Home ನಂಬಿಕೆ ಸುತ್ತಮುತ್ತ ಮೂರ್ತಿ ಪೂಜೆಯ ಮೂಲವೇನಿರಬಹುದು?

ಮೂರ್ತಿ ಪೂಜೆಯ ಮೂಲವೇನಿರಬಹುದು?

8073
0
SHARE
ಮನುಷ್ಯ ಜ್ಞಾನಿಯಾಗುತ್ತ ಹೋದಂತೆ ಅವನಲ್ಲಿ ಪ್ರಶ್ನೆಗಳು ಉದ್ಭವಿಸುವುದು ಸಹಜ. ಅಂತಹ ಪ್ರಶ್ನೆಗಳಲ್ಲಿ ಈ ‘ಮೂರ್ತಿಪೂಜೆ ಯಾಕೆ? ಏನು?’ ಎಂಬ ಪ್ರಶ್ನೆಯೂ ಹೊರತಾದುದಲ್ಲ. ಮೂರ್ತಿಯನ್ನಿಟ್ಟು ಅದರಲ್ಲಿ ದೇವರನ್ನು ಕಾಣುವವನು ಭಕ್ತ. ಮೂರ್ತಿಯಿಲ್ಲದೆಯೂ ನಿರ್ವಾತದಲ್ಲಿ ದೇವರನ್ನು ಕಾಣುತ್ತಾನೆಂದಾದರೆ ಆತ ದೇವರ ಬಳಿಯಲ್ಲಿಯೇ ಇದ್ದಾನೆಂದು ಅರ್ಥೈಸಬಹುದು. ಯಾಕೆಂದರೆ ಅವನ ಮನಸ್ಸು ಅಷ್ಟು ಬಲವಾದ ಏಕಾಗ್ರತೆಯನ್ನೂ ತಪೋಬಲವನ್ನೂ ಹೊಂದಿದ್ದಾಗ ಮಾತ್ರ ಇದು ಸಾಧ್ಯ.
ಏನೇ ಹೇಳಿದರೂ ಮಾನವನು ಚಂಚಲ ಮನಸ್ಸಿನವನು. ವಯೋಗುಣಕ್ಕನುಗುಣವಾಗಿ ಅವನ ಚಿತ್ತಚಂಚಲತೆಯಲ್ಲಿ ಬದಲಾವಣೆಗಳಾಗಬಹುದೇ ಹೊರತು ಅದರಿಂದ ಪರಿಪೂರ್ಣ ಬಿಡುಗಡೆ ಹೊಂದಲು ಅಸಾಧ್ಯ. ಈ ಚಿತ್ತಚಾಂಚಲ್ಯಕ್ಕೆ ಮನಸು ಮತ್ತು ಇಂದ್ರಿಯಗಳೇ ಮೂಲ ಕಾರಣ. ಮನಸ್ಸಿನ ಏಕಾಗ್ರತೆ ಮತ್ತು ಆ ಮೂಲಕ ಇಂದ್ರಿಯಗಳ ನಿಗ್ರಹವನ್ನು ಮಾಡಲು ನಾವು ದೇವರಸ್ತುತಿಯ ದಾರಿಯನ್ನು ಈಗಾಗಲೇ ಕಂಡುಕೊಂಡಿದ್ದೇವೆ.
ಆದರೆ ದೇವರತ್ತ ನಮ್ಮ ಮನಸ್ಸನ್ನು ಕೇಂದ್ರೀಕರಿಸುವುದು ಸುಲಭಸಾಧ್ಯವಾದುದಲ್ಲ. ಅಲ್ಲಿ ನಮಗೊಂದು ಗೋಚರವಾದ ಅಂಶ ಬೇಕೇಬೇಕು. ಮೂರ್ತಿಯೇ ಇಲ್ಲದ ಸ್ಥಳವನ್ನು ತೋರಿಸಿ ಇಲ್ಲಿ ದೇವರಿದ್ದಾನೆಂದು ನಮ್ಮ ಮನಸ್ಸಿಗೆ ಬಲವಾಗಿ ತಲುಪಿಸಲು ಸಾಧ್ಯವಿಲ್ಲ. ಹಾಗಾಗಿ ನಮಗೆ ಪೂಜಿಸಲು ಅಂದರೆ ನಮ್ಮ ಮನಸ್ಸನ್ನು ನಿಯಂತ್ರಿಸಲು ದೇವರೆಂಬ ಮೂರ್ತಿಯ ರೂಪ ಬೇಕು. ಎಂಬಲ್ಲಿಗೆ ಮನೋನಿಗ್ರಹದ ಗೋಚರಸಾಧನವೇ ದೇವರ ಮೂರ್ತಿ. ಆಕಾರ ಆಕೃತಿಗಳಿಲ್ಲದೆ ನಾವು ಏನನ್ನೂ ಕಲ್ಪಿಸಿಕೊಳ್ಳಲು ಅಸಾಧ್ಯ. ಆಗ ನಾವು ಹೇಗೆ ಮನಸ್ಸನು ನಿಗ್ರಹಿಸಬಹುದು? ಎಂದು ಚಿಂತಿಸುತ್ತಾ ಹೋದಾಗ ಒಂದು ಗೋಚರ ವಸ್ತುವನ್ನು ನೋಡುತ್ತ ಅಲ್ಲಿ ನಮ್ಮ ಮನಸ್ಸನ್ನು ಕೇಂದ್ರೀಕರಿಸಿ ಚಂಚಲತ್ವದಿಂದ ಹೊರಬರಲು ಸಿಗುವ ಸುಲಭ ಮಾರ್ಗ.
