Home ಧಾರ್ಮಿಕ ಸುದ್ದಿ ರಾಮಾಯಣ-ಮಹಾಭಾರತ ದೇಶದ ಸಂಸ್ಕೃತಿ ಕಣ್ಣು: ಒಡಿಯೂರು ಶ್ರೀ

ರಾಮಾಯಣ-ಮಹಾಭಾರತ ದೇಶದ ಸಂಸ್ಕೃತಿ ಕಣ್ಣು: ಒಡಿಯೂರು ಶ್ರೀ

222
0
SHARE

ಒಡಿಯೂರು : ಸೇವೆಗೆ ಇನ್ನೊಂದು ಹೆಸರು ಆಂಜನೇಯ. ರಾಮನ ಸೇವೆ ಎಂದರೆ ಪರಮೋಚ್ಛ ವಾದುದು. ಸೇವೆಯಿಂದ ರಾಷ್ಟ್ರದ ಉದ್ಧಾರವಾಗುತ್ತದೆ. ಭಗವಂತನ ಸೇವೆಯನ್ನು ಕರ್ತವ್ಯವೆಂದೇ ಮಾಡಬೇಕು. ರಾಮಾಯಣ ಮತ್ತು ಮಹಾಭಾರತ ದೇಶದ ಸಂಸ್ಕೃತಿಯ ಎರಡು ಕಣ್ಣುಗಳು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಅವರು ಶುಕ್ರವಾರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀಮದ್ರಾಮಾಯಣ ಮಹಾಯಜ್ಞ – ಶ್ರೀಹನುಮೋತ್ಸವದ ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ವೀರಾಂಜನೇಯ ವೈಭವ (ಸಮಗ್ರ ಹನೂಮಾಯಣ) ಯಕ್ಷಗಾನ ಕೃತಿ ಬಿಡುಗಡೆ ಮಾಡಿ ಆಶೀರ್ವಚಿಸಿದರು.

ಆನಂದದ ನೆಲೆ, ಸಂತೋಷದ ಸೆಲೆ ಆಧ್ಯಾತ್ಮದಲ್ಲಿ ಅಡಗಿದೆ. ಲೌಕಿಕ ಪ್ರಪಂಚದಲ್ಲಿದ್ದು, ಅಲೌಕಿಕವನ್ನು ಅನುಭವಿಸುವುದು ಸುಲಭವಲ್ಲ. ಕರ್ತವ್ಯಪ್ರಜ್ಞೆಯನ್ನು ಇಟ್ಟುಕೊಂಡು ಬದುಕು ನಡೆಸಬೇಕು. ಅರ್ಪಣಾಭಾವದ ಸೇವೆಯನ್ನು ಭಗವಂತ ಮೆಚ್ಚುತ್ತಾನೆ ಎಂದು ತಿಳಿಸಿದರು.

ಮುಂಬಯಿ ಉದ್ಯಮಿಗಳಾದ ವಾಮಯ್ಯ ಬಿ. ಶೆಟ್ಟಿ, ಕೃಷ್ಣ ಎಲ್. ಶೆಟ್ಟಿ, ದಾಮೋದರ ಎಸ್‌. ಶೆಟ್ಟಿ, ಬೆಂಗಳೂರು ಉದ್ಯಮಿ ಬಾಲಚಂದ್ರ, ಮುಂಬಯಿನ ರೇವತಿ ವಿ. ಶೆಟ್ಟಿ, ಕುಶಲ ಆರ್‌. ಶೆಟ್ಟಿ, ಸರ್ವಾಣಿ ಪಿ. ಶೆಟ್ಟಿ, ಡಾ| ಅದೀಪ್‌ ಶೆಟ್ಟಿ, ಎ. ಸುರೇಶ್‌ ರೈ ಮಂಗಳೂರು, ಆಶೋಕ್‌ ಕುಮಾರ್‌ ಬಿಜೈ, ಸಿದ್ದರಾಮಪ್ಪ ದಾವಣಗೆರೆ, ಅಜಿತ್‌ ಕುಮಾರ್‌ ಪಂದಳಮ್‌, ಭರತ್‌ ಭೂಷಣ್‌ ಮಂಗಳೂರು, ಜಯರಾಮ ರೈ ಮಲಾರು ಉಪಸ್ಥಿತರಿದ್ದರು.

ಯಕ್ಷಗಾನ ಕೃತಿ ರಚಿಸಿದ ಹೊಸ್ತೋಟ ಮಂಜುನಾಥ ಭಾಗವತ ಅವರನ್ನು ಸಮ್ಮಾನಿಸಲಾಯಿತು. ಭಗವನ್ನಾಮ ಸಂಕೀರ್ತನ ಸಪ್ತಾಹದಲ್ಲಿ ಸುಮಾರು 100 ಕ್ಕೂ ಹೆಚ್ಚು ಭಜನ ತಂಡಗಳು ಭಾಗವಹಿಸಿದವು. ಮನೆಗೆ ಸಂರಕ್ಷಣೆ ನೀಡುವ ಹನುಮಧ್ವಜವನ್ನು ಲೋಕಾರ್ಪಣೆ ಮಾಡಲಾಯಿತು.

ಕೆ.ಪಿ. ರಾಜಗೋಪಾಲ ಕನ್ಯಾನ ಕೃತಿ ಪರಿಚಯ ಮಾಡಿದರು. ಯಶವಂತ ವಿಟ್ಲ ಸ್ವಾಗತಿಸಿ, ನಿರೂಪಿದರು. ರೇಣುಕಾ ಎಸ್‌. ರೈ ಆಶಯಗೀತೆ ಹಾಡಿದರು. ಸಂತೋಷ ಭಂಡಾರಿ ವಂದಿಸಿದರು.

LEAVE A REPLY

Please enter your comment!
Please enter your name here