Home ಧಾರ್ಮಿಕ ಸುದ್ದಿ ಪತ್ತನಾಜೆಗೆೆ ಮೂರು ಹೊತ್ತಿನ ಉತ್ಸವ

ಪತ್ತನಾಜೆಗೆೆ ಮೂರು ಹೊತ್ತಿನ ಉತ್ಸವ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

380
0
SHARE
ಶ್ರೀ ಮಹಾಲಿಂಗೇಶ್ವರನ ಉತ್ಸವ ಮೂರ್ತಿ.

ನಗರ: ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪತ್ತನಾಜೆಯಂದು ಮೂರೂ ಹೊತ್ತಿನ ಉತ್ಸವದೊಂದಿಗೆ ದೇವರು ಒಳಗಾದರೆ ಮತ್ತೆ ದೇವರ ಉತ್ಸವ ನಡೆಯುವುದು ದೀಪಾವಳಿ ಅಮಾವಾಸ್ಯೆಗೆ.

ಸೀಮೆಯ ಒಡೆಯ ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಾಲಯದಲ್ಲಿ ಧಾರ್ಮಿಕ ಆಚರಣೆಗಳ ಕುರಿತಂತೆ ಶಿಷ್ಟ ಮತ್ತು ವಿಶಿಷ್ಟ ಸಂಪ್ರದಾಯವನ್ನು ಪಾಲಿಸಲಾಗುತ್ತದೆ. ಈ ಬಾರಿ ಪತ್ತನಾಜೆ ಆಚರಣೆ ಮೇ 25ರಂದು ನಡೆಯುತ್ತದೆ. ಪತ್ತನಾಜೆಯಂದು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಮೂರು ಹೊತ್ತು ಶ್ರೀ ದೇವರ ಬಲಿ ಉತ್ಸವ, ವಾದ್ಯ ಮತ್ತು ಚೆಂಡೆ ಸುತ್ತಿನೊಂದಿಗೆ ನಡೆಯುತ್ತದೆ. ರಾತ್ರಿಯ ಬಲಿ ಉತ್ಸವಕ್ಕೆ ತಂತ್ರ ತೂಗುವ ಸುತ್ತು ಇರುತ್ತದೆ. ಅಲ್ಲದೇ ಮೂರು ಹೊತ್ತು ಉತ್ಸವದ ಬಳಿಕ ಶ್ರೀ ದೇವಾಲಯದ ಒಳಾಂಗಣದಲ್ಲಿರುವ ವಸಂತ ಕಟ್ಟೆಯಲ್ಲಿ ದೇವರಿಗೆ ಕಟ್ಟೆ ಪೂಜೆ ನಡೆಯುತ್ತದೆ. ಇದು ಮಹಾಲಿಂಗೇಶ್ವರ ದೇವಾಲಯದಲ್ಲಿನ ಪತ್ತನಾಜೆಯ ವಿಶೇಷ ಕಾರ್ಯಕ್ರಮಗಳು.

ಉಳ್ಳಾಳ್ತಿ ನಡೆಗೆ ಬಾಗಿಲು
ಪತ್ತನಾಜೆಯಂದು ರಾತ್ರಿ ಶ್ರೀ ದೇವರು ಉತ್ಸವವಾಗಿ ಒಳಗಾದ ಬಳಿಕ ದೇವಾಲಯದ ಸುತ್ತು ಗೋಪುರದಲ್ಲಿರುವ ಶ್ರೀ ಉಳ್ಳಾಲ್ತಿ ನಡೆಗೆ ಬಾಗಿಲು ಹಾಕಲಾಗುತ್ತದೆ. ಮಹಾಲಿಂಗೇಶ್ವರ ದೇವಾಲಯದಲ್ಲಿ ದೇವರ ಉತ್ಸವ ಹೊರಡುವ ಮೊದಲು ಉಳ್ಳಾಳ್ತಿ ನಡೆಯಲ್ಲಿ ಬ್ರಹ್ಮ ವಾಹಕರು ಅಪ್ಪಣೆ ಪಡೆಯುವ ಪದ್ಧತಿ ಇದೆ. ಪತ್ತನಾಜೆಯ ಬಳಿಕ ಶ್ರೀ ದೇವಾಲಯದಲ್ಲಿ ಉತ್ಸವಗಳು ನಡೆಯದ ಕಾರಣ ಉಳ್ಳಾಳ್ತಿ ನಡೆಗೆ ಬಾಗಿಲು ಹಾಕಲಾಗುತ್ತದೆ.

