Home ನಂಬಿಕೆ ಸುತ್ತಮುತ್ತ ರಾಮನವಮಿ ಎಂಬ ಶ್ರೀರಾಮನಾದರ್ಶಗಳ ಕನ್ನಡಿ

ರಾಮನವಮಿ ಎಂಬ ಶ್ರೀರಾಮನಾದರ್ಶಗಳ ಕನ್ನಡಿ

2499
0
SHARE
ಶ್ರೀರಾಮ ಚಂದಿರನೆ|  ಶ್ರೀಲೋಲ ಸುಂದರನೆ |
ಶ್ರೀಮನ್ ನಾರಾಯಣ ರಾಮ್ ರಾಮ್ ರಾಮ್ ||
ಹಿಂದೂ ಧರ್ಮದಲ್ಲಿ ಆಚರಿಸಿಲ್ಪಡುವ ಹಬ್ಬಗಳೆಲ್ಲವೂ ಮಾನವನರಲ್ಲಿ ಸಂಸ್ಕಾರವನ್ನು ತುಂಬುವ ಮತ್ತು ಸುಸಂಸ್ಕೃತಿಯನ್ನು ಉಳಿಸುವ ಉದ್ದೇಶವನ್ನೇ ಮೂಲವಾಗಿರಿಸಿಕೊಂಡಿವೆ. ಇತ್ತೀಚಿನ ದಿನಗಳಲ್ಲಿ ಆಡಂಬರದ ರೂಪ ತಳೆದು ಭಕ್ತಿ ಭಾವಗಳಿಗೆ, ಉದ್ದೇಶಗಳಿಗೆ ಬೆಲೆಯಿಲ್ಲದೆ ತನ್ನ ಮೂಲರೂಪವನ್ನೂ ಕಳೆದುಕೊಳ್ಳುತ್ತಿರುವುದು ಶೋಚನೀಯವೇ ಸರಿ. ಆದರೂ ಸಹ ಹಬ್ಬಗಳು ಜನರಲ್ಲಿ ಉತ್ತಮ ನಡೆ ನುಡಿ, ಶಿಸ್ತು ಸಂಯಮವನ್ನು ಸದಾ ತುಂಬಿ ಧರ್ಮಯುತವಾದ ಬದುಕನ್ನು ನಡೆಸುವಂತಾಗಲಿ ಎಂಬುದು ಆಶಯ.
ಚೈತ್ರಮಾಸ ಶುಕ್ಲ ಪಕ್ಷದ ನವಮಿಯಂದು “ರಾಮ ನವಮಿ”  ಹಬ್ಬವನ್ನು ಆಚರಿಸಲಾಗುತ್ತದೆ. ಹೊಸ ಸಂವತ್ಸರದಲ್ಲಿ ಚಾಂದ್ರಯುಗಾದಿಯ ನಂತರ ಮೊದಲ ಹಬ್ಬವೇ ರಾಮನವಮಿ. ರಾಮ ಹುಟ್ಟಿದ ದಿನ ಅಥವಾ ವಿಷ್ಣುವು ರಾಮಾವತಾರದಲ್ಲಿ ಉದಯಿಸಿದ ದಿನ ಎಂದು ರಾಮನಿಗೆ ಪೂಜೆ, ಕೀರ್ತನೆ, ಭಜನೆ, ರಾಮನಿಗೆ ಸಂಬಂಧಿಸಿದ ಸ್ತೋತ್ರಗಳನ್ನು ಹಾಡುವುದು, ಸೀತಾಕಲ್ಯಾಣೋತ್ಸವ ಮಾಡುವುದು, ಸೀತಾಸಹಿತ ರಾಮನ ಮೆರೆವೆಣಿಗೆ ಹೀಗೆ ವಿವಿಧ ಬಗೆಗಳಲ್ಲಿ ಬೇರೆಬೇರೆ ಕಡೆಗಳಲ್ಲಿ ಆಚರಿಸಲಾಗುತ್ತದೆ.
