Home ನಂಬಿಕೆ ಸುತ್ತಮುತ್ತ ದೇವಾಲಯಗಳಲ್ಲಿ ಗಂಟೆಬಾರಿಸಿ ನಮಸ್ಕರಿಸುವುದೇಕೆ?

ದೇವಾಲಯಗಳಲ್ಲಿ ಗಂಟೆಬಾರಿಸಿ ನಮಸ್ಕರಿಸುವುದೇಕೆ?

4975
0
SHARE

ನಾವು ಯಾವುದೇ ದೇವಾಲಯಕ್ಕೆ ಹೋದರೂ  ಬೇರೆಬೇರೆ ಗಾತ್ರದ, ಬಗೆಬಗೆಯ ಆಕೃತಿಯ ಗಂಟೆಗಳು ತೂಗಿಹಾಕಿರುವುದನ್ನು ಕಾಣುತ್ತೇವೆ. ಅಲ್ಲದೆ ನಮಗೆ ಅರಿವಿದ್ದೋ ಅರಿವಿಲ್ಲದೆಯೋ ಅವುಗಳಲ್ಲಿ ಒಂದು ಗಂಟೆಯನ್ನು ಬಾರಿಸಿ ದೇವರಿಗೆ ನಮಸ್ಕರಿಸುತ್ತೇವೆ. ಇನ್ನು ಕೆಲವರಿಗೆ ‘ದೇವಾಲಯದಲ್ಲಿ ಮೌನದಿಂದಿರಬೇಕಾದ ಅಗತ್ಯವಿದೆ;ಆದರೆ ಈ ಗಂಟೆಯನ್ನು ಬಂದವರೆಲ್ಲರೂ ಬಾರಿಸುತ್ತ ಶಬ್ದಮಾಲಿನ್ಯವನ್ನು ಮಾಡುತ್ತಿರುವರಲ್ಲ!’ ಎಂದೆನಿಸಿದರೆ ತಪ್ಪೇನಲ್ಲ. ಯಾಕೆಂದರೆ ಕೈಗೆ ಗಂಟೆ ಸಿಕ್ಕಿತೆಂದರೆ ಅದನ್ನು ಐದಾರುಬಾರಿ ಮತ್ತೆಮತ್ತೆ ಬಾರಿಸಿ ಗಲಾಟೆ ಎಬ್ಬಿಸುವವರನ್ನು ನಾವೆಲ್ಲರೂ ನೋಡಿರುತ್ತೇವೆ.  ಗಂಟೆಬಾರಿಸುವ ಕ್ರಮ ಮತ್ತು ಅದರ ಅಗತ್ಯವನ್ನು ತಿಳಿಯದೇ ಇದ್ದಾಗ ಗಂಟೆಯ ಶಬ್ದಗಳು ದೇವರಲ್ಲಿ ಭಕ್ತಿ ಹುಟ್ಟಿಸುವ ಬದಲು ಶಬ್ದಮಾಲಿನ್ಯವನ್ನೇ ಉಂಟುಮಾಡುತ್ತವೆ.

ಮಂಗಳಾರತಿಯ ಸಂದರ್ಭವನ್ನು ಹೊರತುಪಡಿಸಿ, ನಾವು ನಮಸ್ಕರಿಸುವ ಮೊದಲು ಗಂಟೆಯನ್ನು ಕೇವಲ ಒಂದು ಬಾರಿ ಮಾತ್ರ ಬಾರಿಸಬೇಕು. ಇದು ಕ್ರಮ. ಆದರೆ ಮನಬಂದಂತೆ ಮೂರೋ-ನಾಲ್ಕೋ ಅಥವಾ ಅದಕ್ಕೋ ಹೆಚ್ಚು ಬಾರಿ ‘ಢಂ..ಢಂ..ಢಂ..ಢಂ..ಢಂ…’ ಎಂದು ಬಾರಿಸುತ್ತ ಹೋದರೆ ಅದು ದೇವಾಲಯದ ಮೌನವನ್ನು ಹಾಳು ಮಾಡಿದಂತೆಯೇ ಸರಿ. ಹಾಗಾಗಿ ಒಮ್ಮೆ ಮಾತ್ರ ಬಾರಿಸುವುದು ಸೂಕ್ತ.

