Home ಧಾರ್ಮಿಕ ಸುದ್ದಿ ದೇಯಿ ಬೈದ್ಯೆತಿ ಸಮಾಧಿ ಪುನರುತ್ಥಾನ

ದೇಯಿ ಬೈದ್ಯೆತಿ ಸಮಾಧಿ ಪುನರುತ್ಥಾನ

450
0
SHARE

ಪುತ್ತೂರು : ಗೆಜ್ಜೆಗಿರಿ ಕ್ಷೇತ್ರದಲ್ಲಿ ದೇಯಿ ಬೈದ್ಯೆತಿ ಸಮಾಧಿಯ ಪುನರುತ್ಥಾನ ಕೆಲಸಕ್ಕೆ ಪ್ರಸ್ತುತ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಅವಳಿ ವೀರರಾದ ಕೋಟಿ ಚೆನ್ನಯರ ತಾಯಿ ದೇಯಿ ಬೈದ್ಯೆತಿಯ ಮನೆಯನ್ನು ಸತ್ಯಧರ್ಮ ಚಾವಡಿ ರೂಪದಲ್ಲಿ ಅಭಿವೃದ್ಧಿ ಪಡಿಸುವ ಜತೆಗೆ ತಾಯಿಯ ಮಹಾ ಸಮಾಧಿಯ ನವೀಕರಣವೂ ಅಂತಿಮ ಹಂತದಲ್ಲಿದೆ.

ಶಿಲ್ಪಿ ರಮೇಶ್‌ ಕಾರಂತ ಬೆದ್ರಡ್ಕ ಮಾರ್ಗದರ್ಶನ, ವಾಸ್ತು ಎಂಜಿನಿಯರ್‌ ಸಂತೋಷ್‌ ಕುಮಾರ್‌ ಕೊಟ್ಟಿಂಜ ವಿನ್ಯಾಸದ ಪ್ರಕಾರ ಕಾಮಗಾರಿ ನಡೆಯುತ್ತಿದೆ. ಸ್ತಪತಿ ಲಮಾಣಿ ಕುಬೇರಪ್ಪ ಮತ್ತು ತಂಡ ಶ್ರಮಿಸುತ್ತಿದೆ. ಗೆಜ್ಜೆಗಿರಿ ನಂದನ ಬಿತ್ತಿಲ್‌ ಕ್ಷೇತ್ರದಲ್ಲಿ ಫೆ.24ರಿಂದ ಮಾ. 2ರ ವರೆಗೆ ಬ್ರಹ್ಮಕಲಶೋತ್ಸವ, ಮೂಲಸ್ಥಾನ ಗರಡಿ ನೇಮ ನಡೆಯಲಿದೆ.

ಮಹಾ ಸಮಾಧಿಯಲ್ಲಿ ಪುಷ್ಪಾರ್ಚನೆ ಮಹೋತ್ಸವವೂ ನಡೆಯಲಿದೆ. ಸುತ್ತಲೂ ಗದ್ದೆ ಮತ್ತು ಮಧ್ಯದಲ್ಲಿ ಗಿಡಮರಗಳ ನಡುವೆ ಸಮಾಧಿ ಮೂಲ ರೂಪದಲ್ಲಿ ಉಳಿದುಕೊಂಡಿತ್ತು. ಇದೇ ಮೊದಲ ಬಾರಿಗೆ ಅದನ್ನು ಪುನರುತ್ಥಾನ ಮಾಡಲಾಗುತ್ತಿದೆ. ದೇಯಿ ಮಾತೆಯನ್ನು ಸಮಾಧಿ ಮಾಡಲಾದ ಸ್ಥಳವನ್ನು ಮೂಲ ರೂಪದಲ್ಲೇ ಉಳಿಸಿಕೊಂಡು, ಸುತ್ತಲೂ ಕೆಂಪು ಕಲ್ಲಿನಿಂದ ಅಷ್ಟಭುಜಾಕೃತಿಯ ಸಮಾಧಿ ನಿರ್ಮಿಸಲಾಗುತ್ತಿದೆ.

