ಪುಂಜಾಲಕಟ್ಟೆ: ಸರಪಾಡಿ ಗ್ರಾಮದ ಐತಿಹಾಸಿಕ ಹಲ್ಲಂಗಾರು ಕಟ್ಟೆಗೆ ಸೆಪ್ಟಂಬರ್ ತಿಂಗಳ ಸಂಕ್ರಮಣದ ಮರುದಿನ ಸಿಂಗೊಡೆಯಂದು ಶ್ರೀಕ್ಷೇತ್ರ ಕಾರಿಂಜದ ದೇವರು ಆಗಮಿಸಿ, ಇಲ್ಲಿನ ಸ್ಥಳೀಯ ಕಂಬಳದ ಗದ್ದೆಯಿಂದ ಬುಧವಾರ ಭತ್ತದ ತೆನೆಗಳನ್ನು ಕಾರಿಂಜ ಕ್ಷೇತ್ರಕ್ಕೆ ಕೊಂಡೊಯ್ಯಲಾಯಿತು.
ಈ ದಿನದಂದು ಪ್ರತಿವರ್ಷ ಶ್ರೀಕ್ಷೇತ್ರ ಕಾರಿಂಜದಿಂದ ಆಗಮಿಸುವ ಶ್ರೀ ದೇವರು ಬೇರೆ ಬೇರೆ ಕಟ್ಟೆಗಳಲ್ಲಿ ಪೂಜಿಸಲ್ಪಟ್ಟು, ಕೊನೆಗೆ ಹಲ್ಲಂಗಾರು ಕಟ್ಟೆಗೆ ಆಗಮಿಸುತ್ತಾರೆ. ಈ ಸಂದರ್ಭ ಸ್ಥಳೀಯ ನೂರಾರು ಭಕ್ತರು ದೇವರ ದರುಶನ ಪಡೆದು, ಗದ್ದೆಯಿಂದ ಭತ್ತದ ತೆನೆ ಪಡೆದು ಮನೆ ತುಂಬಿಸಿಕೊಳ್ಳುತ್ತಾರೆ. ಬಳಿಕ ಪ್ರತಿ ಮನೆಯಲ್ಲೂ ಸಂಪ್ರದಾಯದಂತೆ ಹೊಸ ಅಕ್ಕಿ ಊಟ ಮಾಡುವ ಕಾರ್ಯಕ್ರಮ ನಡೆಯುತ್ತದೆ.
ಹಲ್ಲಂಗಾರು ಕಟ್ಟೆಯ ಬಳಿ ಭತ್ತದ ಗದ್ದೆಯೊಂದಿದ್ದು, ಅಲ್ಲಿ ಪವಿತ್ರ ಕಲ್ಲೊಂದಿದೆ. ಅದು ವರ್ಷದಿಂದ ವರ್ಷಕ್ಕೆ ದೊಡ್ಡದಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಜತೆಗೆ ಬಂಗಾರದ ತೆನೆ ಬೆಳೆದಿತ್ತು ಎಂಬ ನಂಬಿಕೆಯಿದ್ದು, ಬುಧವಾರ ಶ್ರೀ ದೇವರ ಕಟ್ಟೆಯನ್ನು ಶುಚಿಗೊಳಿಸಿ ಹೂವುಗಳಿಂದ ಸಿಂಗರಿಸಲಾಗಿತ್ತು. ಈ ಕಾರ್ಯದಲ್ಲಿ ನೂರಾರು ಭಕ್ತರು ಪಾಲ್ಗೊಂಡು ಶ್ರೀ ದೇವರ ದರುಶನ ಪಡೆದು ಪುನೀತರಾದರು.