ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಯು ಲಾಕ್ಡೌನ್ ನಿಂದಾಗಿ ಸಾಂಪ್ರದಾಯಿಕವಾಗಿ ಸರಳ ರೀತಿಯಲ್ಲಿ ನಡೆದು ಎ. 18ರಂದು ಸಂಜೆ ದೇವಸ್ಥಾನದ ಎದುರಿನ ತಾತ್ಕಾಲಿಕ ಕೆರೆಯಲ್ಲಿ ಶ್ರೀ ದೇವರ ಅವಭೃಥ ಸ್ನಾನದ ಬಳಿಕ ಧ್ವಜಾವರೋಹಣದೊಂದಿಗೆ ತೆರೆ ಕಂಡಿದೆ.
ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಅವರ ನೇತೃತ್ವದಲ್ಲಿ ಅವರ ಪ್ರತಿನಿಧಿ ಗುರುಪ್ರಸಾದ್ ತಂತ್ರಿ ಅವರಿಂದ ಬೆಳಗ್ಗೆ ಬಾಗಿಲು ತೆರೆಯುವ ಮುಹೂರ್ತದ ಬಳಿಕ ವಿವಿಧ ಧಾರ್ಮಿಕ ವಿಧಿಗಳು ನಡೆದವು. ಸಂಜೆ ಉತ್ಸವ ಮೂರ್ತಿಗೆ ದೇವಸ್ಥಾನದ ಎದುರು ಅಯ್ಯಪ್ಪ ಸ್ವಾಮಿ ಗುಡಿಯ ಬಳಿ ನಿರ್ಮಾಣ ಮಾಡಿದ ತಾತ್ಕಾಲಿಕ ಕೆರೆಯಲ್ಲಿ ಅವಭೃಥ ಸ್ನಾನ ನಡೆಯಿತು.
ಸಂಪ್ರದಾಯಕ್ಕೆ ಕೊರತೆ ಬಾರದಂತೆ ವೀರಮಂಗಲ ಹೊಳೆಯಿಂದ ತಂದ ಜಲವನ್ನು ಶ್ರೀ ದೇವರ ಉತ್ಸವ ಮೂರ್ತಿಗೆ ಅಭಿಷೇಕ ಮಾಡಿ, ಅಷ್ಟದ್ರವ್ಯಗಳನ್ನು ಲೇಪಿಸಿ ಅವಭೃಥ ಸ್ನಾನ ನೆರವೇರಿಸಲಾಯಿತು. ಬಳಿಕ ಧ್ವಜಾವರೋಹಣ ಮಾಡಲಾಯಿತು.
ಪ್ರಧಾನ ಅರ್ಚಕ ವೇ| ಮೂ| ವಸಂತ ಕೆದಿಲಾಯ, ಆಡಳಿತಾಧಿಕಾರಿ ಲೋಕೇಶ್ ಸಿ., ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ವಾಸ್ತು ಎಂಜಿನಿಯರ್ ಪಿ.ಜಿ. ಜಗನ್ನಿವಾಸ ರಾವ್ ಸಹಿತ ದೇಗುಲದ ಸೀಮಿತ ಸಿಬಂದಿ ಉಪಸ್ಥಿತರಿದ್ದರು.
ವೀರಮಂಗಲದುದ್ದಕ್ಕೂ 53 ಕಟ್ಟೆಗಳಲ್ಲಿ ದೀಪಾರಾಧನೆ: ಎ. 18ರಂದು ಸಂಜೆ ವರ್ಷಂಪ್ರತಿ ಶ್ರೀ ಮಹಾಲಿಂಗೇಶ್ವರ ದೇವರು ವೀರಮಂಗಲಕ್ಕೆ ಅವಭೃಥ ಸವಾರಿ ಹೋಗುತ್ತಿದ್ದು, ಈ ಬಾರಿ ಲಾಕ್ಡೌನ್ ನಿಂದಾಗಿ ರದ್ದುಗೊಳಿಸಲಾಗಿತ್ತು. ಆದರೆ ವೀರಮಂಗಲದುದ್ದಕ್ಕೂ ದಾರಿಯಲ್ಲಿ 53 ಕಟ್ಟೆಗಳಿದ್ದು ಆ ಕಟ್ಟೆಗಳಲ್ಲಿ ದೀಪಾರಾಧನೆ ಮಾಡಲಾಯಿತು. ಕಟ್ಟೆ ಸೇವಾರ್ಥಿಗಳಿಗೆ ಎ. 19ರಂದು ಪ್ರಸಾದವನ್ನು ದೇವಸ್ಥಾನದ ವತಿಯಿಂದ ನೀಡಲಾಯಿತು.