ಪುತ್ತೂರು: ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಶನಿವಾರ ಪತ್ತನಾಜೆಯ ಅಂಗವಾಗಿ ವಿವಿಧ ಪೂರ್ವ ಶಿಷ್ಟ ಸಂಪ್ರದಾಯದ ಧಾರ್ಮಿಕ ವಿಧಿ ವಿಧಾನಗಳು ನಡೆದವು.
ಪತ್ತನಾಜೆಯ ಅಂಗವಾಗಿ ದೇವಾಲಯದಲ್ಲಿ ಮೂರು ಹೊತ್ತು ಶ್ರೀ ದೇವರ ಬಲಿ ಉತ್ಸವ, ವಾದ್ಯ ಮತ್ತು ಚೆಂಡೆ ಸುತ್ತಿನೊಂದಿಗೆ ನಡೆಯಿತು. ಶ್ರೀ ದೇವಾಲಯದ ಒಳಾಂಗಣದಲ್ಲಿರುವ ವಸಂತ ಕಟ್ಟೆಯಲ್ಲಿ ದೇವರಿಗೆ ಕಟ್ಟೆ ಪೂಜೆ ನಡೆಯಿತು. ರಾತ್ರಿಯ ಬಲಿ ಉತ್ಸವಕ್ಕೆ ತಂತ್ರ ತೂಗುವ ಸುತ್ತು ವಿಶೇಷವಾಗಿ ನಡೆಯಿತು.
ರಾತ್ರಿ ಶ್ರೀ ದೇವರು ಉತ್ಸವವಾಗಿ ಒಳಗಾದ ಬಳಿಕ ದೇವಾಲಯದ ಸುತ್ತು ಗೋಪುರದಲ್ಲಿರುವ ಶ್ರೀ ಉಳ್ಳಾಲ್ತಿ ನಡೆಗೆ ಬಾಗಿಲು ಹಾಕಲಾಯಿತು. ದೇವಾಲಯದಲ್ಲಿ ದೇವರ ಉತ್ಸವ ಹೊರಡುವ ಮೊದಲು ಉಳ್ಳಾಳ್ತಿ ನಡೆಯಲ್ಲಿ ಬ್ರಹ್ಮ ವಾಹಕರು ಅಪ್ಪಣೆ ಪಡೆಯುವ ಪದ್ಧತಿ ಇದೆ. ಪತ್ತನಾಜೆಯ ಬಳಿಕ ಶ್ರೀ ದೇವಾಲಯದಲ್ಲಿ ಉತ್ಸವಗಳು ನಡೆಯದ ಕಾರಣ ಉಳ್ಳಾಳ್ತಿ ನಡೆಗೆ ಬಾಗಿಲು ಹಾಕಲಾಗುತ್ತದೆ.
ಮತ್ತೆ ದೀಪಾವಳಿಗೆ
ಪತ್ತನಾಜೆಗೆ ದೇವರು ಒಳಗಾದರೆ ಮತ್ತೆ ದೀಪಾವಳಿ ಅಮಾವಾಸ್ಯೆಗೆ ವಾರ್ಷಿಕ ಉತ್ಸವ ಆರಂಭಗೊಳ್ಳುತ್ತದೆ. ಈ ನಡುವೆ ಭಾದ್ರಪದ ಮಾಸದ ತದಿಗೆಯಂದು ಅಂದರೆ ಹಸ್ತಾ ನಕ್ಷತ್ರದಂದು ಶ್ರೀ ದೇವಾಲಯದಲ್ಲಿ ಕದಿರು ವಿನಿಯೋಗ ಉತ್ಸವ ನಡೆಯುತ್ತದೆ. ಈ ದಿನ ವಿಶೇಷವಾಗಿ ದೇವರ ಉತ್ಸವ ಮೂರ್ತಿಯನ್ನು ಹೊರತರಲಾಗುತ್ತದೆ. ಜತೆಗೆ ಉತ್ಸವ ಆರಂಭವಾಗುವ ಮೊದಲು ಉಳ್ಳಾಳ್ತಿ ನಡೆಯನ್ನು ತೆರೆಯಲಾಗುತ್ತದೆ. ಉತ್ಸವ ಮುಗಿದ ಅನಂತರ ಮತ್ತೆ ನಡೆಯ ಬಾಗಿಲು ಹಾಕಲಾಗುತ್ತದೆ ಮತ್ತು ಮತ್ತೆ ನಡೆ ತೆರೆಯುವುದು ದೀಪಾವಳಿಯ ಅಮಾವಾಸ್ಯೆಯಂದು.
ದೇಗುಲದ ಅರ್ಚಕ ವೇ|ಮೂ| ವಸಂತ ಕುಮಾರ್ ಕೆದಿಲಾಯ ವಿಧಿ-ವಿಧಾನಗಳನ್ನು ನೆರವೇರಿಸಿದರು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು.