ಕೋಟ: ಪುರಾಣ ಪ್ರಸಿದ್ಧ ಸಾಲಿಗ್ರಾಮ ಶ್ರೀಗುರುನರಸಿಂಹ ದೇವಸ್ಥಾನದಲ್ಲಿ ಜಾತ್ರೆಯ ಪ್ರಯುಕ್ತ ಜ.16ರಂದು ಬೆಳಗ್ಗೆ ಸಾವಿರಾರು ಭಕ್ತರು ಸಮ್ಮುಖದಲ್ಲಿ ರಥೋತ್ಸವ ಅದ್ದೂರಿಯಾಗಿ ನೆರವೇರಿತು.
ಈ ಸಂದರ್ಭ ವಿವಿಧ ಉತ್ಸವಾದಿ ಕಾರ್ಯಕ್ರಮಗಳು ನಡೆದು, ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ತಂದು ರಥದಲ್ಲಿರಿಸಿ ರಥಾರೋಹಣ ಮಾಡಲಾಯಿತು. ಭಕ್ತರು ಜೈ ನರಸಿಂಹ, ಗುರುನರಸಿಂಹ, ಗೋವಿಂದ ನಾಮಸ್ಮರಣೆಯೊಂದಿಗೆ ಆಂಜನೇಯ ದೇವಸ್ಥಾನದವರೆಗೆ ರಥವನ್ನು ಎಳೆತಂದರು.
ಅನಂತರ ನೆರೆದಿದ್ದ ಭಕ್ತರು ಆಂಜನೇಯ ಹಾಗೂ ಗುರು ನರಸಿಂಹನ ದರ್ಶನ ಪಡೆದು, ರಥಕ್ಕೆ ಹಣ್ಣು ಕಾಯಿ ಸೇವೆ ನೀಡಿ ಪೂಜೆ ಸಲ್ಲಿಸಿದರು. ಅಪರಾಹ್ನ ಅನ್ನ ಸಂತ ರ್ಪಣೆ ನಡೆಯಿತು ಮತ್ತು ಪಾನಕ, ಪಣಿವಾರ ವ್ಯವಸ್ಥೆಗೊಳಿಸಲಾಗಿತ್ತು.
ಜಾತ್ರೆಯ ಪ್ರಯುಕ್ತ ಗುರುನರಸಿಂಹ ದೇವಸ್ಥಾನವನ್ನು ದೇಗುಲದ ವತಿಯಿಂದ ಹಾಗೂ ಆಂಜನೇಯ ದೇವಸ್ಥಾನವನ್ನು ಆಂಜನೇಯ ಸೇವಾ ಟ್ರಸ್ಟ್ ವತಿಯಿಂದ ವಿಶೇಷ ಹೂವಿನ ಅಲಂಕಾರದಿಂದ ಶೃಂಗರಿಸಲಾಗಿತ್ತು. ಕಾರಂತ ಬೀದಿಯನ್ನು ಬನಶ್ರೀ ಫ್ರೆಂಡ್ಸ್ ನೇತೃತ್ವದಲ್ಲಿ ವಿದ್ಯುತ್ ದೀಪದಿಂದ ಶೃಂಗರಿಸಲಾಗಿತ್ತು.