‘ಯಾಕೆ ಒಮ್ಮೆ ಮಾತ್ರ ಬಾರಿಸಬೇಕು? ನನ್ನಿಷ್ಟ ಎಷ್ಟು ಬಾರಿಯಾದರೂ ಗಂಟೆಯನ್ನು ಬಾರಿಸುತ್ತೇನೆ’ ಎಂದು ನಮಗನಿಸುವುದು ಸಹಜ. ಆದರೆ ಗಂಟಾನಾದದ ಹಿಂದೆ ಮಹತ್ತ್ವವೊಂದು ಅಡಗಿದೆ. ನಾವು ಒಮ್ಮೆ ಬಾರಿಸಿದ ಗಂಟೆಯ ಶಬ್ದ ಸಣ್ಣದಾಗುತ್ತ ಹೋಗಿ ಕೊನೆಗೊಳ್ಳುತ್ತದೆ. ಅದು ಅರ್ಧದಿಂದ ಒಂದು ನಿಮಿಷಗಳ ಕಾಲಾವಧಿಯೂ ಇರಬಹುದು. ಇದು ಗಂಟೆಯ ಗಾತ್ರ ಹಾಗೂ ಬಾರಿಸಿದ ರೀತಿಯನ್ನು ಅವಲಂಬಿಸಿದೆ. ಸಣ್ಣದಾಗಿ ಬಾರಿಸಿದಾಗ ಕಡಿಮೆ ಅವಧಿಯಲ್ಲಿಯೂ ದೊಡ್ಡದಾಗಿ ಅಥವಾ ಗಟ್ಟಿಯಾಗಿ ಬಾರಿಸಿದಾಗ ದಿರ್ಘಾವಧಿಯಲ್ಲಿಯೂ ಅದರ ಶಬ್ದ ಕ್ಷೀಣಿಸುತ್ತ ಹೋಗಿ ಮರೆಯಾಗತ್ತದೆ. ಗಂಟೆಯನ್ನು ಬಾರಿಸುವುದು ದೇವರಿಗೆ ತಾನು ಬಂದಿದ್ದೇನೆಂದು ಹೇಳುವುದಕ್ಕಲ್ಲ; ನಾನು ದೇವರ ಬಳಿ ಇದ್ದೇನೆಂಬುದನ್ನು ನನಗೇ ನಾನು ಹೇಳಿಕೊಳ್ಳುವುಕ್ಕೆ.

ನಾವು ದೇವಾಲಯಕ್ಕೆ ಹೋಗುವುದುಕ್ಕೆ ಮೊದಲ ಕಾರಣವೇ ಮನಸ್ಸಿನ ನೆಮ್ಮದಿ. ಬದುಕಿನ ಜಂಜಾಟದಿಂದಾಗಿ ತಲೆಯಲ್ಲಿ ಓಡಾಡುವ ಚಿಂತೆಗಳನ್ನು ಇಟ್ಟುಕೊಂಡು ದೇವಾಲಯಕ್ಕೆ ಹೋಗಿ ನಮಸ್ಕರಿಸುವಾಗಲೂ ನಮ್ಮ ತಲೆಯಲ್ಲಿ ಯಾವುದೋ ಆಲೋಚನೆಗಳು ಓಡಾಡುವ ಸಾಧ್ಯತೆಗಳಿವೆ. ಅಲ್ಲದೆ ನಮ್ಮ ಚಿತ್ತ ದೇವಾಲಯದಲ್ಲಿನ ಆಗುಹೋಗುಗಳ ಕಡೆಗೆ ಗಮನಕೊಡುವ ಸಾಧ್ಯತೆಯೂ ಇದೆ. ಆದುದರಿಂದಲೇ ನಾವು ದೇವಾಲಯಕ್ಕೆ ಕಾಲಿಟ್ಟ ತಕ್ಷಣ ಅಥವಾ ನಮಸ್ಕರಿಸುವ ಮೊದಲು ಗಂಟೆಯನ್ನು ಬಾರಿಸುತ್ತೇವೆ. ಆ ಗಂಟೆ ‘ನೀನೀಗ ದೇವಾಲಯದಲ್ಲಿದ್ದೀಯ, ಮನದಲ್ಲಿ ಬೇರೆ ಯಾವುದೇ ಯೋಚನೆಗಳಿಲ್ಲದೆ, ಭೌತಿಕ ಬಾಧೆಗಳನ್ನೂ ಮರೆತು ನಮಸ್ಕರಿಸು’ ಎಂದು ನಮ್ಮನ್ನು ಎಚ್ಚರಿಸುತ್ತದೆ. ಆ ಕ್ಷಣ ದೇವರಲ್ಲಿ ನಮ್ಮ ಮನಸ್ಸನ್ನು ಕೇಂದ್ರೀಕರಿಸಲು ಅನುಕೂಲವಾಗುವುದೇ ಈ ಗಂಟೆ. ಇದೇ ಗಂಟಾನಾದದ ಮಹತ್ತ್ವ.

