Home ಧಾರ್ಮಿಕ ಸುದ್ದಿ ಪುತ್ತೂರು: ಏಳು ಹಂತಗಳ ರಾಜಗೋಪುರ ಲೋಕಾರ್ಪಣೆ

ಪುತ್ತೂರು: ಏಳು ಹಂತಗಳ ರಾಜಗೋಪುರ ಲೋಕಾರ್ಪಣೆ

1783
0
SHARE

ಪುತ್ತೂರು : ರಾಮ ನವಮಿಯ ಪುಣ್ಯದಿನದಂದು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಾಜ ಗೋಪುರ ಲೋಕಾರ್ಪಣೆಗೊಂಡಿದೆ. ಏಳು ಹಂತಗಳ ಈ ರಾಜಗೋಪುರ ಉದ್ಘಾಟನೆ ಯೊಂದಿಗೆ, ಭಕ್ತರ ಬಹುದಿನಗಳ ಬೇಡಿಕೆ ಯೊಂದು ಈಡೇರಿದಂತಾಗಿದೆ.

ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯ ಕ್ರಮ ನಡೆಯಿತು. ಮಾ. 25ರಂದು ಬೆಳಗ್ಗೆ 7 ಗಂಟೆಯಿಂದ ಗಣಪತಿ ಹವನ, ಸಹಸ್ರ ಕಲಶಾಭಿಷೇಕ, ಮಧ್ಯಾಹ್ನ 11.28ರ ಮಿಥುನ ಲಗ್ನ ಸುಮುಹೂರ್ತದಲ್ಲಿ ನೂತನ ರಾಜಗೋಪುರದ ಶಿಖರ ಪ್ರತಿಷ್ಠೆ, ಕಲಶಾಭಿ ಷೇಕ, ರಾಜಗೋಪುರ ಸಮರ್ಪಣೆ, ಉದ್ಘಾ ಟನೆ, ಸಭಾ ಕಾರ್ಯಕ್ರಮ ನಡೆಯಿತು. ಬಳಿಕ ಮಹಾಪೂಜೆ, ಪ್ರಸಾದ ವಿತರಣೆ, ಸಾಮೂಹಿಕ ಅನ್ನಸಂತರ್ಪಣೆ ಜರಗಿತು.

ಗೋಪುರದ ಮೇಲ್ಭಾಗದಲ್ಲಿ ಐದು ಕಲಶಗಳನ್ನು ಪ್ರತಿಷ್ಠೆ ಮಾಡಲಾಯಿತು. ಕ್ರೇನ್‌ ಮೂಲಕ ತಂತ್ರಿಗಳು ಹಾಗೂ ಇತರರು ಗೋಪುರದ ಮೇಲ್ಭಾಗ ತಲುಪಿ, ಧಾರ್ಮಿಕ ವಿಧಿ ನೆರವೇರಿಸಿದರು.

ಸಭಾ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ಸಂಪುಟ ನರಸಿಂಹಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವ ಚನ ನೀಡಿದರು. ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಶಾಸಕರಾದ ವಿನಯ್‌ ಕುಮಾರ್‌ ಸೊರಕೆ, ಶಕುಂತಳಾ ಶೆಟ್ಟಿ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವ ಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುಧಾಕರ ಶೆಟ್ಟಿ, ಸ್ಥಪತಿ ಎ. ಶೇಖರ್‌ ಉಪಸ್ಥಿತರಿದ್ದರು. ಬೆಳಗ್ಗೆ 9ರಿಂದ ಸಂಜೆ 5.30ರವರೆಗೆ ವಿವಿಧ ಮಹಿಳಾ ಮಂಡಳಿ ಯಿಂದ ಭಜನ ಸಂಕೀರ್ತನೆ, ಸಂಜೆ 5ರಿಂದ ಭಜನೆ ಮತ್ತು ನೃತ್ಯ ಸಂಭ್ರಮ, ರಾತ್ರಿ 7.30ರಿಂದ ಜಗದೀಶ್‌ ಆಚಾರ್ಯ ಪುತ್ತೂರು ಇವರಿಂದ ಭಕ್ತಿಗೀತೆ ಕಾರ್ಯಕ್ರಮ ನಡೆಯಿತು. ರಾಜಗೋಪುರ ಲೋಕಾರ್ಪಣೆ ಸಮಾ ರಂಭಕ್ಕೆ ಆಗಮಿಸಿದ ಸಾವಿರಾರು ಭಕ್ತರಿಗೆ ಶ್ರೀ ಸತ್ಯಸಾಯಿ ಸೇವಾ ಸಮಿತಿ ವತಿಯಿಂದ ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು.

