
ಪುತ್ತೂರು: ತುಳುನಾಡಿನ ಅವಳಿ ವೀರರಾದ ಕೋಟಿ-ಚೆನ್ನಯರು ಹಾಗೂ ಮಾತೆ ದೇಯಿ ಬೈದ್ಯೆತಿ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತಿಲ್ ತುಳುನಾಡಿನ ಧಾರ್ಮಿಕ ಇತಿಹಾಸದಲ್ಲಿ ಹೊಸ ಮೈಲುಗಲ್ಲು ಸೃಷ್ಟಿಸಿದೆ. ಕಳೆದ 48 ಗಂಟೆಗಳ ಅವಧಿಯಲ್ಲಿ ಕ್ಷೇತ್ರವನ್ನು ಸಂದರ್ಶಿಸಿದ ಭಕ್ತರ ಸಂಖ್ಯೆ ಲಕ್ಷವನ್ನು ದಾಟಿರುವುದು ಇದಕ್ಕೆ ಸಾಕ್ಷಿಯಾಗಿದೆ.
ಫೆ. 24ರಿಂದ ಕ್ಷೇತ್ರದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆದು ಅನಂತರ ಫೆ.29ರಿಂದ ಮೊದಲ್ಗೊಂಡು ಮಾ. 2ರ ತನಕ ಮೂಲಸ್ಥಾನ ಗರೋಡಿ ನೇಮ ನಡೆಯುತ್ತಿದೆ. ದೂರದ ಉಡುಪಿ, ಚಿಕ್ಕಮಗಳೂರು, ಕಾಸರಗೋಡು, ಸುಳ್ಯ, ಮಡಿಕೇರಿ, ಕುಂದಾಪುರ, ಕಾರ್ಕಳ, ಮೂಡುಬಿದಿರೆ, ಕಡಬ, ನೆಲ್ಯಾಡಿ ಸಹಿತ ದೂರದ ಊರುಗಳ ಭಕ್ತರು, ಕುತೂಹಲಿಗರ ದಂಡು ಕ್ಷೇತ್ರಕ್ಕೆ ಹರಿದು ಬರುತ್ತಿದೆ. ದಿನದಿಂದ ದಿನಕ್ಕೆ ಕ್ಷೇತ್ರವನ್ನು ಸಂದರ್ಶಿಸುವ ಭಕ್ತರ ಸಂಖ್ಯೆಯಲ್ಲಿ ಬಹಳಷ್ಟು ಏರಿಕೆಯಾಗುತ್ತಿದೆ. ಭಕ್ತ ಪ್ರವಾಹ ವಾರದ ಕೊನೆಯ ದಿನವಾದ ಶನಿವಾರ ಕ್ಷೇತ್ರಕ್ಕೆ ಆಗಮಿಸಿದ ಭಕ್ತ ಪ್ರವಾಹ ಬಡಗನ್ನೂರಿನಂತಹ ಸಣ್ಣ ಗ್ರಾಮದ ಚಿತ್ರಣವನ್ನೇ ಬದಲಿಸಿದೆ. ಕ್ಷೇತ್ರದಲ್ಲಿ ಪಾರ್ಕಿಂಗ್, ವಿಸ್ತಾರವಾದ ಭೋಜನ ಶಾಲೆ ಸಹಿತ ಮೂಲ ಸೌಕರ್ಯಗಳನ್ನು ಮಾಡಿದ್ದರೂ ನಿರೀಕ್ಷೆಗೂ ಮೀರಿದ ಭಕ್ತ ಪ್ರವಾಹ ವ್ಯತ್ಯಾಸಗಳನ್ನು ಉಂಟುಮಾಡಿದೆ.
ನಿರೀಕ್ಷೆಗೂ ಮೀರಿದ ವಾಹನಗಳ ಸಂಚಾರದಿಂದ ಉಂಟಾದ ಅಡಚಣೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಪುತ್ತೂರು ಸಂಚಾರ ಪೊಲೀಸ್ ಇನ್ಸ್ಪೆಕ್ಟರ್ ಚೆಲುವಯ್ಯ ನೇತೃತ್ವದಲ್ಲಿ ಪೊಲೀಸರು ಹಾಗೂ ಗೃಹರಕ್ಷಕ ದಳದವರು ರಾತ್ರಿಯಿಡೀ ಶ್ರಮಿಸಿದ್ದಾರೆ. ಸ್ಥಳೀಯ ಪಟ್ಟೆ ಹಾಗೂ ಪೆರಿಗೇರಿಯ 100ಕ್ಕೂ ಮಿಕ್ಕಿ ಯುವಕರು ಸಂಚಾರ ಸುವ್ಯವಸ್ಥೆಗಾಗಿ ಕಳೆದ 48 ಗಂಟೆಗಳಲ್ಲಿ ನಿರಂತರ ಕೆಲಸ ನಿರ್ವಹಿಸಿದ್ದರು. ಪಟ್ಟೆಯ ಮುಖ್ಯ ರಸ್ತೆಯಿಂದ ವಾಹನಗಳಲ್ಲಿದ್ದ ಭಕ್ತರು ಕಾಲ್ನಡಿಗೆಯಲ್ಲಿ ಕ್ಷೇತ್ರಕ್ಕೆ ತೆರಳಿದರು.
ಲಕ್ಷಾಂತರ ಮಂದಿಗೆ ಅನ್ನದಾನ ಶನಿವಾರ ಸಂಜೆಯಿಂದ ರಜಾ ದಿನವಾದ ರವಿವಾರ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರವನ್ನು ಸಂದರ್ಶಿಸಿದ್ದು, ಅವರಿಗಾಗಿ ನಿರಂತರ ಅನ್ನದಾನದ ವ್ಯವಸ್ಥೆ ಮಾಡಲಾಯಿತು. ಕ್ಷೇತ್ರದ ಸ್ವಯಂಸೇವಕರು, ಪ್ರಮುಖರು ಅಚ್ಚುಕಟ್ಟಿನ ವ್ಯವಸ್ಥೆ ನಿರ್ವಹಿಸಿದರು. ಶನಿವಾರ ರಾತ್ರಿ ಅನ್ನದಾನಕ್ಕೆ ಸಂಬಂಧಿಸಿದಂತೆ ಅಲ್ಪ ವ್ಯತ್ಯಾಸ ಉಂಟಾಯಿತು.
ಮಾತೆ – ಮಕ್ಕಳ ಸಮಾಗಮ ಕೋಟಿ-ಚೆನ್ನಯರ ಇತಿಹಾಸಕ್ಕೆ ಸಂಬಂಧಿಸಿ ಪ್ರಥಮ ಬಾರಿಗೆ ಕ್ಷೇತ್ರದಲ್ಲಿ ನಡೆದ ಮಾತೆ ದೇಯಿ ಬೈದ್ಯೆತಿ ಹಾಗೂ ಕೋಟಿ-ಚೆನ್ನಯರ ಪುನೀತ ಸಮಾಗಮ ಭಕ್ತರಲ್ಲಿ ವಿಶೇಷ ಕುತೂಹಲ ಮೂಡಿಸಿತ್ತು. ಮಾ. 1ರಂದು ರಾತ್ರಿ ನಡೆದ ಈ ವಿಶೇಷವನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾದು
ಕುಳಿತಿದ್ದರು.