ಸುಳ್ಯ: ಶ್ರೀ ಚೆನ್ನಕೇಶವ ದೇವರ ಜಳಕದ ಕಟ್ಟೆಯ ಸಮೀಪದಲ್ಲಿ ತಾ|ನ ಪ್ರಥಮ ರಾಘವೇಂದ್ರ ಮಠ ನಿರ್ಮಾಣ ಹಂತದಲ್ಲಿದ್ದು, ಇದರ ಪ್ರತಿಷ್ಠಾ ಮಹೋತ್ಸವವು ಎ. 19ರಿಂದ 22ರ ತನಕ ನಡೆಯಲಿದೆ ಎಂದು ಬೃಂದಾವನ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀಕೃಷ್ಣ ಎಂ.ಎನ್. ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಾತ್ಮಕ ಶಿಲಾಮಯ ಗರ್ಭಗುಡಿ, ವಿಶಾಲವಾದ ಮಠ, ಸಮುದಾಯ ಭವನ, 200 ಮಂದಿ ಕುಳಿತುಕೊಳ್ಳಬಹುದಾದ ಒಳಾಂಗಣ, ಅತಿಥಿಗೃಹ ಹಾಗೂ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಿಗೆ ಸೂಕ್ತ ವ್ಯವಸ್ಥೆಯೊಂದಿಗೆ ಇದು ಆಧ್ಯಾತ್ಮಿಕ ಕೇಂದ್ರವಾಗಿ ಗುರುತಿಸಲಿದೆ ಎಂದು ಹೇಳಿದರು.
ಮಠ ನಿರ್ಮಾಣಕ್ಕೆ 3 ಕೋಟಿ ರೂ. ವೆಚ್ಚ ತಗಲಲಿದ್ದು, ಶೇ. 80ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಮಂತ್ರಾಲಯ ಮಾದರಿಯಲ್ಲೇ ಈ ಮಠ ನಿರ್ಮಾಣ ಆಗಲಿದೆ. ಮಂತ್ರಾಲಯದ ಸ್ವಾಮೀಜಿ ಅವರ ದಿವ್ಯ ಹಸ್ತದಿಂದ ಹಾಗೂ ವೇ| ಮೂ| ಮುಕ್ಕೂರು ರಾಘವೇಂದ್ರ ಶಾಸ್ತ್ರಿ ಅವರ ಮಾರ್ಗದರ್ಶನದಲ್ಲಿ ನಡೆಯಲಿರುವ ಪ್ರತಿಷ್ಠಾ ಮಹೋತ್ಸವದಲ್ಲಿ ಅನೇಕ ಸ್ವಾಮೀಜಿಗಳು ಹಾಗೂ ಧಾರ್ಮಿಕ, ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ಕಾರ್ಯಾಧ್ಯಕ್ಷ ಮುರಳಿಕೃಷ್ಣ ಡಿ.ಆರ್., ಕಾರ್ಯದರ್ಶಿ ಸುಧಾಕರ ರೈ, ಜತೆ ಕಾರ್ಯದರ್ಶಿ ಪ್ರಕಾಶ್ ಮೂಡಿತ್ತಾಯ, ಉಪಾಧ್ಯಕ್ಷ ಪ್ರಭಾಕರನ್ ನಾಯರ್ ಉಪಸ್ಥಿತರಿದ್ದರು.
ಪೂರ್ವಭಾವಿ ಸಭೆ
ಫೆ. 6ರಂದು ಅಪರಾಹ್ನ 4ಕ್ಕೆ ರಾಯರ ಮಠದ ನಿವೇಶನದಲ್ಲಿ ಮಹೋತ್ಸವದ ಪೂರ್ವಭಾವಿ ಸಭೆ ನಿರ್ಮಾಣ ಸಮಿತಿ ಅಧ್ಯಕ್ಷ ಡಾ| ಕೆ.ವಿ. ಚಿದಾನಂದ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ರಾಯರ ಭಕ್ತರು, ಧಾರ್ಮಿಕ ಹಾಗೂ ಸಾಮಾಜಿಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಳ್ಳುವಂತೆ ವಿನಂತಿಸಿದರು.