ಉಡುಪಿ: ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ವಿಜಯದಶಮಿ ಪರ್ವಕಾಲದಲ್ಲಿ ಆರಾಧನಾ ರಂಗಪೂಜಾ ಮಹೋತ್ಸವ ಸಹಿತ ಬಲಿ ಉತ್ಸವವು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಉಪಸ್ಥಿತಿಯಲ್ಲಿ ವೇ|ಮೂ| ಕೃಷ್ಣಮೂರ್ತಿ ತಂತ್ರಿ ಅವರ ನೇತೃತ್ವದಲ್ಲಿ ನೆರವೇರಿತು.
ಹತ್ತು ದಿನಗಳ ಕಾಲ ನಿರಂತರವಾಗಿ ನೆರವೇರಿದ ಧಾರ್ಮಿಕ ಕಾರ್ಯಕ್ರಮಗಳ ಮಂಗಲೋತ್ಸವವಾಗಿ ಮಹಾರಂಗ ಪೂಜಾ ಮಹೋತ್ಸವವು ಭಕ್ತರ ಸಮಕ್ಷಮದಲ್ಲಿ ದೀಪಾರಾಧನೆ ಸಹಿತ ವಸಂತ ಪೂಜೆ, ತೊಟ್ಟಿಲು ಉತ್ಸವದೊಂದಿಗೆ ಸಂಪನ್ನಗೊಂಡಿತು. ಪಳ್ಳಿ ಗುರುರಾಜ್ ಭಟ್ ಅವರಿಂದ ಬಲಿ ಉತ್ಸವ ನೆರವೇರಿತು. ಕ್ಷೇತ್ರದ ಸ್ವಾತಿ ಆಚಾರ್ಯ ಅವರಿಂದ ವಿಶೇಷವಾದ ನೃತ್ಯ ಸುತ್ತು ಸಮರ್ಪಿಸಲ್ಪಟಿತು.
ಹಿರಿಯಡಕದ ಚಂದ್ರಶೇಖರ ದೇವಾಡಿಗ ಮತ್ತು ಬಳಗದವರಿಂದ ಸ್ಯಾಕೊಫೋನ್ ವಾದನವು ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ನಡೆಯಿತು. ರಾತ್ರಿ ಅನ್ನಸಂತರ್ಪಣೆ ನೆರವೇರಿತು. ರಂಗಪೂಜಾ ಮಹೋತ್ಸವದ ಸಂದರ್ಭ ತಂತ್ರಿವರ್ಯರು ಉಲಿ ಯುವ ದೇವಿಯ ಧ್ಯಾನವನ್ನು ಆಲಿಸಲು ಅಪಾರ ಸಂಖ್ಯೆಯಲ್ಲಿ ಭಕ್ತ ಸಮೂಹ ನೆರೆದಿದ್ದರು ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾರೆ.