Home ಧಾರ್ಮಿಕ ಸುದ್ದಿ ಪುತ್ತೂರು ಶ್ರೀ ಮಹಾಲಿಂಗೇಶ್ವರ: ವಿಷು ಕಣಿ ಉತ್ಸವ

ಪುತ್ತೂರು ಶ್ರೀ ಮಹಾಲಿಂಗೇಶ್ವರ: ವಿಷು ಕಣಿ ಉತ್ಸವ

192
0
SHARE

ಪುತ್ತೂರು: ಸೌರಯುಗಾದಿ ವಿಷುವಿನ ಅಂಗವಾಗಿ ರವಿವಾರ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇಗುಲದ ಒಳಾಂಗಣ ದಲ್ಲಿ ವಿಷುಕಣಿ ಉತ್ಸವ ಬಲಿ ನಡೆಯಿತು. ಪ್ರಾತಃಕಾಲ ಶ್ರೀ ದೇವರ ಗರ್ಭಗುಡಿಯ ನಡೆ ತೆರೆದು ವಿಷುಕಣಿ ದರ್ಶನದ ಬಳಿಕ ಭಕ್ತರು ಶ್ರೀ ದೇವರನ್ನು ಭೇಟಿ ಮಾಡಿ ವಿಷು ಕಾಣಿಕೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.
ಅನಂತರ ದೇಗುಲದ ಒಳಾಂಗಣದಲ್ಲಿ ವಿಷು ಕಣಿ ಪ್ರಯುಕ್ತ ಶ್ರೀ ದೇವರ ಉತ್ಸವ ಬಲಿ ನಡೆಯಿತು.

ಸುತ್ತುಗಳ ಆಕರ್ಷಣೆ ದೇವಾಲಯದಲ್ಲಿ ವಿಶೇಷವಾಗಿ ಮೊದಲಿಗೆ ತಂತ್ರ ಸುತ್ತು, ಅನಂತರ ಉಡಿಕೆ ಸುತ್ತು, ಚೆಂಡೆ ಸುತ್ತಿನ ಬಳಿಕ ವಸಂತಕಟ್ಟೆ ಪೂಜೆ, ಸೇವೆಯ ವಾದ್ಯ ಸುತ್ತುಗಳು, ಶಂಖ, ಜಾಗಟೆ ಸುತ್ತು, ಬ್ಯಾಂಡ್‌ ವಾಲಗ ಸುತ್ತು ಮತ್ತು ಸರ್ವ ವಾದ್ಯ ಸುತ್ತು ನಡೆಯಿತು. ಬಳಿಕ ಶ್ರೀ ದೇವರು ಒಳಗಾಗಿ ಮಹಾಪೂಜೆ ನಡೆದು ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.

ವಿಶೇಷ ಅನ್ನಪ್ರಸಾದ ಮಧ್ಯಾಹ್ನ ವಿಷು ಕಣಿಯ ಅಂಗವಾಗಿ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಸೌರ ಯುಗಾದಿ ವಿಷುಕಣಿಯು ಜಾತ್ರೆಯ ಸಂದರ್ಭದಲ್ಲಿಯೇ ಬರುವುದರಿಂದ ಪ್ರತಿ ವರ್ಷವೂ ಬೆಳಗ್ಗಿನ ಶ್ರೀ ದೇವರ ಉತ್ಸವ ಬಲಿ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುತ್ತಾರೆ. ಸಾವಿರಾರು ಮಂದಿ ವಿಷುವಿನ ವಿಶೇಷ ಅನ್ನಪ್ರಸಾದ ಸ್ವೀಕರಿಸಿದರು.

ಸಂಜೆ ಶ್ರೀ ದೇವಳದ ಹೊರಾಂಗಣದಲ್ಲಿ ಶ್ರೀ ದೇವರ ಬಲಿ ಉತ್ಸವ ನಡೆದ ಬಳಿಕ ಪೂರ್ವಶಿಷ್ಟ ಸಂಪ್ರದಾಯದಂತೆ ಶ್ರೀ ದೇವರ ಚಂದ್ರಮಂಡಲ ಉತ್ಸವ ನಡೆದು ಅನಂತರ
ಶ್ರೀ ದೇವರ ಪೇಟೆ ಸವಾರಿ ನಡೆಯಿತು. ಹೂ ಸಮರ್ಪಣೆ ದೇವಾಲಯಕ್ಕೆ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಳ್ತಿ ದೈವಗಳ ಭಂಡಾರ ವಿವಿಧ ಬಿರುದಾವಳಿಗಳಿಂದ ಆಗಮಿಸುವ ಹಿನ್ನೆಲೆಯಲ್ಲಿ ಸೀಮೆಯ ಭಕ್ತರು ಮಲ್ಲಿಗೆ ಹೂವು ಸಮರ್ಪಣೆ ಸೇವೆ ಮಾಡುತ್ತಾರೆ. ಮಲ್ಲಿಗೆ ಚೆಂಡುಗಳನ್ನು ದೈವಗಳಿಗೆ ಬಲ್ನಾಡಿನಲ್ಲಿ, ಪುತ್ತೂರು ದೇವಾಲಯದಲ್ಲಿ ಮತ್ತು ಪುತ್ತೂರು ಹಳೆ ಪೊಲೀಸ್‌ ಠಾಣೆಯ ಬಳಿ ಇರುವ ಅಂಕದ ಕಟ್ಟೆಯ ಬಳಿ ಸಮರ್ಪಿಸುತ್ತಾರೆ. ಜಿಲ್ಲೆಯ ಬೇರೆ ಬೇರೆ ಭಾಗಗಳಿಂದ ಮಲ್ಲಿಗೆ ಹೂವಿನ ವ್ಯಾಪಾರಸ್ಥರು ಪುತ್ತೂರಿಗೆ ಆಗಮಿಸುತ್ತಾರೆ. ಲಕ್ಷಾಂತರ ರೂ. ಮೌಲ್ಯದ ಮಲ್ಲಿಗೆ ಶ್ರೀ ದೈವಗಳಿಗೆ ಸಮರ್ಪಣೆಯಾಗುತ್ತದೆ.

