Home ಧಾರ್ಮಿಕ ಸುದ್ದಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಇಂದು ಬ್ರಹ್ಮರಥೋತ್ಸವ, ಪುತ್ತೂರು ಬೆಡಿ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಇಂದು ಬ್ರಹ್ಮರಥೋತ್ಸವ, ಪುತ್ತೂರು ಬೆಡಿ

1633
0
SHARE

ಪುತ್ತೂರು : ಸೀಮೆಯ ಒಡೆಯ ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವ, ಪುತ್ತೂರು ಬೆಡಿ ಎ. 17ರಂದು ಬುಧವಾರ ರಾತ್ರಿ ನಡೆಯಲಿದೆ.

ಶ್ರೀ ಮಹಾಲಿಂಗೇಶ್ವರ ದೇವರ ನಡೆ ದೇಗುಲವಾಗಿರುವ ಪತಾಕೆ, ಅಷ್ಟ ದಿಕ್ಪಾಲಕರು, ಶಿಖರ ಕಲಶ, ಶ್ವೇತ ಚಕ್ರ ಮತ್ತು ಸತ್ತಿಗೆ ಅಳವಡಿಸಿದ 70 ಅಡಿ ಎತ್ತರದ ಬ್ರಹ್ಮರಥದಲ್ಲಿ ವರ್ಷದಲ್ಲಿ ಶ್ರೀ ದೇವರು ವಿರಾಜಮಾನರಾಗಲಿದ್ದಾರೆ. ರಾತ್ರಿ 8ರ ಅನಂತರ ದೇವಾಲಯದ ಮುಂಭಾಗದ ರಥ ಬೀದಿಯಲ್ಲಿ 400 ಮೀ. ಉದ್ದಕ್ಕೆ ಬ್ರಹ್ಮರಥ ತೆರಳಿ ದೇವಾಲಯದ ಭಾಗಕ್ಕೆ ಮರಳುತ್ತದೆ.

ಈ ಕ್ಷಣ ಅಪೂರ್ವ ಬ್ರಹ್ಮವಾಹಕರು ಶ್ರೀ ಮಹಾಲಿಂಗೇಶ್ವರ ದೇವರ ಉತ್ಸವ ಮೂರ್ತಿಯನ್ನು ತಲೆಯ ಮೇಲೆ ಹೊತ್ತು ಬ್ರಹ್ಮರಥವನ್ನು ಏರುವ ಸಮಯ ಪುತ್ತೂರು ಸೀಮೆಯ
ಜನರಿಗೆ ಅಪೂರ್ವ ಧಾರ್ಮಿಕ ಕ್ಷಣ. ಚೆಂಡೆ ಮೇಳ, ಮಂಗಳವಾದ್ಯ, ಬ್ಯಾಂಡ್‌ ವಾಲಗ, ಶಂಖ, ಜಾಗಟೆ, ಮಂಗಳಕರ ನಿನಾದದ ಹಿನ್ನೆಲೆಯಲ್ಲಿ ಶ್ರೀ ದೇವರು ಬ್ರಹ್ಮರಥಾರೂಢರಾಗುತ್ತಾರೆ. ದೇವಾಲಯದ ಮುಂಭಾಗದ ಗದ್ದೆಯಲ್ಲಿ ಸೇರಿದ ಸಹಸ್ರಾರು ಭಕ್ತರು ಏಕ ಕಂಠದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಪಾದಾರವಿಂದಗಳಿಗೆ ಗೋವಿಂದ
ಎನ್ನಿ ಗೋವಿಂದ ಎಂದು ಜಯಘೋಷ ಹಾಕುತ್ತಾರೆ.

ಜನಸಾಗರ ಶ್ರೀ ಮಹಾಲಿಂಗೇಶ್ವರ ದೇವಾಲಯದ ಎದುರುಗದ್ದೆಯಲ್ಲಿ ಬ್ರಹ್ಮರಥೋತ್ಸವದ ಸಂದರ್ಭದಲ್ಲಿ ರಥೋತ್ಸವ ಮತ್ತು ಸುಡುಮದ್ದು ಪ್ರದರ್ಶನಕ್ಕೆ 1 ಲಕ್ಷಕ್ಕೂ ಮಿಕ್ಕಿ ಜನಸಾಗರ ಸೇರುತ್ತದೆ. ಸೀಮಾತೀತವಾಗಿ ದೇಶದಾದ್ಯಂತ ಇರುವ ಭಕ್ತರು ರಥೋತ್ಸವವನ್ನು ಕಣ್ತುಂಬಿಕೊಳ್ಳುತ್ತಾರೆ. ರಥಬೀದಿಯಲ್ಲಿ ಬ್ರಹ್ಮರಥದ ಎರಡೂ ಕಡೆ ಭಕ್ತರು ನಿಂತು ಬ್ರಹ್ಮರಥೋತ್ಸವ ವೀಕ್ಷಿಸಿದರೆ ರಥ ಎಳೆಯುವವರ ಸಂಖ್ಯೆಯೂ ದೊಡ್ಡದಿರುತ್ತದೆ.

