ಪುತ್ತೂರು : ಜಿಲ್ಲೆಯ ಗಣೇಶೋತ್ಸವಗಳ ಪೈಕಿ ಅಗ್ರ ಪಂಕ್ತಿಯಲ್ಲಿ ಗುರುತಿಸಿಕೊಂಡ ಪುತ್ತೂರಿನ ಕಿಲ್ಲೆ ಮೈದಾನದ ಶ್ರೀ ಮಹಾಗಣೇಶೋತ್ಸವ ಸೆ. 19ರಂದು ಶೋಭಾಯಾತ್ರೆಯೊಂದಿಗೆ ಸಮಾಪನಗೊಂಡಿತು.
ಈ ಬಾರಿ 61ನೇ ವರ್ಷದ ಸಂಭ್ರಮ ವನ್ನಾಚರಿಸಿದ ಕಿಲ್ಲೆ ಮೈದಾನದ ಗಣೇಶೋತ್ಸವದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
ಸೆ. 19ರಂದು ಮಧ್ಯಾಹ್ನ ಶ್ರೀ ದೇವರ ಉತ್ಸವ ಬಲಿ ನಡೆದಿತ್ತು. ಸಂಜೆ ರಕ್ತೇಶ್ವರಿ ಮತ್ತು ಪಂಜುರ್ಲಿ ದೈವದ ಭೂತಕೋಲ ಜರಗಿತು. ಸಂಜೆ 8.30ಕ್ಕೆ ರಂಗಪೂಜೆ, 9.30ಕ್ಕೆ ಮಹಾಪೂಜೆ ನಡೆಯಿತು. ಇದೇ ಸಂದರ್ಭ ಸುಡುಮದ್ದು ಪ್ರದರ್ಶನ ನಡೆದ ಬಳಿಕ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು.
ಕೋರ್ಟ್ರಸ್ತೆ, ಮುಖ್ಯರಸ್ತೆ, ದರ್ಬೆ, ಪರ್ಲಡ್ಕ, ತಾಲೂಕು ಆಫೀಸು ರಸ್ತೆ, ರಾಧಾಕೃಷ್ಣ ಮಂದಿರ, ಬೊಳುವಾರು ಮಾರ್ಗವಾಗಿ ಸಾಗಿದ ಶೋಭಾಯಾತ್ರೆ ಮಂಜಲ್ಪಡು³ ಕೆರೆಯಲ್ಲಿ ಶ್ರೀ ಗಣೇಶ ವಿಗ್ರಹ ಜಲಸ್ತಂಭನಗೊಳಿಸುವ ಮೂಲಕ ಸಮಾಪನಗೊಂಡಿತು.
ಮಂಜಲ್ಪಡು ಕೆರೆಯಲ್ಲಿ ಮೂರ್ತಿ ವಿಸರ್ಜನೆ ನಡೆಯುವಾಗ ಸೆ. 20ರ ಮುಂಜಾನೆ ಆಗಿತ್ತು. ಶೋಭಾಯಾತ್ರೆಯಲ್ಲಿ ತಾಲೀಮು ಮೊದಲಾದವು ಗಮನ ಸೆಳೆದವು.