ಹೀಗಿದೆ ಗೋಪುರ
ಗುಡಿಯಲ್ಲಿರುವ ದೇವರ ಕಾಲಿನ ಭಾಗವೇ ರಾಜಗೋಪುರ ಎಂಬ ನಂಬಿಕೆ ಯಿದೆ. ಪುತ್ತೂರು ದೇಗುಲದ ರಾಜಗೋಪುರ ಮಧುರೈ ಶೈಲಿಯಲ್ಲಿದೆ. 1.20 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಗೊಂಡ ಈ ಭವ್ಯ ರಾಜಗೋಪುರವನ್ನು ತಾಂಬೂಲ ಪ್ರಶ್ನೆಯಲ್ಲಿ ಕಂಡುಬಂದಂತೆ ನಿರ್ಮಿಸಲಾಗಿದೆ. ರಾಜಗೋಪುರದ ಎತ್ತರ 47 ಅಡಿ. ಸುತ್ತಳತೆ 19 ಅಡಿ. ತಳದಲ್ಲಿ ವಿಸ್ತಾರ ಜಾಗವಿದ್ದು, ಮೇಲ್ಭಾಗಕ್ಕೆ ಹೋದಂತೆ ಮೊನಚಾಗುತ್ತಾ ಸಾಗುತ್ತದೆ. ವಿವಿಧ ಶಿಲ್ಪ, ಕಾಷ್ಠಶಿಲ್ಪ, ಶಿಲಾಶಿಲ್ಪ, ರಾಜವೈಭವದ ವಿಗ್ರಹ ಕೆತ್ತನೆಗಳಿವೆ. ಮೇಲ್ಭಾಗದಲ್ಲಿ 5 ಕಲಶಗಳನ್ನು ಪ್ರತಿಷ್ಠಾಪಿಸಲಾಗಿದೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರಿಗೆ ಆನೆ ನಿಷಿದ್ಧ. ಇಲ್ಲಿಗೆ ಆನೆ ಬರುವಂತೆಯೇ ಇಲ್ಲ. ಈ ಹಿನ್ನೆಲೆಯಲ್ಲಿ ರಾಜಗೋಪುರದ ಯಾವುದೇ ಭಾಗದಲ್ಲೂ ಆನೆಯ ಕೆತ್ತನೆ ಇಲ್ಲ ಎನ್ನುವುದು ವಿಶೇಷ.

ಮಾ. 26ರಂದು
ರಾಜಗೋಪುರ ಲೋಕಾರ್ಪಣೆ ಹಿನ್ನೆಲೆ ಯಲ್ಲಿ ಮಾ. 26ರಂದು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಬೆಳಗ್ಗೆ 6ರಿಂದ 7.30ರವರೆಗೆ ರುದ್ರ ಪಾರಾಯಣ, 9ರಿಂದ ಶತರುದ್ರಾಭಿಷೇಕ, ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ದೇವರ ಬಲಿ ಉತ್ಸವ, ಬಂಡಿ ಉತ್ಸವ ನಡೆಯಲಿದೆ. ಬೆಳಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ಭಜನ ಸಂಕೀರ್ತನೆ ನಡೆಯಲಿದೆ. ಸಂಜೆ 4ರಿಂದ 7.30ರವರೆಗೆ ಶ್ರೀ ಮಹಾಲಿಂಗೇಶ್ವರ ಭಜನ ಮಂಡಳಿಯಿಂದ ಭಜನೆ ಮತ್ತು ಮಂಗಲೋತ್ಸವ ನಡೆಯಲಿದೆ.

LEAVE A REPLY

Please enter your comment!
Please enter your name here