ಬ್ರಹ್ಮಾವರ: ನೀಲಾವರ ಶ್ರೀ ಮಹಿಷಮರ್ದಿನೀ ದೇವಸ್ಥಾನವು ಪುರಾತನ, ಐತಿಹಾಸಿಕ ಮಹತ್ವದ ಪುಣ್ಯ ಕ್ಷೇತ್ರವೆನಿಸಿದೆ. ಶ್ರೀ ದೇವಿಯನ್ನು ಕುಲದೇವರಾಗಿ, ಆರಾಧ್ಯ ದೇವರಾಗಿ ಆರಾಧಿಸುವ ಸಾಕಷ್ಟು ಭಕ್ತ ಸಮೂಹ ದೇಶ, ವಿದೇಶಗಳಲ್ಲಿ ನೆಲೆಸಿದ್ದಾರೆ. ಸಾವಿರಾರು ವರ್ಷಗಳ ಇತಿಹಾಸದ ದಾಖಲೆಯುಳ್ಳ ಈ ದೇವಸ್ಥಾನವು ಈಗ ಜೀರ್ಣಾವಸ್ಥೆಯಲ್ಲಿದ್ದು, ಸಮಗ್ರ ಜೀರ್ಣೋದ್ಧಾರದ ಹಂತದಲ್ಲಿದೆ.
ದೇವಾಷ್ಟಮಂಗಲ ಪ್ರಶ್ನೆ
ಜೀರ್ಣೋದ್ಧಾರ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ದೇವಾಷ್ಟಮಂಗಲ ಪ್ರಶ್ನೆ ಇಡಲಾಯಿತು. ದೈವಜ್ಞರು ಅಷ್ಟಮಂಗಲ ಪ್ರಶ್ನೆಯಲ್ಲಿ ಚಿಂತನೆ ನಡೆಸಿರುವ ಪ್ರಕಾರ ಕಂಡು ಬಂದ ಕೆಲವೊಂದು ದೋಷಗಳಿಗೆ ಪರಿಹಾರ ಹಾಗೂ ಮುಂದಿನ ನಡಾವಳಿಯ ಬಗ್ಗೆ ಉತ್ತರ ಹುಡುಕಿ ಪ್ರಾಯಶ್ಚಿತ್ತಾದಿ ಪರಿಹಾರದ ಕುರಿತಂತೆ ಮಾರ್ಗದರ್ಶನ ನೀಡಿದರು.
ಅದರಂತೆ ಸಮಗ್ರ ಜೀರ್ಣೋದ್ಧಾರಕಾರ್ಯಕ್ಕೆ ಪೂರ್ವಭಾವಿಯಾಗಿ ಮುಂದಿನ ಪ್ರಾಯಶ್ಚಿತ್ತಾದಿ ಧಾರ್ಮಿಕ ವಿಧಿಗಳು ಭಕ್ತರ, ಆರಾಧಕರ ಹಾಗೂ ಗ್ರಾಮಸ್ಥರ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ.
ಮುಷ್ಟಿಕಾಣಿಕೆ
ಜ.28ರ ಬೆಳಗ್ಗೆ 10.30ಕ್ಕೆ ಶ್ರೀ ದೇವಿಯ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ ಮತ್ತು ಮುಷ್ಟಿಕಾಣಿಕೆ ಸಮರ್ಪಣಾ ಕಾರ್ಯ ಜರಗಲಿದೆ.
ಧಾರ್ಮಿಕ ಕಾರ್ಯಗಳು
ಜ.22ರಂದು ಪಂಚಮಿಕಾನದಲ್ಲಿ ನವಕಪ್ರಧಾನ ಕಲಶಾಭಿಷೇಕ, ಅಧಿವಾಸ ಹೋಮ, ಜ.28ರಂದು ಶ್ರೀ ಕ್ಷೇತ್ರದಲ್ಲಿ ಮುಷ್ಟಿ ಕಾಣಿಕೆ ಸಮರ್ಪಣೆ, ರಾತ್ರಿ ಭಜನೆ, ದೊಡ್ಡರಂಗ ಪೂಜೆ ನಡೆಯಲಿದೆ.
