Home ಧಾರ್ಮಿಕ ಸುದ್ದಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಗೆಜ್ಜೆಗಿರಿ ಕ್ಷೇತ್ರ ಸಜ್ಜು

ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಗೆಜ್ಜೆಗಿರಿ ಕ್ಷೇತ್ರ ಸಜ್ಜು

ದೇಯಿ ಬೈದ್ಯೆತಿ, ಕೋಟಿ-ಚೆನ್ನಯ ಮೂಲಸ್ಥಾನ:ಇಂದಿನಿಂದ 8 ದಿನ ಮಹಾಪರ್ವ

947
0
SHARE

ಪುತ್ತೂರು : ದೇಯಿ ಬೈದ್ಯೆತಿ ಕೋಟಿ – ಚೆನ್ನಯ ಮೂಲಸ್ಥಾನ ಕ್ಷೇತ್ರವಾದ ಗೆಜ್ಜೆಗಿರಿ ನಂದನ ಬಿತ್ತಿಲ್‌ನಲ್ಲಿ ಫೆ. 24ರಿಂದ ಎಂಟು ದಿನಗಳ ಕಾಲ ನಡೆಯುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ನೇಮದ ಮಹಾಪರ್ವಕ್ಕೆ ದಿನಂಪ್ರತಿ ಸಾವಿರಾರು ಮಂದಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಅಂತಿಮ ಹಂತದ ಸಕಲ ಸಿದ್ಧತೆಗಳನ್ನು ಕ್ಷೇತ್ರದಲ್ಲಿ ಮಾಡಲಾಗುತ್ತಿದೆ.

ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳೂ ಸಹಿತ ಕರಾವಳಿ ಮತ್ತು ಹೊರ ಜಿಲ್ಲೆ, ರಾಜ್ಯಗಳು, ವಿದೇಶಗಳಲ್ಲೂ ಇರುವ ಲಕ್ಷಾಂತರ ಭಕ್ತರು ಎಂಟು ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ವಾಹನಗಳ ಪಾರ್ಕಿಂಗ್‌ನಿಂದ ಆರಂಭಗೊಂಡು ಮೂಲಸೌಕರ್ಯಗಳನ್ನು ವ್ಯವಸ್ಥಿತವಾಗಿ ರೂಪುಗೊಳಿಸಲಾಗಿದೆ. ನೂರಾರು ಸ್ವಯಂ ಸೇವಕರು ನಿರಂತರ ಕೆಲಸದಲ್ಲಿ ತೊಡಗಿದ್ದಾರೆ.

ಎಂಟು ದಿನಗಳ ಉತ್ಸವದಲ್ಲಿ ಮೊದಲ ಐದು ದಿನಗಳ ಕಾಲದ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾದಿ ಕಾರ್ಯಕ್ರಮಗಳು ನಡೆಯಲಿದ್ದು, ಕೊನೆಯ ಮೂರು ದಿನಗಳಲ್ಲಿ ನೇಮ ನಡೆಯಲಿದೆ. ಆದಿ ದೈವ ಧೂಮಾವತಿ ದೈವಸ್ಥಾನ, ಕುಪ್ಪೆ ಪಂಜುರ್ಲಿ ದೈವಸ್ಥಾನ, ದೇಯಿ ಬೈದ್ಯೆತಿ ಸತ್ಯಧರ್ಮ ಚಾವಡಿ, ದೇಯಿ ಬೈದ್ಯೆತಿ ಮಹಾಸಮಾಧಿ, ಚಾರಿತ್ರಿಕ ಸರೋಳಿ ಸೈಮಂಜ ಕಟ್ಟೆ, ತೀರ್ಥಬಾವಿ ಮತ್ತು ಕಲ್ಲಾಲ್ದಾಯ ಸಾನಿಧ್ಯಗಳು ಗೆಜ್ಜೆಗಿರಿಯ ತಪ್ಪಲಲ್ಲಿ ತಲೆ ಎತ್ತಿದ್ದು, ಗೆಜ್ಜೆಗಿರಿ ಶಿಖರಾಗ್ರದಲ್ಲಿ ಮೂಲಸ್ಥಾನ ಗರಡಿ ಮತ್ತು ಬೆರ್ಮೆರ್‌ ಗುಂಡ ಭವ್ಯವಾಗಿ ಮೂಡಿ ಬಂದಿದೆ. ಇವುಗಳನ್ನು ತಳಿರು ತೋರಣ, ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿದೆ.

