ಪುತ್ತೂರು:ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ರಾಜಗೋಪುರ ಸಮರ್ಪಣೆಯ ಅಂಗವಾಗಿ ಮೂರು ದಿನಗಳ ಕಾಲ ವಿವಿಧ ತಾಂತ್ರಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು ಸೋಮವಾರ ರಾತ್ರಿ ಸಮಾಪನಗೊಂಡಿತು.
ಸೋಮವಾರ ಬೆಳಗ್ಗೆ ರುದ್ರ ಪಾರಾಯಣ, ಶತರುದ್ರಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ದೇವರ ಬಲಿ ಉತ್ಸವ, ಬಂಡಿ ಉತ್ಸವ, ವಿವಿಧ ತಂಡಗಳಿಂದ ಭಜನ ಕಾರ್ಯಕ್ರಮ ನಡೆಯಿತು. ರಾತ್ರಿಯ ಕಾರ್ಯಕ್ರಮಗಳಲ್ಲಿ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡರು.
ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ವೈಧಿಕ ವಿಧಿ-ವಿಧಾನಗಳು ನಡೆದವು. ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿ, ಸದಸ್ಯರಾದ ಕರುಣಾಕರ ರೈ, ಯು.ಪಿ. ರಾಮಕೃಷ್ಣ, ವಸಂತ ಕೆದಿಲಾಯ, ಜಾನು ನಾಯ್ಕ, ನಯನಾ ರೈ, ರೋಹಿಣಿ ಆಚಾರ್ಯ, ಕಲ್ಲೇಗ ಸಂಜೀವ ನಾಯಕ್ ಕಲ್ಲೇಗ ಉಪಸ್ಥಿತರಿದ್ದರು.