ಪುತ್ತೂರು : ತಾಲೂಕಿನ ಗೆಜ್ಜೆಗಿರಿ ನಂದನ ಬಿತ್ತಿಲ್ ಕ್ಷೇತ್ರದಲ್ಲಿ ಫೆ.24ರಿಂದ ಮಾ.2ರ ತನಕ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಮೂಲಸ್ಥಾನ ಗರಡಿ ನೇಮ ನಡೆಯಲಿದೆ.
500 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ದೇಯಿ ಬೈದ್ಯೆತಿ, ಕೋಟಿ –
ಚೆನ್ನಯ ಮೂಲಸ್ಥಾನದಲ್ಲಿ ನಡೆಯುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವವನ್ನು ಚಾರಿತ್ರಿಕಗೊಳಿಸಲು 22 ಉಪ ಸಮಿತಿಗಳ ಮೂಲಕ ಸಿದ್ಧತೆ ಮಾಡಲಾಗುತ್ತಿದೆ. ಜಗತ್ತಿನೆಲ್ಲೆಡೆ ಇರುವ ಕ್ಷೇತ್ರದ ಭಕ್ತರನ್ನು ಸಂಪರ್ಕಿಸುವ ಕಾರ್ಯ ನಡೆದಿದ್ದು, ಲಕ್ಷಾಂತರ ಭಕ್ತರು ಭಾಗಿಯಾಗುವ ನಿರೀಕ್ಷೆ ಇದೆ ಎಂದು ಕ್ಷೇತ್ರಾಡಳಿತ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ತಿಳಿಸಿದೆ.
ಗೆಜ್ಜೆಗಿರಿಯಲ್ಲಿ ಎಲ್ಲ ಸಾನ್ನಿಧ್ಯಗಳ ನಿರ್ಮಾಣ ಪೂರ್ಣಗೊಂಡಿದೆ. ಗುರು ಸಾಯನ ಬೈದ್ಯರು, ಮಾತೆ ದೇಯಿ ಬೈದ್ಯೆತಿ ಮತ್ತು ಕೋಟಿ- ಚೆನ್ನಯರು ಬಾಳಿ ಬದುಕಿದ್ದ ಪ್ರಾಚೀನ ಮನೆಯನ್ನೇ ಸತ್ಯಧರ್ಮ ಚಾವಡಿ ಹೆಸರಿನಲ್ಲಿ ಪಾರಂಪರಿಕ ಶೈಲಿಯಲ್ಲಿ ನಿರ್ಮಿಸಲಾಗಿದೆ. ಶಿಖರಾಗ್ರದಲ್ಲಿ ಕೋಟಿ – ಚೆನ್ನಯ ಮೂಲಸ್ಥಾನ ಗರಡಿ ಮತ್ತು ಬೆರ್ಮೆರ್ ಗುಂಡ ತಲೆ ಎತ್ತಿದ್ದು, ತಪ್ಪಲಲ್ಲಿ ಸತ್ಯಧರ್ಮ ಚಾವಡಿ, ಧೂಮಾವತಿ ದೈವಸ್ಥಾನ, ಕುಪ್ಪೆ ಪಂಜುರ್ಲಿ ದೈವಸ್ಥಾನ, ಕಲ್ಲಾಲ್ದಾಯ ಮತ್ತು ಕೊರತಿ ಸಾನ್ನಿಧ್ಯ, ಚಾರಿತ್ರಿಕ ಸರೋಳಿ ಸೈಮಂಜ ಕಟ್ಟೆ ಹಾಗೂ ಮಾತೆ ದೇಯಿ ಬೈದ್ಯೆತಿ ಸಮಾಧಿ ಪುನರುತ್ಥಾನ ಪೂರ್ಣಗೊಂಡಿದೆ.
ಫೆ. 24ರಂದು ಬ್ರಹ್ಮಕಲಶೋತ್ಸವದ ಧಾರ್ಮಿಕ ವಿಧಾನಗಳು ಆರಂಭಗೊಳ್ಳಲಿದ್ದು, 28ರಂದು ಬ್ರಹ್ಮಕಲಶೋತ್ಸವ ನಡೆಯಲಿದೆ. ಫೆ. 29ರಿಂದ ಮಾ. 2ರ ವರೆಗೆ ಮೂಲಸ್ಥಾನ ಗರಡಿ ನೇಮ ನಡೆಯಲಿದೆ. ಹೊರೆಕಾಣಿಕೆ ಮೆರವಣಿಗೆ ಫೆ. 25ರಂದು ಮಧ್ಯಾಹ್ನ 12ಕ್ಕೆ ಪುತ್ತೂರು ದೇವಸ್ಥಾನದ ಗದ್ದೆಯಿಂದ ಕ್ಷೇತ್ರಕ್ಕೆ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. 6 ದಿನಗಳಲ್ಲಿ ಸಾಂಸ್ಕೃತಿಕ ವೈವಿಧ್ಯ, 5 ದಿನ ಧಾರ್ಮಿಕ ಸಭೆ ನಡೆಯಲಿದೆ. ಕ್ಷೇತ್ರವನ್ನು ಸಂಪರ್ಕಿಸುವ ಪಟ್ಟೆ – ಗೆಜ್ಜೆಗಿರಿ ರಸ್ತೆಯು ರಾಜ್ಯ ಸರಕಾರದ 1.5 ಕೋಟಿ ರೂ. ಅನುದಾನದಲ್ಲಿ ಕಾಂಕ್ರೀಟೀಕರಣಗೊಂಡಿದ್ದು, ಫೆ. 20ರ ವೇಳೆಗೆ ನೂತನ ರಸ್ತೆ ಸಂಚಾರಕ್ಕೆ ಮುಕ್ತಗೊಳ್ಳಲಿದೆ.