ಅಂಬೆಗಾಲಿಕ್ಕುವ ಮಗುವೊಂದರ ಕಣ್ಣಿಗೆ ಹರಿತವಾದ ಕತ್ತಿ ತುಸುದೂರದಲ್ಲಿಯೇ ಬಿದ್ದಿರುವುದು ಕಾಣುತ್ತದೆ. ಅದನ್ನು ಹಿಡಿಯಬೇಕೆಂಬ ಆಸೆಯಿಂದ ಅದರತ್ತ ಹೋಗಲನುವಾಗುತ್ತದೆ. ಅದೇ ಸಮಯಕ್ಕೆ ನಾವು ಆ ಮಗುವಿನ ಕಣ್ಣಿದಿರು ಆಕರ್ಷಕವಾದ ಆಟಿಕೆಯೊಂದನ್ನ ಎಸೆದರೆ ಆ ಮಗು ಅದರತ್ತ ಗಮನಹರಿಸಿ ಕತ್ತಿಯತ್ತ ಹೋಗದೆ ಆಟಿಕೆಯನ್ನು ಹಿಂಬಾಲಿಸುತ್ತದೆ. ಅಂದರೆ ಇಲ್ಲಿ ಮೂರ್ತಿ ಕೆಲಸ ಮಾಡಿದೆ. ಇದೇ ರೀತಿ ಹುಲುಮಾನವರಾದ ನಮಗೆ ಮೂರ್ತಿಯ ಅಗತ್ಯ ಇದ್ದೇ ಇದೆ ಎಂಬುದನ್ನು ತಿಳಿದ ಪೂರ್ವಜರು ಮೂರ್ತಿಯ ಕಲ್ಪನೆಯನ್ನು ಬೆಳೆಸಿದರು. ಇದೇ ಮೂರ್ತಿಪೂಜೆಯ ಮೂಲವಿರಬಹುದು. ದೇವರು ಎಲ್ಲಾ ಕಡೆಯಿದ್ದಾನೆಂಬುದು ನಮಗೆ ಗೊತ್ತಿದ್ದರೂ ಅಧರ್ಮದಲ್ಲಿ ನಡೆಯುವಾಗ ಅದನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಇದೇ ಸಂದರ್ಭ, ದೇವಾಲಯದಲ್ಲಿರುವಾಗ ’ದೇವರೆದುರು ತಪ್ಪೆಸಗಬಾರದು’ ಎಂದುಕೊಂಡು ನೀತಿಯುತರಾಗಿ ನಡೆದುಕೊಳ್ಳುತ್ತೇವೆ.  ಅಲ್ಲಿಗೆ ಮೂರ್ತಿ ಎಂಬುದಿಲ್ಲದೆ ನಮ್ಮ ಚಿತ್ತವನ್ನು ಕೇಂದ್ರೀಕರಿಸಲಾಗದು.
ಮೂರ್ತಿ ಎಂಬುದು ನಮ್ಮ ಮನಸ್ಸನ್ನು ನಿಗ್ರಹಿಸುವ ಸಾಧನ ಮತ್ತು ಶಕ್ತಿ. ಗುರುತೊಂದು ಕಣ್ಣೆದುರು ಇಲ್ಲದೆ ನಮ್ಮ ದೃಷ್ಟಿಯನ್ನು ಕೇಂದ್ರೀಕರಿಸುವುದು ಕಷ್ಟ. ಹಾಗಾಗೀ ನಮಗೆ ಮನಸ್ಸನ್ನು ಹಿಡಿದಿಡಲು ಮೂರ್ತಿಯೂ ಬೇಕು; ಇಂದ್ರಿಯಗಳನ್ನು ನಿಗ್ರಹಿಸಲು ಧ್ಯಾನವೂ ಬೇಕು. ಆದುದರಿಂದ ವ್ಯಕ್ತಿ ಮೂರ್ತಿ ಭಕ್ತಿ ಧ್ಯಾನದ ನಡುವೆ ಅವಿನಾಭಾವ ಸಂಬಂಧವಿದೆ.
ಮೂರ್ತಿಯ ಸಾಂಗತ್ಯ: ಪ್ರತಿ ಮನಸ್ಸು ಬಯಸುವುದು ಮುಕ್ತಿಯನ್ನು ಅದಕ್ಕಿರುವ ದಾರಿಯೇ ಭಕ್ತಿ; ಭಕ್ತಿ ಮತ್ತು ಧ್ಯಾನದ ಹುಟ್ಟು ನೆಲೆಯಡಗಿರುವುದೇ ದೇವರ ಮೂರ್ತಿಯಲ್ಲಿ.
     ||ಸರಳವಾಗಿ ಯೋಚಿಸಿ ಸಂಸ್ಕಾರಯುತರಾಗಿ ಸರಳರಾಗಿ ಜೀವಿಸಿ||
  ವಿಷ್ಣು ಭಟ್ಟ ಹೊಸ್ಮನೆ.

LEAVE A REPLY

Please enter your comment!
Please enter your name here