ನಗರ: ಶ್ರೀ ದೇವತಾ ಸಮಿತಿ ಆಶ್ರಯದಲ್ಲಿ ನಗರದ ಕಿಲ್ಲೆ ಮೈದಾನದಲ್ಲಿ ಸೆ. 2ರಿಂದ ವಾರದ ಕಾಲ ನಡೆದ 62ನೇ ವರ್ಷದ ಸಾರ್ವಜನಿಕ ಶ್ರೀ ಮಹಾಗಣಪತಿ ಉತ್ಸವ ರವಿವಾರ ರಾತ್ರಿ ಆಕರ್ಷಕ ಶೋಭಾಯಾತ್ರೆಯೊಂದಿಗೆ ಸಮಾಪನಗೊಂಡಿತು.
ಬೆಳಗ್ಗೆ ಪೂಜೆ, ನೃತ್ಯಾರ್ಪಣಂ-ಭರತನಾಟ್ಯ ಮತ್ತು ನೃತ್ಯರೂಪಕ, ಗಣಪತಿ ಹವನ, ಮಧ್ಯಾಹ್ನ ದೇವರ ಉತ್ಸವ, ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ, ಅಪರಾಹ್ನ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ ದೈವಗಳ ಭೂತಕೋಲ, ರಾತ್ರಿ ಸುಡುಮದ್ದು ಪ್ರದರ್ಶನದ ಬಳಿಕ ಶೋಭಾಯಾತ್ರೆ ಕೋರ್ಟ್ ರಸ್ತೆ, ಮುಖ್ಯರಸ್ತೆ, ದರ್ಬೆ, ಪರ್ಲಡ್ಕ, ತಾಲೂಕು ಕಚೇರಿ ರಸ್ತೆ, ರಾಧಾಕೃಷ್ಣ ಮಂದಿರ, ಬೊಳುವಾರು ಮೂಲಕ ಸಾಗಿ ಮಂಜಲ್ಪಡ್ಪು ಕೆರೆಯಲ್ಲಿ ಗಣೇಶನ ವಿಗ್ರಹ ವಿಸರ್ಜನೆ ಮಾಡಲಾಯಿತು.
ದೇವರ ಉತ್ಸವ, ಭೂತಕೋಲ
ಪೂರ್ವಶಿಷ್ಟ ಸಂಪ್ರದಾಯದಂತೆ ಮಧ್ಯಾಹ್ನ ಸಾವಿರಾರು ಭಕ್ತರ ಸಮ್ಮುಖದಲ್ಲಿ ದೇವರ ಉತ್ಸವ ನಡೆಯಿತು. ಸಂಜೆ ರಕ್ತೇಶ್ವರಿ ಮತ್ತು ಪಂಜುರ್ಲಿ ದೈವದ ಭೂತ ಕೋಲ, ಬಳಿಕ ಸುಡುಮದ್ದು ಪ್ರದರ್ಶನದೊಂದಿಗೆ ಶೋಭಾಯಾತ್ರೆ ನಡೆಯಿತು. ದಾರಿಯುದ್ದಕ್ಕೂ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಕೇರಳದ ಚೆಂಡೆ ನೃತ್ಯ, ಹುಲಿ ವೇಷದ ನೃತ್ಯ, ತಾಲೀಮು ಪ್ರದರ್ಶನ, ಡಿ.ಜೆ. ನೃತ್ಯ, ಕೀಲು ಕುದುರೆ, ಸಿಡಿಮದ್ದು ಪ್ರದರ್ಶನ ಗಮನ ಸೆಳೆದವು.