ಮಧ್ಯ ಭಾಗದಲ್ಲಿ ಪಾರಂಪರಿಕ ಶೈಲಿಯ ವೃಂದಾವನ ಕಟ್ಟೆ ಇರಲಿದ್ದು, ಅದರ ಸುತ್ತಲೂ ಅಷ್ಟಭುಜಾಕೃತಿಯ ಆವರಣ ಇರಲಿದೆ. ಇದರ ಸುತ್ತಲೂ ಭಕ್ತರು ನಡೆದಾಡುವ ಪಥವಿದ್ದು, ಹೊರಾವರಣದಲ್ಲಿ ಅಷ್ಟಭುಜಾಕೃತಿ ಮೆಟ್ಟಿಲು ಸಹಿತ ಆವರಣ ಇದೆ. ಸುತ್ತಲೂ ಔಷಧೀಯ ಗಿಡಗಳನ್ನು ನೆಟ್ಟು ಪ್ರಕೃತಿ ರಮಣೀಯತೆಯ ಮಧ್ಯೆ ಸಮಾಧಿಯನ್ನು ಉಳಿಸಲು ಚಿಂತಿಸಲಾಗಿದೆ. ಇದೇ
ಕಾರಣಕ್ಕೆ ಸಮಾಧಿ ಸ್ಥಳದಲ್ಲಿದ್ದ ಗಿಡಗಳನ್ನೂ ಉಳಿಸಿಕೊಳ್ಳಲಾಗಿದೆ.

ಶತಮಾನಗಳ ಹಿಂದಿನ ಘಟನೆ ಸುಮಾರು 450 ವರ್ಷಗಳ ಹಿಂದೆ ಕೋಟಿ – ಚೆನ್ನಯರಿಗೆ ದೇಯಿ ಬೈದ್ಯೆತಿ ಜನ್ಮ ನೀಡಿದ್ದರು. ಮಕ್ಕಳು ಹುಟ್ಟಿದ ಕೆಲವೇ ದಿನಗಳಲ್ಲಿ ತಾಯಿ ಕೆರೆಯ ನೀರಿನಲ್ಲಿ ದುರ್ಮರಣಕ್ಕೆ ತುತ್ತಾಗಿದ್ದರು. ಸಹೋದರ ಸಾಯನ ಬೈದ್ಯರು ತಂಗಿಯ ಕಳೇಬರವನ್ನು ತಂದು ಗೆಜ್ಜೆಗಿರಿ ಮನೆಯ ವಠಾರದಲ್ಲಿ ಸಮಾಧಿ ಮಾಡಿದ್ದರು.

ತಂಗಿಯ ಪಾರ್ಥಿವ ಶರೀರವನ್ನು ತಂದು ಸಮಾಧಿ ಮಾಡಿದ ಸಾಯನರು, ಕೆಲ
ಸಮಯದ ಬಳಿಕ ಪುಟಾಣಿಗಳಾದ ಕೋಟಿ ಚೆನ್ನಯರನ್ನು ಬೀಡಿನಿಂದ ಕರೆತಂದು ಗೆಜ್ಜೆಗಿರಿಯಲ್ಲೇ ಸಾಕಿ ಬೆಳೆಸಿದ್ದರು. ಬಾಲ್ಯದಲ್ಲಿರುವಾಗ ಸಾಕು ತಂದೆ ತಾಯಿಗೆ ಬೇಡವಾಗಿ ಕಾಡು ಪಾಲಾಗಿದ್ದ ಸುವರ್ಣ ಕೇದಗೆಯನ್ನು ಸಾಯನ ಬೈದ್ಯರು ಗೆಜ್ಜೆಗಿರಿಗೆ ಕರೆತಂದು ತನ್ನ ಸಹೋದರಿಯಾಗಿ ಬೆಳೆಸಿದ್ದಲ್ಲದೆ, ದೇಯಿ ಬೈದ್ಯೆತಿ ಎಂಬ ಹೆಸರಿಟ್ಟಿದ್ದರು. ಆಕೆಗೆ ಪುನರ್ಜನ್ಮ ಸಿಕ್ಕಿದ ಮನೆಯಲ್ಲೇ ಕೊನೆಗೆ ಆಕೆ ಚಿರಶಾಂತಿ ಪಡೆದುದಲ್ಲದೆ, ಐನೂರು ವರ್ಷಗಳ ಅನಂತರ ಮಕ್ಕಳು ಮತ್ತು ಸಹೋದರನ ಸಹಿತ ಮೂಲಸ್ಥಾನದಲ್ಲಿ ಆರಾಧನೆ ಪಡೆಯುವ ಕಾಲಘಟ್ಟ ಬಂದಿದೆ.

LEAVE A REPLY

Please enter your comment!
Please enter your name here