ಜ.29ರಂದು ವೀರಭದ್ರ ಮೂಲ ಮಂತ್ರ ಜಪ, ವೇದಪಾರಾಯಣಗಳ ಪ್ರಾರಂಭ, ಜ.30ರಂದು ತ್ರಿಕಾಲ ಪೂಜೆ, ವೀರಭದ್ರ ಮೂಲ ಮಂತ್ರ ಹೋಮ, ಜ.31ರ ಸಂಜೆ ವೀರಭದ್ರ ಹೋಮ, ನರಸಿಂಹ ಹೋಮ, ಫೆ.1ರ ಸಂಜೆ ಸುದರ್ಶನ ಹೋಮ, ಮಹಾ ಸುದರ್ಶನ ಹೋಮ, ತ್ರಿಷ್ಪುಪ್ ಹೋಮಾದಿಗಳು, ಫೆ.2ರ ರಾತ್ರಿ ಅಘೋರ ಹೋಮ, ವನದುರ್ಗಾ ಹೋಮ, ಭಾದಾಕರ್ಷಣೆ, ವಾಸ್ತುಹೋಮ, ರಾಕ್ಷೋಘ್ನ ಹೋಮಾದಿ ಗಳು ನಡೆಯಲಿವೆ.
ಫೆ.3ರ ಬೆಳಗ್ಗೆ ನವಕ ಪ್ರಧಾನ ಕಲಶ, ಅಧಿವಾಸ ಹೋಮ, ವಿಷ್ಣು ಸಹಸ್ರನಾಮ ಪಾರಾಯಣ, 48 ಸಾವಿರ ಸಂಖ್ಯಾ ತಿಲಹೋಮ, ದ್ವಾದಶ ಮೂರ್ತಿ ಆರಾಧನೆ, ಭಾಗವತ ಪಾರಾಯಣ, ಫೆ.4ರಂದು ಸಾಯುಜ್ಯ ಪೂಜೆ, ದಕ್ಷಿಣಾ ಮೂರ್ತಿ ಪೂಜೆ, ದ್ವಾದಶ ಸುವಾಸಿನಿ ಪೂಜೆ, ದ್ವಾದಶ ದಂಪತಿಗಳ ಆರಾಧನೆ, ಫೆ.5ರಂದು ಗಣಪತಿ ಅಥರ್ವಶೀರ್ಷ ಹೋಮ, ಗಾಯತ್ರಿ ಹೋಮ, ಐಕ್ಯಮತ್ಯ ಹೋಮಾಧಿಗಳು ಜರಗಲಿದೆ.
ಫೆ.6ರ ಬೆಳಗ್ಗೆ ಚಂಡಿಕಾ ಹೋಮ ವೀರಭದ್ರ ಅನುಗ್ರಹ ಕಲಶ, ಸಂಜೆ ವೀರಭದ್ರ ಕಲಾಸಂಕೋಚ, ಫೆ.7ರಂದು ಮಹಾಗಣಪತಿ ಹೋಮ, ಮೃತ್ಯುಂಜಯ ಹೋಮ, ಸಪ್ತಶತಿ ಪಾರಾಯಣ, ಫೆ.8ರ ಸಂಜೆ ವಿವಿಧ ಧಾರ್ಮಿಕ ಕಾರ್ಯ ನಡೆಯಲಿವೆ.
ವೀರಭದ್ರ ಪ್ರತಿಷ್ಠೆ
ಫೆ.10ರ ಬೆಳಗ್ಗೆ ನೂತನ ವೀರಭದ್ರ ದೇವರ ಬಿಂಬ ಪ್ರತಿಷ್ಠಾಪನೆ, ಜೀವ ಕುಂಭಾಭಿಷೇಕ, ತತ್ವ ಹೋಮ, ಶಾಂತಿ ಪ್ರಾಯಶ್ಚಿತ್ತ ಹೋಮ, ಅಷ್ಟೋತ್ತರ ಶತ ಪರಿಕಲಶ ಸಹಿತ ಬ್ರಹ್ಮಕಲಶ ಸ್ಥಾಪನೆ, ಅಧಿವಾಸ ಹೋಮ, ಬ್ರಹ್ಮಕಲಶಾಭಿಷೇಕ, ಮಹಾ ಪೂಜೆ, ಅನ್ನಸಂತರ್ಪಣೆ, ರಾತ್ರಿ ರಂಗ ಪೂಜೆ, ಢಮರು ಸೇವೆ, ಫೆ.11ರಂದು ತತ್ವಹೋಮ, ಮೂಲ ಬಿಂಬಕ್ಕೆ 48 ದ್ರವ್ಯಕಲಶ ಅಭಿಷೇಕ, ಫೆ.18ಕ್ಕೆ ಸರ್ಪ ಸಂಸ್ಕಾರ, ತಿಲ ಹೋಮ, ಸಂಜೆ ಆಶ್ಲೇಷಾ ಬಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.