ಶ್ರೀರಾಮ ಎಂಬ ಶಕ್ತಿ ಕೇವಲ ಶಕ್ತಿಯಾಗಿ ಉದಯಿಸದೆ ಸಾಮಾನ್ಯವ್ಯಕ್ತಿಯಾಗಿ ಹೇಗೆ ಬದುಕಬೇಕೆಂಬ ಸಂಗತಿಯನ್ನು ಜನತೆಗೆ ತಿಳಿಸಿದೆ. ರಾಮಾಯಾಣ ಮಹಾಕಾವ್ಯದಲ್ಲಿ ರಾಮನ ಜೀವನದ ಪ್ರತಿ ಹಂತದಲ್ಲೂ ಇದು ಹೇಳಲ್ಪಟ್ಟಿದೆ. ರಾಮನವಮಿ ಎಂಬುದು ಕೇವಲ ಸಂಭ್ರಮದ ಹಬ್ಬವನ್ನಾಚರಿಸಿ ಮುದಗೊಳ್ಳುವುದಕಷ್ಟೇ ಸೀಮಿತವಲ್ಲ. ಆದಿನ ರಾಮನ ಜೀವನವನ್ನು ಎಲ್ಲರೂ ನೆನಪಿಸಿಕೊಂಡು ಆತನ ಆದರ್ಶವನ್ನು ಅಳವಡಿಸಿಕೊಳ್ಳಲು ಇದೊಂದು ಮಾರ್ಗ. ಯಾರನ್ನೇ ಕೇಳಿ “ನನಗೆ ರಾಮನಂತ ಆದರ್ಶಪುತ್ರ ಬೇಕು”, “ನನಗೆ ರಾಮನಂತ ಆದರ್ಶಪತಿ ಬೇಕು” ಎಂಬ ಮಾತುಗಳು ಸುಲಭವಾಗಿ ಬಂದು ಬಿಡುತ್ತದೆ. ಹಾಗಾಗಿ ರಾಮ ಎಂಬವನು ನಮಗೆಲ್ಲ ಮಾದರಿ.
ಶ್ರೀರಾಮ ಏಕಪತ್ನಿ ವ್ರತಸ್ಥ. ಹಾಗಾಗಿ ಆತ ಕೇವಲ ರಾಮನಲ್ಲ ಸೀತಾರಾಮ. ಆತನ ಆದರ್ಶವನ್ನು ಪಾಲಿಸಿದರೆ ಖಂಡಿತವಾಗಿಯೂ ಸಮಾಜದ ಉದ್ಧಾರವಾಗುತ್ತದೆ. ಒಬ್ಬ ಪರಿಪೂರ್ಣ ಮನುಷ್ಯನಾಗಲು ಪ್ರತಿಯೊಬ್ಬನೂ ರಾಮನನ್ನು ಅನುಸರಿಸಬೇಕು. ಶ್ರೀರಾಮನು ಜನ್ಮಾದಿಯಾಗಿ ಪಾಲಿಸಿದ ಆದರ್ಶಗಳು ಒಂದೇ…ಎರಡೇ? ಲೆಕ್ಕವಿಲ್ಲದಷ್ಟು. ಬಾಲ್ಯದಲ್ಲಿ ಗುರುಗಳಿಗೆ ಆದರ್ಶಶಿಷ್ಯನಾಗಿ, ಮಾತಾಪಿತರಿಗೆ ಆದರ್ಶಪುತ್ರನಾಗಿ, ತಮ್ಮಂದಿರಿಗೆ ಉತ್ತಮ ಅಣ್ಣನಾಗಿ, ಮಡದಿಗೆ ಆದರ್ಶಪತಿಯಾಗಿ ಅಲ್ಲದೇ ಮಿತ್ರನಿಗೆ ಆದರ್ಶಮಿತ್ರನಾಗಿ ಹೀಗೆ ಪಟ್ಟಿ ಮಾಡುತ್ತ ಹೊರಟರೆ ಉದ್ದವಾಗುತ್ತಲೇ ಹೋಗುತ್ತದೆ. ರಾಮಾಂಜನೇಯರ ಸ್ನೇಹ ಎಲ್ಲರೂ ತಿಳಿದಿರುವ ಸಂಗತಿಯೇ. ಅಂತೆಯೇ ಅಣ್ಣನ ಪ್ರೀತಿಗೆ ಸೋತ ಲಕ್ಷಣ ರಾಮನ ಜೊತೆಗೆ ಬೇಡವೆಂದರೂ ಕೇಳದೆ ಕಾಡಿಗೆ ಹೋದ. ಇವೆಲ್ಲವೂ ಒಬ್ಬ ಸಾಮಾನ್ಯವ್ಯಕ್ತಿ ಹೇಗಿರಬೇಕೆಂಬುದರ ದರ್ಶನವಾಗಿದೆ. ಹಬ್ಬದಾಚರಣೆಯ ನಿಮಿತ್ತ ಅವೆಲ್ಲವನ್ನೂ ಪದೇಪದೇ ನೆನಪಿಸಿಕೊಂಡು ಅದೇ ಮಾರ್ಗದಲ್ಲಿ ನಡೆಯುವ ಮನಸ್ಸು ಮಾಡಬೇಕು. ಆಗ ಮಾತ್ರ ಈ ಹಬ್ಬಗಳಾಚರಣೆಯ ಮೂಲ ಉದ್ದೇಶವೂ ಈಡೇರುತ್ತದೆ.
