ಪುತ್ತೂರು: ಕಾಟುಕುಕ್ಕೆ ಭಜನ ಚಾರಿಟೆಬಲ್ ಟ್ರಸ್ಟ್ ಸಮಾಜಮುಖೀ ಯಾಗಿ ಎಲ್ಲರನ್ನೂ ಸೇರಿಸಿಕೊಳ್ಳುವ ಮೂಲಕ ದೇವರನ್ನು ಕಾಣುವ ಪ್ರಯತ್ನ ದತ್ತ ಸಾಗುತ್ತಿದೆ. ಭಜನೆಯ ಪ್ರೇರಣೆ ಸಂಘಟನಾತ್ಮಕವಾಗಿ ಬೆಳೆದಂತೆ ಸಮಾಜದ ಋಣಾತ್ಮಕ ಅಂಶಗಳು ದೂರವಾಗಲಿವೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ ಹೇಳಿದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ ಶನಿವಾರ ಕಾಟುಕುಕ್ಕೆ ಭಜನ ಚಾರಿಟೆಬಲ್ ಟ್ರಸ್ಟ್ನ್ನು ಉದ್ಘಾಟಿಸಿದರು. ಕಾಟು ಎಂದರೆ ಮೂಲ ಎಂದರ್ಥ. ಮಹಿಳೆಯರೇ ದೊಡ್ಡ ಭೂಮಿಕೆಯಲ್ಲಿದ್ದುಕೊಂಡು ಪ್ರಥಮ ಬಾರಿಗೆ ಭಜನ ಟ್ರಸ್ಟ್ ಆರಂಭಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ದ.ಕ. ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ನಮ್ಮ ಸಂಸ್ಕೃತಿಯ ಭಾಗವಾದ ಭಜನೆ ಸಂಕೀರ್ತನೆಯನ್ನು ಮತ್ತೂಮ್ಮೆ ಬೆಳೆಸುವ ನಿಟ್ಟಿನಲ್ಲಿ ಕಾಟುಕುಕ್ಕೆ ಭಜನ ಟ್ರಸ್ಟ್ ಮುಂದಡಿ ಇಡುತ್ತಿರುವುದು ಧಾರ್ಮಿಕ ಕ್ರಾಂತಿಯೇ ಸರಿ. ಕುಟುಂಬದ ಜತೆ ಭಜನೆ ಹಾಡುವುದರಿಂದ ಮಕ್ಕಳಲ್ಲಿ ಸಾಹಿತ್ಯ ಬೆಳೆಯುತ್ತದೆ. ಜ್ಞಾನವೃದ್ಧಿ ಆಗುತ್ತದೆ. ಜತೆಗೆ ಸಂಸ್ಕಾರವೂ ಬೆಳೆ ಯುತ್ತದೆ. ಈ ನಿಟ್ಟಿನಲ್ಲಿ 100 ಭಜನ ತಂಡಗಳನ್ನು ಕಟ್ಟಿ ಬೆಳೆಸಿರುವುದು ಸಾಧನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಯಂದಿರು ಪ್ರೇರಣೆ ನೀಡಲಿ
ದ.ಕ. ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ ಮಾತನಾಡಿ, ಶಾಂತಿ, ನೆಮ್ಮದಿ, ಶಿಸ್ತನ್ನು ಬೆಳೆಸುವಲ್ಲಿ ಭಜನೆ ಪ್ರಮುಖ ಪಾತ್ರ ವಹಿಸುತ್ತದೆ. ತಾಯಂದಿರು ಮಕ್ಕಳಿಗೆ ಭಜನೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಬೇಕು ಎಂದರು. ಹನುಮಗಿರಿ ಕೋದಂಡರಾಮ ದೇವ ಸ್ಥಾನದ ಅಧ್ಯಕ್ಷ ನನ್ಯ ಅಚ್ಯುತ ಮೂಡೆತ್ತಾಯ ಅಧ್ಯಕ್ಷತೆ ವಹಿಸಿದ್ದರು.