Home ನಂಬಿಕೆ ಸುತ್ತಮುತ್ತ ಆಲಯವ ಕೊಟ್ಟವರಿಗೆ ಮಾಹಾಲಯದಲ್ಲಿ ವಂದಿಸು

ಆಲಯವ ಕೊಟ್ಟವರಿಗೆ ಮಾಹಾಲಯದಲ್ಲಿ ವಂದಿಸು

1361
0
SHARE

ಭಾದ್ರಪದ ಕೃಷ್ಣಪಕ್ಷದ ಹದಿನೈದು ದಿನಗಳು ಪಿತೃಪಕ್ಷವೆಂದೇ ಹೆಸರಾಗಿದೆ. ಪಿತೃಪಕ್ಷದ ಈ ದಿನಗಳಲ್ಲಿ ಪಿತೃಗಳನ್ನು ನೆನೆದು ಅವರಿಗೆ ತರ್ಪಣ ನೀಡುವ ಪದ್ಧತಿ ಇದೆ. ಕುಟುಂಬದ ಪೂರ್ವಜರನ್ನೆಲ್ಲ ನೆನೆದು ಮನೆಯವರೆಲ್ಲ ಒಟ್ಟಾಗಿ ಮಾಡುವ ಕಾರ್ಯ ಇದಾಗಿದೆ. ಆದರೆ ಪೂರ್ವಜರಿಗೆ ತರ್ಪಣ ಕೊಡುವುದೂ ಮೂಢನಂಬಿಕೆ ಎಂಬ ಯೋಚನೆ ಹಲವರದು. ನಂಬಿಕೆ ಮತ್ತು ಮೂಢನಂಬಿಕೆಯ ನಡುವಿನ ಅಂತರವನ್ನು ಅರಿಯದವರು ಇಂದು ಹೆಚ್ಚುತ್ತಿರುವುದು ವಿಷಾದನೀಯ.

ಹೊಸದಾಗಿ ಪರಿಚಯವಾದ ವ್ಯಕ್ತಿ ನಿನ್ನ ಹೆಸರೇನು? ಎಂದುದಕ್ಕೆ ನಾವು ಉತ್ತರ ಕೊಟ್ಟಾಕ್ಷಣ ಆ ಪ್ರಶ್ನೆಯ ಉತ್ತರ ಸಂಪೂರ್ಣವಾಗುವುದಿಲ್ಲ. ನಮ್ಮ ಗುರುತನ್ನು ನಾವು ಹೇಳಿದಂತಾಗುವುದಿಲ್ಲ. ಆತ ಯಾವ ಊರು? ಯಾರ ಮಗ? ಎನ್ನುತ್ತಾನೆ ಅಥವಾ ಯಾರ ಮೊಮ್ಮಗ? ಎಂತಲೂ ಕೇಳಬಹುದು. ಅಂದರೆ ನಾನು ಯಾರು ಎಂಬ ಗುರುತನ್ನು ಹೇಳುವಾಗ ನಮ್ಮ ಪೂರ್ವಜರ ಗುರುತನ್ನು ಹೇಳಲೇ ಬೇಕಾಗುತ್ತದೆ. ಇದನ್ನೇ ವಂಶವೆಂದು ಹೇಳುತ್ತೇವೆ. ನಮ್ಮ ವಂಶದವರನ್ನು ನಾವು ಮರೆಯುತ್ತೇವೆಂದರೆ ಅದು ಸರಿಯಾದುದಲ್ಲ. ಯಾಕೆಂದರೆ ಇವತ್ತು ನಾವು ಭೂಮಿಯ ಮೇಲೆ ಇದ್ದೇವೆ ಎಂಬುದಕ್ಕೆ ಕಾರಣ ನಮ್ಮ ವಂಶಜರು.

ಇನ್ನೂ ಒಂದು ಮಾತಿದೆ. ದೇವಕಾರ್ಯ ಮತ್ತು ಪಿತೃಕಾರ್ಯ ಒಂದೇ ದಿವಸ ಬಂದಾಗ ಯಾವುದನ್ನು ಮಾಡಬೇಕು? ಎಂಬ ಜಿಜ್ಞಾಸೆಗೆ ಹಿರಿಯರು ಹೇಳಿದ್ದು ಮೊದಲು ಪಿತೃಕಾರ್ಯವನ್ನು ಮಾಡು ಎಂಬುದಾಗಿ. ನಾನು ಇದ್ದೇನೆ ಎಂದರೆ ನನಗೆ ಅಜ್ಜನೂ ಇದ್ದ, ಮುತ್ತಜ್ಜನೂ ಇದ್ದ; ಮುತ್ತಜ್ಜನ ಮುತ್ತಜ್ಜನೂ ಇದ್ದ ಎಂತಲೇ ಅರ್ಥ. ಅಲ್ಲಿಗೆ ಬದುಕನ್ನು ಕೊಟ್ಟ ದೇವರಿಗಿಂತಲೂ ದೇವರ ಮತ್ತು ನಮ್ಮ ಬದುಕಿಗೆ ಸೇತುವೆಯಾಗಿ ನಿಂತ ಪಿತೃಗಳೇ ಶ್ರೇಷ್ಠ ಎಂದಾಯಿತು. ಹಾಗಾಗಿ ಪಿತೃಕಾರ್ಯ ಎಂಬುದು ಮಹಾನ್ ಕಾರ್ಯವೇ ಸರಿ.

