ಪುತ್ತೂರು: ದೇಯಿ ಬೈದ್ಯೆತಿ ಹಾಗೂ ಕೋಟಿ ಚೆನ್ನಯರ ಮೂಲಸ್ಥಾನ ಗೆಜ್ಜೆಗಿರಿ ನಂದನಬಿತ್ತ್ಲ್ ಕ್ಷೇತ್ರಕ್ಕೆ ರವಿವಾರ ಸಾವಿರಾರು ಸಂಖ್ಯೆಯ ಭಕ್ತರು ಭೇಟಿ ನೀಡಿದರು.
ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ನೇಮದ ಬಳಿಕವೂ ನಿರಂತರವಾಗಿ ಭಕ್ತರ ಭೇಟಿ ಮುಂದುವರಿದಿದೆ. ಶನಿವಾರ, ರವಿವಾರ ದೂರದ ಊರುಗಳಿಂದ ಭಕ್ತರು ವಾಹನಗಳಲ್ಲಿ ಆಗಮಿಸಿ ಕ್ಷೇತ್ರದ ದರ್ಶನ ಪಡೆದರು. ಭಕ್ತರ ಭೇಟಿಗೆ ಪೂರಕವಾಗಿ ಕ್ಷೇತ್ರದಲ್ಲಿ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ರವಿವಾರ ವಯಸ್ಕರು, ಮಹಿಳೆಯರು ಹಾಗೂ ಮಕ್ಕಳಿಗೆ ಸರತಿ ಸಾಲು ಹೊರತುಪಡಿಸಿದ ವಿಶೇಷ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಕ್ಷೇತ್ರದ ಯಜಮಾನ ಶ್ರೀಧರ ಪೂಜಾರಿ, ಮಾತೃಶ್ರೀ ಲೀಲಾವತಿ ಅಮ್ಮ, ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಜಯಂತ ನಡುಬೈಲು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪೀತಾಂಬರ ಹೆರಾಜೆ, ಪ್ರಮುಖರಾದ ದೀಪಕ್ ಕೋಟ್ಯಾನ್, ಉಲ್ಲಾಸ್ ಕೋಟ್ಯಾನ್, ಸುಧಾಕರ ಸುವರ್ಣ ತಿಂಗಳಾಡಿ, ಪ್ರವೀಣ್ ಕುಮಾರ್ ಕಡೆಂಜಿಗುತ್ತು ಉಪಸ್ಥಿತರಿದ್ದರು.
ನಿತ್ಯ ಪೂಜೆ
ಕ್ಷೇತ್ರದಲ್ಲಿ ಬೆಳಗ್ಗೆ 6 ಗಂಟೆಗೆ ಬಾಗಿಲು ತೆರೆದು 8 ಗಂಟೆಗೆ ಬೆಳಗ್ಗಿನ ಪೂಜೆ, ಮಧ್ಯಾಹ್ನ ಪೂಜೆ ಹಾಗೂ ರಾತ್ರಿ ಪೂಜೆ ನಡೆಯುತ್ತಿದೆ. ಭೇಟಿ ನೀಡುವ ಭಕ್ತರಿಗೆ ಇಡೀ ದಿನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಕಾರ್ಯಾಲಯ, ಪ್ರಸಾದ ವಿತರಣೆ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದೆ. ಭಕ್ತರು ಸರ್ವಸೇವೆ, ತಂಬಿಲ ಸೇವೆ ಸೇರಿದಂತೆ ವಿವಿಧ ಸೇವೆಗಳನ್ನು ಮಾಡಿಸುತ್ತಿದ್ದಾರೆ.
ಸಾವಿರಾರು ಮಂದಿಗೆ ಅನ್ನದಾನ
ಕ್ಷೇತ್ರದಲ್ಲಿ ಅನ್ನದಾನದ ವ್ಯವಸ್ಥೆ ಮುಂದುವರಿಸಲಾಗಿದ್ದು, ಬೆಳಗ್ಗೆ ಉಪಾ ಹಾರ, ಮಧ್ಯಾಹ್ನ ಹಾಗೂ ರಾತ್ರಿ ಅನ್ನದಾನ ನಡೆಯುತ್ತಿದೆ. ರವಿವಾರ ಸಾವಿರಾರು ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದರು. 200ಕ್ಕೂ ಮಿಕ್ಕಿ ಸ್ವಯಂಸೇವಕರು ವ್ಯವಸ್ಥೆಯಲ್ಲಿ ಸಹಕರಿಸಿದರು.
ಎ. 13: ದೃಢಕಲಶ
ಕ್ಷೇತ್ರದಲ್ಲಿ ನಿತ್ಯ ಸೇವೆ, ಪೂಜೆಗಳು, ಪ್ರತಿ ತಿಂಗಳ ಸಂಕ್ರಾಂತಿಯಂದು ವಿಶೇಷ ಉತ್ಸವ ನಡೆಯಲಿದೆ. ಎ. 13ರಂದು ಕ್ಷೇತ್ರದ ತಂತ್ರಿ ಎಂ.ಕೆ. ಲೋಕೇಶ್ ಶಾಂತಿ ನೇತೃತ್ವದಲ್ಲಿ ದೃಢಕಲಶ ನಡೆಯಲಿದೆ ಎಂದು ಕ್ಷೇತ್ರದ ಪ್ರಮುಖರು ತಿಳಿಸಿದ್ದಾರೆ.