15 ಎಕ್ರೆ ಪ್ರದೇಶ ಗೆಜ್ಜೆಗಿರಿ ಕ್ಷೇತ್ರದ 15 ಎಕ್ರೆ ವಿಶಾಲ ಪ್ರದೇಶದಲ್ಲಿ ಉತ್ಸವದ ಸಕಲ ಸಿದ್ಧತೆಗಳು ನಡೆದಿದ್ದು, ಹೊರ ಭಾಗದ 15 ಎಕ್ರೆ ಪ್ರದೇಶದಲ್ಲಿ ಪಾರ್ಕಿಂಗ್‌ ವ್ಯವಸ್ಥೆಗೆ ಜಾಗ ಗುರುತು ಮಾಡಲಾಗಿದೆ. ಸತ್ಯಧರ್ಮ ಚಾವಡಿಯ ಎದುರು ವಿಶಾಲ ಮೈದಾನದಲ್ಲಿ ಜಗದ್ಗುರು ಬ್ರಹ್ಮಶ್ರೀ ನಾರಾಯಣಗುರು ವೇದಿಕೆ ಸಿದ್ಧಗೊಂಡಿದೆ. ಭವ್ಯ ವೇದಿಕೆಯನ್ನು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಅಣಿಗೊಳಿಸಲಾಗಿದೆ.

ಪಕ್ಕದಲ್ಲೇ ಅತಿಗಣ್ಯರಿಗಾಗಿ ವಿಶೇಷ ವಿಶ್ರಾಂತಿ ಕೊಠಡಿ, ವಿಶೇಷ ಭೋಜನ ಕೊಠಡಿ ನಿರ್ಮಿಸಲಾಗಿದೆ. ವಿಶಾಲ ಭೋಜನ ಶಾಲೆ ಗರಡಿಗೆ ತೆರಳುವ ವೀರಪಥ ಮಾರ್ಗದ ಪಕ್ಕದಲ್ಲಿ ವಿಶಾಲ ಉಗ್ರಾಣವನ್ನು ನಿರ್ಮಿಸಲಾಗಿದೆ. ಹೊರೆಕಾಣಿಕೆ ಮೂಲಕ ಬರುವ ಎಲ್ಲ ಸಾಮಗ್ರಿಗಳನ್ನು ಇಲ್ಲಿ ಜೋಡಿಸಲಾಗುತ್ತದೆ. ಗರಡಿ ಮತ್ತು ಸತ್ಯಧರ್ಮ ಚಾವಡಿಯ ಮಧ್ಯದ ಬೆಟ್ಟದಲ್ಲಿ ವಿಶಾಲ ಮೈದಾನ ನಿರ್ಮಿಸಿ ಪಾಕಶಾಲೆ ಮತ್ತು ಭೋಜನ ಶಾಲೆಗಳನ್ನು ನಿರ್ಮಿಸಲಾಗಿದೆ. ಪ್ರಸಾದ ವಿತರಣ ಕೇಂದ್ರ, ಸ್ವಯಂಸೇವಕರ ನೋಂದಣಿ ಕೇಂದ್ರ, ಮಾಹಿತಿ ಕೇಂದ್ರ, ಪೊಲೀಸ್‌ ಚೌಕಿ, ಆರೋಗ್ಯ ಚಿಕಿತ್ಸಾ ಕೇಂದ್ರ, ಶೌಚಾಲಯ ಇತ್ಯಾದಿ ನಿರ್ಮಿಸಲಾಗಿದೆ. ಕ್ಷೇತ್ರದ ಹೊರಭಾಗದಲ್ಲಿ ಪಾರ್ಕಿಂಗ್‌ಗೆ ವಿಶಾಲ ವ್ಯವಸ್ಥೆ ಕಲ್ಪಿಸಲಾಗಿದೆ. ಅತಿಗಣ್ಯರು, ಗಣ್ಯರು, ಕಾರು, ಬಸ್‌, ದ್ವಿಚಕ್ರ ವಾಹನಗಳಿಗೆ ಸ್ಥಳ ಗುರುತಿಸಲಾಗಿದೆ.

LEAVE A REPLY

Please enter your comment!
Please enter your name here