ನಾವು ಆತ್ಮಕ್ಕೆ ಸಾವಿಲ್ಲ ಎಂದು ನಂಬಿದವರು. ದೇಹವನ್ನು ಬಿಟ್ಟಾಕ್ಷಣ ಆ ಆತ್ಮ ದೇವರನ್ನು ಸೇರುವುದು ಎಂಬುದು ನಮ್ಮ ನಂಬುಗೆ. ಆತ್ಮ ಎಂಬುದು ಏನು? ಎಂದರೆ ಅದಕ್ಕೆ ನಮ್ಮ ಪರಿಮಿತಿಯೊಳಗಷ್ಟೇ ಉತ್ತರವನ್ನು ಪಡೆದುಕೊಂಡೆವೆಯೇ ಹೊರತು ಅದರಾಚಿಗಿನದ್ದು ನಿಗೂಢ. ಮುಪ್ಪು, ಸಾವು ದೇಹಕ್ಕೇ ಹೊರತು ಆತ್ಮಕ್ಕಲ್ಲ. ಆತ್ಮಸಾಕ್ಷಿಯಾಗಿ ಹೇಳು ಎಂಬ ಪದದ ಬಳಕೆ ಹಿಂದಿನಿಂದಲೂ ಇದೆ; ಇಂದಿಗೂ ಇದೆ. ಅಂದರೆ ಆತ್ಮವಿದೆ ಎಂಬುದನ್ನು ನಾವು ನಂಬುತ್ತೇವೆ ಎಂಬುದಕ್ಕಿದು ಬಲವಾದ ಸಾಕ್ಷಿ. ಹಾಗಿದ್ದಮೇಲೆ ನಮ್ಮ ಹಿರಿಯರ ಆತ್ಮ ನಮ್ಮ ಕುಟುಂಬದಲ್ಲಿಯೇ ನಮ್ಮ ಜೊತೆಯೇ ಇರಲಾರದು ಎಂದುಕೊಳ್ಳುವುದಾದರೂ ಹೇಗೆ!

ನಮಗೆ ಆಲಯವನ್ನು ಕೊಟ್ಟವರು ಪೂರ್ವಜರು. ಅವರೀಗ ಲಯವಾಗಿದ್ದಾರೆ ಎಂದರೆ ದೇಹವನ್ನು ಆತ್ಮ ತ್ಯಜಿಸಿದೆ ಅಷ್ಟೆ. ಲಯ ಎಂಬುದರ ಅರ್ಥ ನಾಶ ಅಥವಾ ಸಾವು. ಸಾವು ಎಂಬುದು ಬಿಡುಗಡೆ; ಮುಕ್ತತೆ. ಲಯಗೊಂಡಿದ್ದು ಸೇರುವುದು ಲಯಕರ್ತನಾದ ಶಿವನನ್ನು. ಅಂದರೆ ಶಿವನ ಆಲಯ; ಅದು ಮಹಾ ಆಲಯ. ಆಲಯವನ್ನು ಹೊಂದಿದವನು ಕೊನೆಯಲ್ಲೊಮ್ಮೆ ಲಯವನ್ನು ಹೊಂದಲೇಬೇಕು. ಲಯವಾದದ್ದು ಸೇರುವುದು ಮಹಾಲಯಕ್ಕೆ. ಅಂತಹ ಮಹಾಲಯಕ್ಕೆ ಸೇರಿದ ನಮ್ಮೆಲ್ಲ ಪುರ್ವಜರನ್ನು ಮನಸಾರೆ ಸ್ಮರಿಸಿ, ನೆನಪಿಸಿಕೊಂಡು ಈ ಭೂಲೋಕದಲ್ಲಿ ನಮಗೆ ಬದುಕಲು ಅವಕಾಶವಿತ್ತಿರುವುದಕ್ಕೆ ವಂದನಾರ್ಪಣೆಯನ್ನು ಸಲ್ಲಿಸುವ ಕಾರ್ಯವೇ ಈ ಪಿತೃಕಾರ್ಯ. ಹಾಗಾಗಿ ಈ ಪಿತೃಕಾರ್ಯಕ್ಕೆಂದೇ ಮೀಸಲಾದ ಭಾದ್ರಪದ ಮಾಸದ ಅಮವಾಸ್ಯೆಯ ದಿನ ಮಹಾಲಯ ಅಮವಾಸ್ಯೆ ಎಂದೇ ಪ್ರತೀತ.

||ಸರಳವಾಗಿ ಯೋಚಿಸಿ ಸಂಸ್ಕಾರಯುತರಾಗಿ ಸರಳರಾಗಿ ಜೀವಿಸಿ||
ವಿಷ್ಣು ಭಟ್ಟ ಹೊಸ್ಮನೆ.

LEAVE A REPLY

Please enter your comment!
Please enter your name here