪುಣ್ಯ. ಭಗವಂತನಿಗೆ ಬ್ರಹ್ಮಕಲಶೋತ್ಸವ ಮಾಡಿ ಅನಂತರ ಪುನಃ ದೇವರ ದರ್ಶನ ಮಾಡಿ ಅನುಸಂಧಾನ ಮಾಡಿಕೊಂಡಾಗ ಜೀವನದಲ್ಲಿ ಸಾರ್ಥಕತೆ ಆಗುತ್ತದೆ. ಧರ್ಮ ಎಂಬುದು ವಿಷ್ಣು ಸ್ವರೂಪ. ಆದ್ದರಿಂದ ವಿಷ್ಣು ಸಹಸ್ರನಾಮ ಪ್ರತಿ ನಿತ್ಯ ಮಾಡುವ ಮೂಲಕ ಜೀವನ ಪಾವನ ಎಂದು ಹೇಳಿದರು.
ಒಟ್ಟಾಗಿ ದುಡಿದುದರ ಫಲ
ಜಿ.ಪಂ. ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಮಾತನಾಡಿ, ಒಂದು ಚಿಕ್ಕ ದೇವಾಲಯ ಅಚ್ಚುಕಟ್ಟಾಗಿ ಸುಂದರವಾಗಿ ಕಾಣಲು ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ ಅವರು, ಮಕ್ಕಳಿಗೆ ಸಣ್ಣಂದಿನಿಂದಲೇ ದೇವರ ಬಗ್ಗೆ ಶ್ರದ್ಧೆ ಭಕ್ತಿ ಮೂಡಿಸುವ ಕೆಲಸ ಮಾಡಬೇಕು. ದಕ್ಷಿಣ ಕನ್ನಡ ಜಿಲ್ಲೆ ದೇವರ ನಾಡು. ಇಲ್ಲಿ ಯಾವುದೇ ಜಾತಿ, ಮತ, ಭೇದ ಇಲ್ಲದೆ ಒಟ್ಟಾಗಿ ದುಡಿದುದರ ಫಲವಾಗಿ ಇಷ್ಟೊಂದು ಅಚ್ಚುಕಟ್ಟಾದ ಬ್ರಹ್ಮಕಲಶೋತ್ಸವ ಸಂಭ್ರಮ ನಡೆದಿದೆ ಎಂದರು. ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಡಾ| ಕೃಷ್ಣಪ್ರಸನ್ನ ಮಾತನಾಡಿ, ಹಿಂದೂ ಧರ್ಮದ ಕೇಂದ್ರ ಬಿಂದುವಾದ ದೇವಸ್ಥಾನ ಮತ್ತು ಧರ್ಮ ರಕ್ಷಣೆ ನಮ್ಮ ಜವಾಬ್ದಾರಿ ಎಂದರು.
ಶ್ರೀ ಕ್ಷೇತ್ರ ನಿಡ್ಪಳ್ಳಿ ಶಾಂತಾದುರ್ಗಾ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ನಾಗೇಶ್ ಗೌಡ ಪುಳಿತ್ತಡಿ, ನಂದನ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಸಂಘದ ಉಪಾಧ್ಯಕ್ಷ ದಾಮೋದರ ಪಾಟಾಳಿ ಎಸ್. ಶುಭ ಹಾರೈಸಿದರು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ನುಳಿಯಾಲು ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ವಿನ್ಯಾಸ್ ಯು.ಎಸ್., ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ಪ್ರಧಾನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಲಕ್ಷ್ಮಣ ಬೈಲಾಡಿ, ಪ್ರೇಮಾ ಎಸ್. ಸಪಲ್ಯ ಉಪಸ್ಥಿತರಿದ್ದರು. ರವೀಂದ್ರ ಶೆಟ್ಟಿ ಕಂಬಳತ್ತಡ್ಕ ದಂಪತಿ ಸ್ವಾಮೀಜಿಯವರನ್ನು ಗೌರವಿಸಿದರು. ಹಿತಾ ಶೆಟ್ಟಿ ಪ್ರಾರ್ಥಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಗೌರವ ಸಲಹೆಗಾರ ಕೆ. ಕೃಷ್ಣಪ್ಪ ಸ್ವಾಗತಿಸಿದರು.
ವೇದಿಕೆ ಸಮಿತಿ ಸಂಚಾಲಕ ಜಯಂತ್ ಶೆಟ್ಟಿ ಕಂಬಳತ್ತಡ್ಕ ವಂದಿಸಿದರು. ಸುಳ್ಯ ಎನ್ಎಂಸಿ ಪ್ರಾಂಶುಪಾಲೆ ಹರಿಣಿ ಪುತ್ತೂರಾಯ ನಿರೂಪಿಸಿದರು. ಬಳಿಕ ಪುತ್ತೂರು ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಕಲಾವಿದರಿಂದ ನೃತ್ಯ ವೈಭವ ನಡೆಯಿತು.
ಭಕ್ತರ ಸಹಕಾರ
ಪುತ್ತೂರು ತಾ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಗೌರವ ಸಲಹೆಗಾರ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ, ಬ್ರಹ್ಮಕಲಶೋತ್ಸವ ಸಮಿತಿ ಮತ್ತು ವ್ಯವಸ್ಥಾಪನ ಸಮಿತಿ ಅಧ್ಯಕ್ಷರ ನೇತೃತ್ವದಲ್ಲಿ ಹಾಗೂ ಎಳೆಮರೆಯ ಕಾಯಿಯಾಗಿ ದುಡಿದ ಸ್ವಯಂ ಸೇವಕ ಹಾಗೂ ಊರಿನ ಭಕ್ತರ ಸಹಕಾರದಲ್ಲಿ ಬ್ರಹ್ಮಕಲಶೋತ್ಸವ ಯಶಸ್ವಿಯಾಗಿದೆ ಎಂದರು.
ಪುಣ್ಯ ಭೂಮಿ
ಕರ್ನಾಟಕ ಬಜರಂಗ ದಳ ಪ್ರಾಂತ ಸಂಚಾಲಕ ಮುರಳಿಕೃಷ್ಣ ಹಸಂತಡ್ಕ ಮಾತನಾಡಿ, ಭಾರತ ಭೋಗ ಭೂಮಿ ಅಲ್ಲ. ಪುಣ್ಯ ಭೂಮಿ, ಕರ್ಮ ಭೂಮಿ, ತಪೋ ಭೂಮಿ. ದೇವಾಲಯ ಮತ್ತು ವಿದ್ಯಾಲಯ ನಮ್ಮ ಎರಡು ಕಣ್ಣುಗಳು. ಸ್ವಾರ್ಥ ಬಿಟ್ಟು ನಿಸ್ವಾರ್ಥ ಸೇವೆ ಮಾಡಿದರೆ ಧರ್ಮ ರಕ್ಷಣೆ ಮಾಡಲು ಸಾಧ್ಯ ಎಂದರು.