ಮತ್ತೆ ದೀಪಾವಳಿಗೆ
ಪತ್ತನಾಜೆಗೆ ದೇವರು ಒಳಗಾದರೆ ಮತ್ತೆ ದೀಪಾವಳಿ ಅಮಾವಾಸ್ಯೆಗೆ ವಾರ್ಷಿಕ ಉತ್ಸವ ಆರಂಭಗೊಳ್ಳುತ್ತದೆ. ಈ ನಡುವೆ ಭಾದ್ರಪದ ಮಾಸದ ತದಿಗೆಯಂದು ಅಂದರೆ ಹಸ್ತಾ ನಕ್ಷತ್ರದಂದು ಶ್ರೀ ದೇವಾಲಯದಲ್ಲಿ ಕದಿರು ವಿನಿಯೋಗ ಉತ್ಸವ ನಡೆಯುತ್ತದೆ. ಈ ದಿನ ವಿಶೇಷವಾಗಿ ದೇವರ ಉತ್ಸವ ಮೂರ್ತಿಯನ್ನು ಹೊರ ತರಲಾಗುತ್ತದೆ. ಜತೆಗೆ ಉತ್ಸವ ಆರಂಭವಾಗುವ ಮೊದಲು ಉಳ್ಳಾಳ್ತಿ ನಡೆಯನ್ನು ತೆರೆಯಲಾಗುತ್ತದೆ. ಉತ್ಸವ ಮುಗಿದ ಅನಂತರ ಮತ್ತೆ ನಡೆಯ ಬಾಗಿಲು ಹಾಕಲಾಗುತ್ತದೆ ಮತ್ತು ಮತ್ತೆ ನಡೆ ತೆರೆಯುವುದು ದೀಪಾವಳಿಯ ಅಮಾವಾಸ್ಯೆಯಂದು.

ಇದೂ ವಿಶೇಷ
ಪತ್ತನಾಜೆಯಂದು ದೇವರ ಉತ್ಸವ ಮೂರ್ತಿಯನ್ನು ಗರ್ಭ ಗುಡಿಯೊಳಗೆ ಕೊಂಡೊಯ್ಯುವ ಮೊದಲು ಬ್ರಹ್ಮ ವಾಹಕರು ಉತ್ಸವ ಮೂರ್ತಿಯನ್ನು ಆನೆ ಮೆಟ್ಟಿಲಿನ ಮೂಲಕ ಒಳಗೆ ಕೊಂಡೊಯ್ದು ಒಮ್ಮೆ ಇರಿಸಿ ಮತ್ತೆ ಹೊರ ತರುತ್ತಾರೆ. ಆನೆ ಮೆಟ್ಟಿಲಿನ ಮುಂದೆ ನಿಂತು ಮತ್ತೆ ಒಳಗೆ ಕೊಂಡೊಯ್ಯುತ್ತಾರೆ. ದೇವರನ್ನು ಪತ್ತನಾಜೆಯಂದು ಒಳ ಕೊಂಡೊಯ್ಯುವ ಸಂದರ್ಭದಲ್ಲಿ ಆನೆ ಮೆಟ್ಟಿಲಿನ ಮೂಲಕ ಒಳಗೆ ಮತ್ತು ಹೊರಗೆ ತಂದು ಕೊನೆಗೆ ಉತ್ಸವ ಮೂರ್ತಿಯನ್ನು ಒಳಗೆ ಸೇರಿಸುವುದು ವಿಶೇಷ.

LEAVE A REPLY

Please enter your comment!
Please enter your name here