ಕಾಪು: ಮಹತೋಭಾರ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಲ್ಲಿ 8ನೇ ವರ್ಷದ ರಾಶಿಪೂಜಾ ಮಹೋತ್ಸವವು ದೇವಸ್ಥಾನದ ತಂತ್ರಿಗಳಾದ ಬ್ರಹ್ಮಶ್ರೀ ವೇ|ಮೂ| ಶ್ರೀಶ ತಂತ್ರಿಯವರ ನೇತೃತ್ವದಲ್ಲಿ ಬ್ರಹ್ಮಶ್ರೀ ಪಂಜ ಭಾಸ್ಕರ ಭಟ್ ಉಪಸ್ಥಿತಿಯಲ್ಲಿ ಸಂಪನ್ನಗೊಂಡಿತು.
ಬುಧವಾರ ಸೂರ್ಯೋದಯದಿಂದ ಗುರುವಾರ ಬೆಳಗ್ಗಿನ ಜಾವದ ಸೂರ್ಯೋದಯದವರೆಗೆ ರಾಶಿಗಳ ಚಲನೆಗೆ ಅನುಗುಣವಾಗಿ 24 ಗಂಟೆಗಳ ಕಾಲ ಜರಗಿದ ರಾಶಿಪೂಜಾ ಮಹೋತ್ಸವದಲ್ಲಿ ನೃತ್ಯ, ಸಂಗೀತ, ವಾದ್ಯ, ಭಜನೆ, ಕೀರ್ತನೆ ಸಹಿತ ಅಷ್ಟಾವಧಾನ ಪೂಜೆ ನಡೆಯಿತು.
ರಾಶಿ ಪೂಜಾ ಮಹೋತ್ಸವದಲ್ಲಿ ವೈದಿಕರಾದ ಶ್ರೀನಿವಾಸ ತಂತ್ರಿ, ನಾರಾಯಣ ತಂತ್ರಿ ಸಹಿತ ಹಲವು ಮಂದಿ ವೈದಿಕ ವೃಂದದವರು ರಾಶಿ ಕಲಶಾಧಿವಾಸ ಭಾರತೀ ಪೂಜೆ, ಬಲಿ ಸಹಿತ ವಿವಿಧ ಧಾರ್ಮಿಕ ಅನುಷ್ಠಾನಗಳನ್ನು ನೆರವೇರಿಸಿದರು.
ಎಲ್ಲಾ 12 ರಾಶಿಗಳಿಗೆ ಪ್ರತ್ಯೇಕ ಪ್ರತ್ಯೇಕವಾಗಿ ನಡೆದ ಪೂಜೆಯಲ್ಲಿ ಪರಿಸರದ ವಿವಿಧ ಗಣ್ಯರು ಮತ್ತು ಸಮಾಜಗಳ ಸಂಘಟನೆಗಳು ಸೇವಾಕರ್ತರಾಗಿದ್ದರು.
ಕಾಪು ಶಾಸಕ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ. ಆರ್. ಮೆಂಡನ್, ದೇಗುಲದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮೋಹನ್ ಎಂ. ಬಂಗೇರ, ಕಾರ್ಯನಿರ್ವಹಣಾಧಿಕಾರಿ ರವಿಶಂಕರ್ ಕೆ. ರಾಶಿಪೂಜಾ ಮಹೋತ್ಸವ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಕಾರ್ಯದರ್ಶಿ ರತ್ನಾಕರ ಹೆಗ್ಡೆ ಕಲ್ಯ, ಕೋಶಾಧಿಕಾರಿ ಶ್ರೀಕರ ಶೆಟ್ಟಿ ಕಲ್ಯಾ, ಗೌರವ ಸಲಹೆಗಾರರಾದ ಕೆ.ಪಿ. ಆಚಾರ್ಯ, ರಾಶಿಪೂಜಾ ಸಮಿತಿಯ ಸಲಹೆಗಾರರಾದ ಶಶಿಧರ ಕೆ. ಶೆಟ್ಟಿ ಎರ್ಮಾಳ್, ಡಾ| ಕೆ. ಪ್ರಭಾಕರ ಶೆಟ್ಟಿ, ರವಿ ಎಸ್. ಶೆಟ್ಟಿ, ಎಂ. ಶಶಿಧರ ಶೆಟ್ಟಿ, ವ್ಯವಸ್ಥಾಪನಾ ಸಮಿತಿ, ರಾಶಿಪೂಜಾ ಮಹೋತ್ಸವ ಸಮಿತಿ ದೇವಳದ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು, ಕಾಪು ಸಾವಿರ ಸೀಮೆಯ ಹತ್ತು ಸಮಸ್ತರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.