ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸ್ವರ್ಣ ಕವಚದ ನೂತನ ಧ್ವಜಸ್ತಂಭ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಧಾರ್ಮಿಕ ವಿಧಿ ವಿಧಾನ ರವಿವಾರ ಆರಂಭಗೊಂಡಿತು. ದೇವಾಲಯದ ತಂತ್ರಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ಆರಂಭಿಸಲಾಯಿತು.
ಸಂಜೆ ದೇವತಾ ಪ್ರಾರ್ಥನೆ, ಆಚಾರ್ಯ ವರಣ, ಪುಣ್ಯಾಹವಾಚನ, ಪ್ರಸಾದ ಶುದ್ಧಿ, ಅಂಕುರಾರೋಪಣ, ರಾಕ್ಷೊಘ್ನ ಹೋಮ, ವಾಸ್ತು ಹೋಮ, ಪುಣ್ಯಾಹಾಂತ ನಡೆಯಿತು. ಧ್ವಜಸ್ತಂಭ ಪ್ರತಿಷ್ಠೆಯ ಹಿನ್ನೆಲೆಯಲ್ಲಿ ಸ್ವರ್ಣ ಕವಚ ಅಳವಡಿಕೆಯ ಕಾರ್ಯ ಭರದಿಂದ ನಡಯುತ್ತಿದೆ. ದೇವಾಲಯದ ಸುತ್ತುಗೋಪುರ ಹಾಗೂ ಪ್ರವೇಶ ದ್ವಾರವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ದೇವಾಲಯದ ಗುಡಿಗಳಿಗೆ ಹೂವಿನ ಅಲಂಕಾರ ಮಾಡಲಾಗಿದೆ.
ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿ, ಸಮಿತಿ ಸದಸ್ಯರು, ನೂರಾರು ಮಂದಿ ಭಕ್ತರು ಪಾಲ್ಗೊಂಡರು.