ಬೆಳಗ್ಗೆ ಶ್ರೀ ದೇವಾಲಯದಲ್ಲಿ ದೇವರ ಉತ್ಸವ ಬಲಿ ಮತ್ತು ದರ್ಶನ ಬಲಿ ನಡೆಯುತ್ತದೆ. ಸಂಜೆ 5 ಗಂಟೆಯ ಬಳಿಕ ದೇವಾಲಯದ ಒಳಾಂಗಣ, ಹೊರಾಂಗಣ ಮತ್ತು ಜಾತ್ರೆ ಗದ್ದೆಯಲ್ಲಿ ಜನರು ಸೇರಲಾರಂಭಿಸುತ್ತಾರೆ. ಇಲ್ಲಿನ ಭಕ್ತರ ಸಂದಣಿ ತೆರವಾಗುವುದೇ ಶ್ರೀ ದೇವರು ಬ್ರಹ್ಮರಥದಿಂದ ಇಳಿದು ಪೇಟೆ ಸವಾರಿಗೆ ತೆರಳಿದ ಬಳಿಕ.

ವಾಹನ ನಿಲುಗಡೆಗೆ ವ್ಯವಸ್ಥೆ ಪುತ್ತೂರು ನಗರದ ತೆಂಕಿಲ, ಕೊಂಬೆಟ್ಟು, ಕಿಲ್ಲೆ ಮೈದಾನ, ಎಪಿಎಂಸಿ ರಸ್ತೆ ಬಳಿಯ ಗದ್ದೆಯಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗುತ್ತದೆ. ಸಂಜೆ 4 ಗಂಟೆಯಿಂದ ರಾತ್ರಿ ಬ್ರಹ್ಮರಥೋತ್ಸವ ಮುಗಿಯುವ ತನಕ ಮುಖ್ಯ ರಸ್ತೆಯಲ್ಲಿ ಕೊಂಬೆಟ್ಟು ಕ್ರಾಸ್‌ನಿಂದ ಬಸ್ಸು ನಿಲ್ದಾಣದ ತನಕ ಯಾವುದೇ ವಾಹನ ಸಂಚಾರಕ್ಕೆ ಅವಕಾಶವಿರುವುದಿಲ್ಲ. ಸುರಕ್ಷಾ ಕ್ರಮವಾಗಿ ಗದ್ದೆಯಲ್ಲಿ ಅಗ್ನಿಶಾಮಕದಳದ ವಾಹನ, ಆರೋಗ್ಯ ಇಲಾಖೆಯ ಆ್ಯಂಬುಲೆನ್ಸ್‌ ಮತ್ತು ವೈದ್ಯರು ಇರುತ್ತಾರೆ.

ಬಸ್ಸಿನ ವ್ಯವಸ್ಥೆ ಪ್ರತಿ ವರ್ಷದಂತೆ ಈ ಬಾರಿಯೂ ಬ್ರಹ್ಮರಥೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಕೆಎಸ್‌ಆರ್‌ಟಿಸಿ ವತಿಯಿಂದ ತಾಲೂಕಿನ ವಿವಿಧ ಕಡೆಗಳಿಗೆ ಬಸ್ಸಿನ ವ್ಯವಸ್ಥೆ
ಮಾಡಲಾಗುತ್ತದೆ. ಸಂಜೆ ಕೊನೆಯ ಟ್ರಿಪ್‌ ತೆರಳಿದ ಬಸ್ಸುಗಳು ರಾತ್ರಿ ಮರಳಿ ಪುತ್ತೂರಿಗೆ ಬರಲಿವೆ. ರಥೋತ್ಸವ ಮುಗಿದ ಕೂಡಲೇ ಭಕ್ತರನ್ನು ಕರೆದುಕೊಂಡು ಬಸ್ಸುಗಳು ತೆರಳುತ್ತವೆ.

LEAVE A REPLY

Please enter your comment!
Please enter your name here