ರಾಮನವಮಿಯ ದಿನ ಕೋಸುಂಬರಿ ಮತ್ತು ಪಾನಕ ಮಾಡಿ ಹಂಚಿ ಸೇವಿಸುವುದೇ ವಿಶೇಷ. ಬೇಸಿಗೆಕಾಲದ ಆರಂಭದಲ್ಲಿ ಈ ಹಸಿಧಾನ್ಯದಿಂದ ಮಾಡಿದ ಕೋಸುಂಬರಿ ದೇಹವನ್ನು ತಂಪಾಗಿಸಿದರೆ, ನೀರಿಗೆ ಬೆಲ್ಲ, ಏಲಕ್ಕಿ,ಲಿಂಬೆ ಹಾಗೂ ಕಾಳುಮೆಣಸಿನ ಪುಡಿ ಇವುಗಳ ಮಿಶ್ರಣ ಮಾಡಿ ತಯಾರಿಸಿದ ಪಾನಕ ಆರೋಗ್ಯದಾಯಕವೂ ಹೌದು. ರಾಮನವಮಿಯು ವರ್ಷದ ಆರಂಭದಲ್ಲಿಯೇ “ನಾನು ರಾಮನ ಆದರ್ಶಗಳನ್ನು ತಪ್ಪದೇ ಪಾಲಿಸುತ್ತೇನೆ” ಎಂದು ಪ್ರತಿಜ್ಞೆ ಕೈಗೊಳ್ಳುವ ದಿನ.  ರಾಮ ಮಂತ್ರಕ್ಕೆ ಅಗಾದವಾದ ಶಕ್ತಿಯಿದೆ. ಏಕೆಂದರೆ ಮನಸ್ಸಿನ ಏಕಾಗ್ರತೆಗೆ ಸುಲಭದಾರಿಯೇ ಈ ರಾಮಮಂತ್ರ. ರಾಮರಾಜ್ಯದ ಕನಸು ನನಸಾಗಬೇಕಾದರೆ ಪ್ರತಿಯೊಬ್ಬನೂ ರಾಮನಂತಾಗಬೇಕು.
ರಾಮಕೃಪೆ: ರಾಮನಾಮ ಜಪ ತೋರಿಕೆಗೆಗಷ್ಟೇ ಆಗಿರದೆ, ರಾಮನಾದರ್ಶಗಳು ಪಾಲಿಸಲ್ಪಟ್ಟಾಗ ಮಾತ್ರ ಬದುಕು ಸುಂದರವಾಗುತ್ತದೆ.
        ||ಸರಳವಾಗಿ ಯೋಚಿಸಿ ಸಂಸ್ಕಾರಯುತರಾಗಿ ಸರಳರಾಗಿ ಜೀವಿಸಿ||
  ವಿಷ್ಣು ಭಟ್ಟ ಹೊಸ್ಮನೆ.

LEAVE A REPLY

Please enter your comment!
Please enter your name here