ಪಡುಬಿದ್ರಿ: ರುದ್ರ ದೇವರು ಬೇಗನೇ ಒಲಿಯುವ ದೇವರಾಗಿದ್ದಾರೆ. ಆತನು ಮನಃಕಾರಕನಾಗಿ ನಮಗೆಲ್ಲಾ ಶೀಘ್ರವೇ ಅನುಗ್ರಹ ಗೈವ ದೇವರಾಗಿದ್ದಾರೆ. ಈಗಾಗಲೇ ಎರಡು ದೇಗುಲಗಳ ಜೀರ್ಣೋದ್ಧಾರ ಕಾರ್ಯ ನಡೆದಿದ್ದು ಇನ್ನು ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಆಗಬೇಕಿದೆ ಎನ್ನುವುದು ನಮ್ಮ ಆಕಾಂಕ್ಷೆಯಾಗಿದೆ.
ಹೆಜಮಾಡಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳಿಗೆ ಪುತ್ತಿಗೆ ಮಠದ ವತಿಯಿಂದ 10 ಲಕ್ಷ ರೂ. ಗಳನ್ನು ನೀಡುವುದಾಗಿ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ
ತೀರ್ಥ ಶ್ರೀಪಾದರು ಹೇಳಿದರು. ಅವರು ಅ. 14ರಂದು ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸರ್ವದೋಷ ಪರಿಹಾರ, ಜೀರ್ಣೋದ್ಧಾರ ಕಾರ್ಯಗಳಿಗೆ ಸಂಕಲ್ಪಕ್ಕಾಗಿ ನಡೆದಿದ್ದ ಕಾಣಿಕೆ ಸಮರ್ಪಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ದೇಗುಲದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆಯನ್ನಿತ್ತು ಮಾತನಾಡಿದರು.
ನಮ್ಮ ತಪ್ಪಿಗೆ ದೇವರಲ್ಲಿ ಕ್ಷಮೆ ಕೇಳುವಂತಾದುದು ದೊಡ್ಡ ಗುಣ. ದೇವರ ಅನುಗ್ರಹಕ್ಕಾಗಿಯೇ ಪ್ರಪಂಚದಾದ್ಯಂತ ದೇವಸ್ಥಾನಗಳ ನಿರ್ಮಾಣ ಪುತ್ತಿಗೆ ಮಠದ ಆಶಯದಲ್ಲಿ ಆಗಿದ್ದು ಈಗಾಗಲೇ ಒಟ್ಟು 11 ದೇಗುಲಗಳನ್ನು ವಿಶ್ವದಾದ್ಯಂತ ನಿರ್ಮಿಸಲಾಗಿದೆ. ಹಾಗೆಯೇ ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಸಂಕಲ್ಪವನ್ನು ಈಗಾಗಲೇ ನಡೆಸಲಾಗಿದೆ ಎಂದವರು ತಿಳಿಸಿದರು.
ದೇಗುಲದ ಆಡಳಿತ ಸಮಿತಿ ಅಧ್ಯಕ್ಷ ದಯಾನಂದ ಹೆಜಮಾಡಿ ಸ್ವಾಮೀಜಿಯವರನ್ನು ಸ್ವಾಗತಿಸಿದರು. ಶ್ರೀ ದೇವರ ದರ್ಶನ, ಪೂಜೆಗಳ ಬಳಿಕ ಶ್ರೀ ಪಾದರಿಗೆ ಮಾಲಿಕೆ ಮಂಗಳಾರತಿ
ನೆರವೇರಿಸಲಾಯಿತು. ಬಳಿಕ ಶ್ರೀಗಳು ತಮ್ಮ ಕಾಣಿಕೆ ಸಮರ್ಪಿಸುವುದರೊಂದಿಗೆ ಸಮಷ್ಟಿಯ ಜೀರ್ಣೋದ್ಧಾರ ಸಂಕಲ್ಪಗಳಿಗೆ ಚಾಲನೆಯನ್ನಿತ್ತರು. ಬಳಿಕ ಶ್ರೀ ದೇಗುಲದ
ಧ್ವಜಸ್ತಂಭದ ಎದುರು ಗ್ರಾಮಸ್ಥರು ತಮ್ಮ ಮುಷ್ಟಿ ಕಾಣಿಕೆ ಸಮರ್ಪಣೆಗೈದರು.
ಈ ಸಂದರ್ಭ ಶ್ರೀ ದೇವಸ್ಥಾನದ ತಂತ್ರಿಗಳಾದ ಎಡಪದವು ರಾಧಾಕೃಷ್ಣ ತಂತ್ರಿ, ಆಡಳಿತ ಸಮಿತಿಯ ಸದಸ್ಯರಾದ ಗಣೇಶ್ ಹೆಜಮಾಡಿ, ಶಂಕರ್ ಶೆಟ್ಟಿ, ಸುರೇಶ್ ದೇವಾಡಿಗ, ಪಾಂಡುರಂಗ ಕರ್ಕೇರ, ರವೀಂದ್ರ ಎನ್. ಕೋಟ್ಯಾನ್, ಸಂಜೀವ ಪಿ., ಶೇಷಗಿರಿ ರಾವ್, ಜಯಂತ ಪುತ್ರನ್, ಇಂದ್ರೇಶ ಪಿ. ಸಾಲ್ಯಾನ್, ಹರೀಶ್ ಶೆಣೈ, ಜಯಂತಿ ಶೇಖರ್,
ಹೆಜಮಾಡಿ ಗ್ರಾ. ಪಂ. ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್, ಉಪಾಧ್ಯಕ್ಷ ಸುಧಾಕರ್ ಕರ್ಕೇರ, ತಾ. ಪಂ. ಸದಸ್ಯೆ ರೇಣುಕಾ ಪುತ್ರನ್, ಅರ್ಚಕ ರಾಮಚಂದ್ರ ಆಚಾರ್ಯ,
ಪದ್ಮನಾಭ ಆಚಾರ್ಯ, ಶ್ರೀನಿವಾಸ ಆಚಾರ್ಯ, ರಂಗಣ್ಣ ಭಟ್, ಪದ್ಮನಾಭ ಭಟ್ ಮತ್ತಿತರರು ಉಪಸ್ಥಿತರಿದ್ದರು.