ಆಲಂಕಾರು : ಕುಮಾರಧಾರಾ ನದಿಯ ಮಡಿಲಿನಲ್ಲಿರುವ ಬುಡೇರಿಯಾದ ಗುಡ್ಡ ಪ್ರದೇಶದಲ್ಲಿ ದೈವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಮಹೋತ್ಸವ ಹಾಗೂ ನಾಗ ತನುತರ್ಪಣ ಫೆ. 5ರಿಂದ 7ರ ವರೆಗೆ ತಂತ್ರಿ ಕೆಮ್ಮಿಂಜೆ ಸುಬ್ರಹ್ಮಣ್ಯ ಬಳ್ಳಕ್ಕುರಾಯರ ನೇತೃತ್ವದಲ್ಲಿ ನಡೆಯಲಿದೆ. ಮಾ. 10 ಹಾಗೂ 11ರಂದು ಉಳ್ಳಾಲ್ತಿ ಹಾಗೂ ಉಳ್ಳಾಕ್ಲು ಸಪರಿವಾರ ದೈವಗಳ ನರ್ತನ ಸೇವೆ ಜರಗಲಿದೆ.
ಉಪ್ಪಿನಂಗಡಿ – ಕಡಬ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೆದಿಲ ಎಂಬಲ್ಲಿಂದ ಅರ್ಧ ಕಿ.ಮೀ. ದೂರದಲ್ಲಿ ಬುಡೇರಿಯಾ ಕ್ಷೇತ್ರವಿದೆ. 1999ರಲ್ಲಿ ಮಾಡಾವು ವೆಂಕಟರಮಣ ಜೋಯಿಸರ ಮುಖೇನ ಪ್ರಶ್ನೆ ಇರಿಸಿ, ಜೀರ್ಣೋದ್ಧಾರಕ್ಕೆ ಚಾಲನೆ ನೀಡಲಾಗಿತ್ತು. 2005ರಲ್ಲಿ ವೇ| ಮೂ| ಸೀತಾರಾಮ ಕಲ್ಲೂರಾಯರ ನೇತೃತ್ವದಲ್ಲಿ ಅನುಜ್ಞಾ ಕಲಶ ನೆರವೇರಿಸಿ, ಉಳ್ಳಾಲ್ತಿ, ಉಳ್ಳಾಕ್ಲು ದೈವಗಳಿಗೆ ಅಂತರ ಮಾಡ, ಪರಿವಾರ ದೈವಗಳಿಗೆ ಗುಡಿ ರಚನೆ, ನಾಗದೇವರಿಗೆ ಕಟ್ಟೆ ರಚನೆ, ಬಾವಿ, ಸುತ್ತು ಆವರಣ, ದಕ್ಷಿಣ ದಿಕ್ಕಿನಲ್ಲಿ ಭದ್ರತಾ ಕೊಠಡಿಗಳಿರುವ ಪಡಶಾಲೆ ರಚನೆ, ಮಾಡ ಹಾಗೂ ಗುಡಿಗಳಿಗೆ ತಾಮ್ರದ ಹೊದಿಕೆಗಳನ್ನು ನವೀಕರಿಸಿ, 2006ರ ಜ. 20ರಂದು ಬ್ರಹ್ಮಕಲಶೊತ್ಸವ ನಡೆಸಲಾಗಿತ್ತು.
ಬುಡೇರಿಯಾ ಕ್ಷೇತ್ರದಲ್ಲಿ ನೆಲೆ ನಿಂತಿರುವ ಶ್ರೀದೇವಿ ಉಳ್ಳಾಲ್ತಿ, ಉಳ್ಳಾಕ್ಲು ಹಾಗೂ ದಂಡನಾಯಕ ಕಲ್ಕುಡ ಅನಾದಿ ಕಾಲದಲ್ಲಿ ಸುಬ್ರಹ್ಮಣ್ಯದಿಂದ ಹೊರಟು ಚಾರ್ವಾಕ ಗ್ರಾಮದ ಕುಂಬ್ಲಾಡಿ ಶ್ರೀ ಬಾಲಸುಬ್ರಹ್ಮಣ್ಯ ದೇವರ ಸನ್ನಿಧಿ ಸಮೀಪದ ನಾಲ್ಕಂಬ ಎಂಬಲ್ಲಿ ಭಕ್ತರ ಆರಾಧನೆಯನ್ನು ಸ್ವೀಕರಿಸಿದರು. ಬಳಿಕ ಕುಮಾರಾಧಾರಾ ನದಿ ದಾಟಿ ಆಲಂಕಾರು ಗ್ರಾಮದ ಬುಡೇರಿಯಾ (ಬುಡಾರ) ಬೈಲಿನ ಎತ್ತರದ ಗುಡ್ಡದಲ್ಲಿ ವಾಸ್ತವ್ಯ ಹೂಡಿ ಭಕ್ತರ ಪಾಲಿನ ಆರಾಧ್ಯ ದೈವವಾದರು ಎನ್ನುವ ಪ್ರತೀತಿ ಇದೆ. ಶ್ರೀದೇವಿ ಉಳ್ಳಾಲ್ತಿ ಉಳ್ಳಾಕ್ಲು ಪರಿವಾರ ದೈವಗಳು ನೆಲೆಸಿದ ಬುಡಾರ ಬೈಲು ಕ್ರಮೇಣ ಬುಡೇರಿಯಾ ಆಗಿ ಪ್ರಸಿದ್ಧಿಗೆ ಬಂದಿದೆ.
ಕಷ್ಟಕಾರ್ಪಣ್ಯಗಳ ಈಡೇರಿಕೆ ಸಂಕಲ್ಪಕ್ಕಾಗಿ ಪ್ರತಿ ಮಂಗಳವಾರ ಪೂಜೆ, ನವರಾತ್ರಿ, ದೀಪಾವಳಿಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಸಂತಾನ ಪ್ರಾಪ್ತಿ, ಮದುವೆ ಯೋಗ, ಉದ್ಯೋಗ ಸಹಿತ ಹಲವು ಬೇಡಿಕೆಗಳ ಈಡೇರಿಕೆಗಾಗಿ ಭಕ್ತರು ಇಲ್ಲಿಗೆ ಹರಕೆ ಹೇಳಿಕೊಳ್ಳುತ್ತಾರೆ.