Home ಧಾರ್ಮಿಕ ಕಾರ್ಯಕ್ರಮ ಮೃತ್ಯುಂಜಯ ಹೋಮ, ಬಿಂಬ ಶುದ್ಧಿ ಕಲಶ

ಮೃತ್ಯುಂಜಯ ಹೋಮ, ಬಿಂಬ ಶುದ್ಧಿ ಕಲಶ

ಕಕ್ಯಪದವು ಬ್ರಹ್ಮಬೈದರ್ಕಳ ಗರೋಡಿ

1349
0
SHARE
ಬಾರ್ದಡ್ಡು ಗುತ್ತಿನಿಂದ ಶ್ರೀ ಕಡಂಬಿಲ್ತಾಯಿ, ಕೊಡಮಣಿತ್ತಾಯಿ ದೈವಗಳ ಭಂಡಾರ ಕ್ಷೇತ್ರಕ್ಕೆ ಆಗಮಿಸಿತು.

ಪುಂಜಾಲಕಟ್ಟೆ: ಪುನರ್‌ ನಿರ್ಮಾಣ ಗೊಂಡಿರುವ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಕಕ್ಯಪದವು ಶ್ರೀ ಕಡಂಬಿಲ್ತಾಯಿ, ಕೊಡಮಣಿತ್ತಾಯಿ, ಬ್ರಹ್ಮ ಬೈದರ್ಕಳ ಗರೋಡಿಯ ದೈವಗಳ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಎರಡನೇ ದಿನವಾದ ಶನಿವಾರ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಬ್ರಹ್ಮಶ್ರೀ ನಡ್ವಂತಾಡಿ ಬಾಲಕೃಷ್ಣ ಪಾಂಗಣ್ಣಾಯ ಮತ್ತು ಕಕ್ಯ ಶ್ರೀನಿವಾಸ ಅರ್ಮುಡ್ತಾಯರ ಮಾರ್ಗದರ್ಶನದಲ್ಲಿ ಕ್ಷೇತ್ರದ ಆಸ್ರಣ್ಣ ರಾಜೇಂದ್ರ ಅರ್ಮುಡ್ತಾಯರ ಮುಂದಾಳತ್ವದಲ್ಲಿ ಬೆಳಗ್ಗೆ ಸ್ವಸ್ತಿ ಪುಣ್ಯಾಹವಾಚನ, ನವಗ್ರಹಯಾಗ, ಸಂಜೀವನ, ಮೃತ್ಯುಂಜಯ ಯಾಗ ನಡೆಯಿತು. ಬಾರ್ದಡ್ಡು ಗುತ್ತಿನಿಂದ ಶ್ರೀ ಕಡಂಬಿಲ್ತಾಯಿ, ಕೊಡಮಣಿತ್ತಾಯಿ ದೈವಗಳ ಭಂಡಾರ ಕ್ಷೇತ್ರಕ್ಕೆ ಆಗಮಿಸಿತು. ಬಳಿಕ ಬಿಂಬ ಶುದ್ಧಿ ಕಲಾಶಾಭಿಷೇಕಗಳು ಮೊದಲಾದ ವೈದಿಕ ವಿಧಿ ವಿಧಾನಗಳು ನಡೆದವು.

ಮಾಜಿ ಸಚಿವ, ಬ್ರಹ್ಮ ಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಬಿ. ರಮಾನಾಥ ರೈ, ಅಧ್ಯಕ್ಷ ಸೇಸಪ್ಪ ಕೋಟ್ಯಾನ್‌, ಮೊಕ್ತೇಸರ ಕುಟುಂಬಸ್ಥರಾದ ರಾಜವೀರ್‌ ಜೈನ್‌, ಸಂಚಾಲಕರಾದ ಚಿತ್ತರಂಜನ್‌ ಕಂಕನಾಡಿ, ರೋಹಿನಾಥ ಪಾದೆ, ಕಾರ್ಯಾಧ್ಯಕ್ಷ ಬಿ. ಪದ್ಮಶೇಖರ ಜೈನ್‌, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ಮಾಯಿಲಪ್ಪ ಸಾಲ್ಯಾನ್‌, ವಾಸ್ತುಶಿಲ್ಪಿ ಪ್ರಮಲ್ ಕುಮಾರ್‌, ಪುನರ್‌ ನಿರ್ಮಾಣ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಎ. ಚೆನ್ನಪ್ಪ ಸಾಲ್ಯಾನ್‌ ಆಜೋಡಿ, ಉತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ಸಾಲ್ಯಾನ್‌ ಬಿತ್ತ, ವಿವಿಧ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಸಂಜೆ ಭೂವರಾಹ ಹೋಮ, ದುರ್ಗಾ ನಮಸ್ಕಾರ ಪೂಜೆ, ದೈವಗಳ ಮಂಚ ಬಿಂಬಗಳ ಅಧಿವಾಸ, ಧ್ವಜಸ್ತಂಭ ಅಧಿವಾಸ, ಅಧಿವಾಸ ಹೋಮಗಳು ನಡೆದವು. ಶ್ರೀ ಗುರು ಮಿತ್ರ ಸಮೂಹ, ಬೆಳ್ತಂಗಡಿ ಪ್ರಸ್ತುತಪಡಿಸಿದ ತುಲುವೆರೆ ಭೂಮಿ, ಕೋಡೆ-ಇನಿ-ಎಲ್ಲೆ (ತುಲುನಾಡ ದರ್ಶನ) ಹಾಗೂ ಕಿರು ರಂಗನಾಟಕ ನೇತ್ರೆ ಪ್ರದರ್ಶನಗೊಂಡಿತು.

ಅನ್ನಸಂತರ್ಪಣೆ
ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರೆ ಪ್ರಯುಕ್ತ ಎಲ್ಲ ದಿನಗಳಲ್ಲೂ ಮಧ್ಯಾಹ್ನ ಹಾಗೂ ರಾತ್ರಿ ಕ್ಷೇತ್ರಕ್ಕೆ ಭೇಟಿ ನೀಡುವ ಎಲ್ಲ ಭಕ್ತರಿಗೂ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಸೇವಕರು ಅನ್ನ ಸಂತರ್ಪಣೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಗರೋಡಿ ಕ್ಷೇತ್ರದ ಸುತ್ತುಮುತ್ತಲೂ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಸ್ಥಳೀಯ ಸಂಘಟನೆಗಳ ಸ್ವಯಂ ಸೇವಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ದೈವಸ್ಥಾನ ಹಾಗೂ ಸುತ್ತಮುತ್ತ ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿದೆ. ಅಲ್ಲಲ್ಲಿ ಸ್ವಾಗತ ಕಮಾನುಗಳನ್ನು ಅಳವಡಿಸಲಾಗಿದೆ.

LEAVE A REPLY

Please enter your comment!
Please enter your name here