ಹರಕೆ ರೂಪದಲ್ಲಿ ಬಂದ ಮಲ್ಲಿಗೆಯನ್ನು ಪ್ರಸಾದ ರೂಪದಲ್ಲಿ ಕುಂಕುಮದೊಂದಿಗೆ ಭಕ್ತರಿಗೆ ವಿತರಿಸಲಾಗುತ್ತದೆ. ಎ. 17ರಂದು ಬ್ರಹ್ಮರಥೋತ್ಸವ ಮುಗಿದ ಬಳಿಕ ಶ್ರೀ
ದೈವಗಳ ಭಂಡಾರವನ್ನು ಬಂಗಾರ ಕಾಯರ್‌ಕಟ್ಟೆಯ ಬಳಿ ದೇವರ ಪೇಟೆ ಸವಾರಿಯೊಂದಿಗೆ ಬೀಳ್ಕೊಡಲಾಗುತ್ತದೆ. ಈ ವಿಶಿಷ್ಟ ಸಂಪ್ರದಾಯವನ್ನು ಜಾತ್ರೆಯ ಸಂದರ್ಭದಲ್ಲಿ ಅನೂಚಾನವಾಗಿ ಪಾಲಿಸಲಾಗುತ್ತದೆ.

ದೀಪದ ಬಲಿ ವಿಶೇಷ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಬೆಳ್ಳಿ ಮೂಡುವ ಹೊತ್ತಿಗೆ ಶ್ರೀ ದೇವರ ದೀಪ ಬಲಿ ಉತ್ಸವ ನಡೆಯುತ್ತದೆ. ಪ್ರತಿವರ್ಷ ಎ. 16ರಂದು ಸೂರ್ಯೋದಯಕ್ಕೆ ಮೊದಲು ಈ ಉತ್ಸವ ನಡೆಯುತ್ತದೆ. ದೀಪ ಬಲಿ ಉತ್ಸವ ನಡೆಯುವುದರಿಂದ ದೇವಾಲಯದಲ್ಲಿ ಜಾತ್ರಾ ಪ್ರಯುಕ್ತ ಬೆಳಗಿನ ಉತ್ಸವ ನಡೆಯುವುದಿಲ್ಲ. ವರ್ಷದಲ್ಲಿ ಒಂದು ದಿನ ಮಾತ್ರ ಅಂದರೆ ಜಾತ್ರೆಯ ಸಂದರ್ಭ ಎ. 16ರಂದು ಮಾತ್ರ ಶ್ರೀ ದೇವರ ದೀಪ ಬಲಿ ಉತ್ಸವ ನಡೆಯುತ್ತದೆ.

ಬ್ರಹ್ಮರಥೋತ್ಸವದ ಎ. 17ರ ಬೆಳಗ್ಗೆ ಶ್ರೀ ದೇವರ ದರ್ಶನ ಬಲಿ ಸೇವೆಯ ಬಳಿಕ ಭಕ್ತರಿಂದ ಬಟ್ಟಲು ಕಾಣಿಕೆ ಸಮರ್ಪಣೆ ನಡೆಯುತ್ತದೆ. ವರ್ಷದಲ್ಲಿ ಒಂದು ಬಾರಿ ಮಾತ್ರ ದೇವರಿಗೆ ಬಟ್ಟಲು ಕಾಣಿಕೆ ಸಮರ್ಪಿಸುವ ಸಂಪ್ರದಾಯ ಇಲ್ಲಿದೆ. ದರ್ಶನ ಬಲಿಯೊಂದಿಗೆ ದೇವರ ಜತೆ ಇರುವ ಬಲ್ನಾಡು ದಂಡನಾಯಕ ಉಳ್ಳಾಳ್ತಿ ಭಂಡಾರದ ಉಳ್ಳಾಳ್ತಿ ದೈವದ ಪಾತ್ರಿ ಅಪ್ಪಣೆ ನೀಡಿದ ಬಳಿಕವಷ್ಟೇ ಬಟ್ಟಲು ಕಾಣಿಕೆ ಸಮರ್ಪಣೆಯಾಗುವುದು ವಿಶೇಷ.

LEAVE A REPLY

Please enter your comment!
Please enter your name here