ಗಂಟೆಯನ್ನು ಒಮ್ಮೆ ಮಾತ್ರ ಬಾರಿಸಿ. ಮತ್ತು ಆ ಗಂಟೆಕೊನೆಯಾಗುವ ತನಕವೂ ಅದರಲ್ಲಿಯೇ ನಿಮ್ಮ ಗಮನವಿರಲಿ. ಆಗ ಅದರ ದೀರ್ಘತೆ ನಿಮಗೆ ತಿಳಿದು ಅರಿವಿಗೆ ಬರುತ್ತದೆ. ಅಲ್ಲದೆ ಗಂಟೆಯಿಂದ ಹೊರಡುವ “ಓಂ” ಎಂಬ ಶಬ್ದ ನಿಮ್ಮರಿವಿಗೆ ಬರುತ್ತದೆ. ನೀವು ಬಾರಿಸಿದ ಗಂಟೆಯ ನಾದವನ್ನಷ್ಟೇ ಹಿಂಬಾಲಿಸಿ. ಅದೇ ಸಮಯಕ್ಕೆ ನೀವು ಏಕಾಗ್ರತೆಯನ್ನು ಸಾಧಿಸುತ್ತೀರಿ. ಆಗ ಮನಸ್ಸು ಶುದ್ಧವಾಗುತ್ತದೆ. ಶುದ್ಧಮನಸ್ಸನಿಂದ ನಮಸ್ಕರಿಸಿದರೆ ದೇವರು ಸಂಪ್ರೀತನಾಗುತ್ತಾನೆ. ಅಲ್ಲದೆ  ನಿಮ್ಮ ಮನಸ್ಸೂ ಕೂಡ ಉಲ್ಲಸಿತವಾಗುತ್ತದೆ.

 

ಗಂಟೆಯ ನಾದ: ಏಕಾಗ್ರತೆಯೂ ಒಂದು ಸಾಧನೆ. ಈ  ಗಂಟೆ ಆ ಕ್ಷಣದ ಏಕಾಗ್ರತೆಯ ಮಾರ್ಗ. ಏಕಾಗ್ರತೆ ಮನುಷ್ಯನ ಶಕ್ತಿಯೂ ಹೌದು;ಭಕ್ತಿಯೂ ಹೌದು.

 – ವಿಷ್ಣು ಭಟ್ಟ, ಹೊಸ್ಮನೆ.

ಓಂ ಶ್ರೀ ಸಾಯಿ ಜ್ಯೋತಿಷ್ಯಾಲಯ
South Canara’s Famous Asrologer
Family issue, ಮದುವೆಯಲ್ಲಿ ವಿಘ್ನ, ಸತಿ-ಪತಿ ಕಲಹ, Court Case, ವಶೀಕರಣ, Love problems, ಸದಾ ಕುಟುಂಬದಲ್ಲಿ ಕಲಹ, Money problem, ಕೆಲಸದಲ್ಲಿ ಕಿರಿಕಿರಿ, ಮಕ್ಕಳ ಸಮಸ್ಯೆ, ವ್ಯಾಪಾರದಲ್ಲಿ ಅಡೆ-ತಡೆ, Loan Issue, ನಿಮ್ಮ ಯಾವುದೇ ಸಮಸ್ಯೆಗೆ 3 ದಿನಗಳಲ್ಲಿ ಶಾಶ್ವತ ಪರಿಹಾರ.
ಹೊಟೇಲ್ ದುರ್ಗಾ ಇಂಟರ್ ನ್ಯಾಶನಲ್, ರೂಂ. ನಂ. 310, 3ನೇ ಮಹಡಿ, ಸಿಟಿ ಬಸ್ ಸ್ಟ್ಯಾಂಡ್ ಹತ್ತಿರ, ಉಡುಪಿ.
ಪಂಡಿತ್ ಸಾಯಿನಾಥ್ ಜೋಶಿ : Ph- 98449-44242

LEAVE A REPLY

Please enter your comment!
Please enter your name here